
ಜೈಪುರ: ಕ್ಷುಲ್ಲಕ ವಿಚಾರಕ್ಕೆ ಆರಂಭವಾದ ಗಲಾಟೆ ವಿಕೋಪಕ್ಕೆ ತಿರುಗಿ ವ್ಯಕ್ತಿ ಮೇಲೆ ಸ್ಕಾರ್ಪಿಯೋ ಚಾಲಕ ಕಾರು ಹತ್ತಿಸಿರುವ ಭೀಕರ ವಿಡಿಯೋ ವೈರಲ್ ಆಗುತ್ತಿದೆ.
ರಾಜಸ್ಥಾನದ ಜೈಪುರದಲ್ಲಿ ಶನಿವಾರ ನಡೆದ ರಸ್ತೆ ಗಲಾಟೆಯಲ್ಲಿ BJP ಪಕ್ಷದ ಧ್ವಜವಿದ್ದ ಎಸ್‌ಯುವಿ ಕಾರು ಡಿಕ್ಕಿ ಹೊಡೆದು 35 ವರ್ಷದ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತ ವ್ಯಕ್ತಿಯನ್ನು ಉತ್ತರ ಪ್ರದೇಶದ ನಿವಾಸಿ ಚಂದ್ರಶೇಖರ್ ಎಂದು ಗುರುತಿಸಲಾಗಿದ್ದು, ಆತ ದಿನಗೂಲಿ ಕಾರ್ಮಿಕನಾಗಿ ಜೈಪುರದಲ್ಲಿ ಕೆಲಸ ಮಾಡುತ್ತಿದ್ದ ಎಂದು ಹೇಳಲಾಗಿದೆ.
ಶನಿವಾರ ಸಂಜೆ ಎಸ್‌ಯುವಿ (ಮಹೀಂದ್ರಾ ಸ್ಕಾರ್ಪಿಯೋ) ಮತ್ತು ಕಾರು (ಮಾರುತಿ ಸುಜುಕಿ ಬ್ರೆಝಾ) ನಡುವೆ ಡಿಕ್ಕಿ ಸಂಭವಿಸಿತ್ತು. ಬಳಿಕ ಎರಡೂ ಕಾರಿನ ಚಾಲಕರು ಪರಸ್ಪರ ವಾಕ್ಸಮರ ನಡೆಸಿದರು. ಬಳಿಕ ಅದು ಘರ್ಷಣೆಗೆ ಕಾರಣವಾಗಿದೆ ಎಂದು ಪಶ್ಚಿಮ ವಿಭಾಗದ ಹೆಚ್ಚುವರಿ ಡಿಸಿಪಿ ಅಲೋಕ್ ಸಿಂಘಾಲ್ ತಿಳಿಸಿದ್ದಾರೆ.
'ಸ್ಕಾರ್ಪಿಯೋ ಕಾರಿನಲ್ಲಿದ್ದ ನಾಲ್ಕರಿಂದ ಐದು ಯುವಕರು ಸಿಕಾರ್ ಹೆದ್ದಾರಿಯ ಕಡೆಗೆ ಹೋಗುತ್ತಿದ್ದಾಗ, ಅವರ ವಾಹನವು ರಸ್ತೆ ಸಂಖ್ಯೆ 5 ರ ಖತುಶ್ಯಾಮ್ಜಿ ದೇವಸ್ಥಾನದ ಬಳಿ ಬ್ರೆಝಾ ಕಾರಿಗೆ ಡಿಕ್ಕಿ ಹೊಡೆದಿದೆ.
ಡಿಕ್ಕಿಯ ನಂತರ, ಯುವಕರು ಸ್ಕಾರ್ಪಿಯೋದಿಂದ ಇಳಿದು, ಕೋಲುಗಳನ್ನು ಹೊರತೆಗೆದು, ಇನ್ನೊಂದು ಕಾರಿನ ಗಾಜುಗಳನ್ನು ಒಡೆದು, ಚಾಲಕನೊಂದಿಗೆ ಜಗಳವಾಡಿದರು.
ನೋಡ ನೋಡುತ್ತಲೇ ಯುವಕರ ದಾಳಿ ಉಲ್ಬಣಗೊಂಡಿತು, ನಂತರ ಸ್ಥಳೀಯರು ಒಟ್ಟುಗೂಡಿ ಅವರನ್ನು ಎದುರಿಸಿದರು ಎಂದು ಹೇಳಿದ್ದಾರೆ.
ಅಂತೆಯೇ "ಎಸ್‌ಯುವಿಯಲ್ಲಿದ್ದ ಗುಂಪು ತಪ್ಪಿಸಿಕೊಳ್ಳಲು ಪ್ರಯತ್ನಿಸಿದಾಗ, ಜನರು ಅವರ ವಾಹನದ ಮುಂದೆ ನಿಂತು ಅವರ ದಾರಿಯನ್ನು ತಡೆಯಲು ಪ್ರಯತ್ನಿಸಿದರು.
ಅವ್ಯವಸ್ಥೆಯ ನಡುವೆ, ಜನಸಂದಣಿಯಲ್ಲಿದ್ದ ಕಾರ್ಮಿಕ ಚಂದ್ರಶೇಖರ್ ರಸ್ತೆಗೆ ಬಿದ್ದರು. ನಂತರ, ಸ್ಕಾರ್ಪಿಯೋದಲ್ಲಿದ್ದ ಯುವಕರು ವಾಹನವನ್ನು ವೇಗವಾಗಿ ಚಲಾಯಿಸಿ ಅವರ ಮೇಲೆ ಹರಿಸಿ ಸ್ಥಳದಿಂದ ಪರಾರಿಯಾಗಿದ್ದಾರೆ" ಎಂದು ಪೊಲೀಸರು ತಿಳಿಸಿದ್ದಾರೆ.
ತೀವ್ರವಾಗಿ ಗಾಯಗೊಂಡ ಕಾರ್ಮಿಕ ಚಂದ್ರಶೇಖರ್ ನನ್ನು ಸಮೀಪದ ಕನ್ವಾಟಿಯಾ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಆತ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ.
Advertisement