
ಮುಂಬೈ: ವರುಣನ ಅಬ್ಬರಕ್ಕೆ ಮಹಾರಾಷ್ಟ್ರ ರಾಜ್ಯ ತತ್ತರಿಸಿದೆ. ಕಳೆದ ಎರಡು ದಿನಗಳಿಂದ ಅನೇಕ ಜಿಲ್ಲೆಗಳಲ್ಲಿ ನಿರಂತರವಾಗಿ ಭಾರಿ ಮಳೆಯಾಗುತ್ತಿದ್ದು, ಆರು ಜನರು ಸಾವನ್ನಪ್ಪಿದ್ದು, ನೂರಾರು ಮಂದಿ ಮನೆ-ಮಠ ಕಳೆದುಕೊಂಡು ನಿರಾಶ್ರಿತರಾಗಿದ್ದಾರೆ. ಮಂಗಳವಾರ ರಾಜಧಾನಿ ಮುಂಬೈಯಲ್ಲಿಯೂ ಧಾರಾಕಾರ ಮಳೆಯಾಗುತ್ತಿದ್ದು, ಜನಜೀವನ ಸಂಪೂರ್ಣವಾಗಿ ಅಸ್ತವ್ಯಸ್ತವಾಗಿದೆ.
ವಿಪತ್ತು ನಿರ್ವಹಣಾ ಇಲಾಖೆಯೊಂದಿಗೆ ಪ್ರವಾಹ ಪರಿಸ್ಥಿತಿಯನ್ನು ಅವಲೋಕಿಸಿದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ಮುಂಬೈ, ಥಾಣೆ, ರಾಯಗಡ, ರತ್ನಗಿರಿ ಮತ್ತು ಸಿಂಧುದುರ್ಗ ಜಿಲ್ಲೆಗಳಿಗೆ ಮುಂದಿನ 48 ಗಂಟೆಗಳು ನಿರ್ಣಾಯಕ ಎಂದು ಹೇಳಿದ್ದಾರೆ.
ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ: ಮುಂಬೈಯಲ್ಲಿ ಸೋಮವಾರ ರಾತ್ರಿಯಿಡೀ ಸುರಿದ ಮಳೆ ಇಂದು ಕೂಡಾ ಮುಂದುವರೆದಿದ್ದು, ತಗ್ಗು ಪ್ರದೇಶಗಳು ಜಲಾವೃತಗೊಂಡಿವೆ. ಉಪನಗರ ರೈಲು ಸೇವೆಯ ಮೇಲೆ ಪರಿಣಾಮ ಬೀರಿದ್ದು, ಬೃಹನ್ ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (BMC) ಎಲ್ಲಾ ಸರ್ಕಾರಿ ಮತ್ತು ಅರೆ ಸರ್ಕಾರಿ ಕಚೇರಿಗಳಿಗೆ ರಜೆ ಘೋಷಿಸಲಾಗಿದೆ.
ಬೆಳಗ್ಗೆ 11ರಿಂದ ಸಂಜೆ 5ರವರೆಗೆ ಕಾರ್ಯನಿರ್ವಹಿಸುವ ಬಾಂಬೆ ಹೈಕೋರ್ಟ್ ಭಾರೀ ಮಳೆಯಿಂದಾಗಿ 12.30ರವರೆಗೆ ಮಾತ್ರ ಕಾರ್ಯನಿರ್ವಹಿಸಿತು. ಮುಂಬೈ ಮತ್ತು ನೆರೆಯ ಜಿಲ್ಲೆಗಳ ಪ್ರತ್ಯೇಕ ಸ್ಥಳಗಳಲ್ಲಿ ಇಂದು ಭಾರಿಯ ಹವಾಮಾನ ಇಲಾಖೆಯ 'ರೆಡ್ ಅಲರ್ಟ್' ಎಚ್ಚರಿಕೆ ಹಿನ್ನೆಲೆಯಲ್ಲಿ ಶಾಲೆಗಳು ಮತ್ತು ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.
ಸ್ಥಳೀಯ ರೈಲು ಸೇವೆಯಲ್ಲಿ ವ್ಯತ್ಯಯ, ಕಾಲೇಜುಗಳಿಗೆ ರಜೆ ಘೋಷಣೆ
ಉನ್ನತ ಶಿಕ್ಷಣ ನಿರ್ದೇಶನಾಲಯವು ಕೊಂಕಣ ಪ್ರದೇಶದ ಎಲ್ಲಾ ಕಾಲೇಜುಗಳಿಗೆ ರಜೆ ಘೋಷಿಸಿದ್ದು, ಸ್ಥಳೀಯ ರೈಲು ಸೇವೆಯಲ್ಲಿ ವ್ಯತ್ಯಯವಾಗಿದೆ. ಕೆಲವೆಡೆ ರಸ್ತೆ ಜಲಾವೃತವಾಗಿರುವುದರಿಂದ ಬೃಹನ್‌ಮುಂಬೈ ಎಲೆಕ್ಟ್ರಿಕ್ ಸಪ್ಲೈ ಅಂಡ್ ಟ್ರಾನ್ಸ್‌ಪೋರ್ಟ್ (ಬೆಸ್ಟ್) ಸಂಸ್ಥೆಯ ಬಸ್ ಸೇವೆಗಳ ಮಾರ್ಗ ಬದಲಾಯಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಭಾರೀ ಮಳೆಯ ನಂತರ ಹಳಿಗಳು ಮುಳುಗಿದ ಕಾರಣ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್ (CSMT) ಮತ್ತು ಕುರ್ಲಾ ನಿಲ್ದಾಣಗಳ ನಡುವಿನ ಹಾರ್ಬರ್ ಮಾರ್ಗದಲ್ಲಿ ಕೆಲ ರೈಲು ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ.
ಮುಂಬೈನ ಉಪನಗರದಲ್ಲಿರುವ ಕುರ್ಲಾದಿಂದ ಸುಮಾರು 350 ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ ಎಂದು ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರ ಕಚೇರಿ ತಿಳಿಸಿದೆ. ಮುಂಬೈನ ಹಲವಾರು ಭಾಗಗಳಲ್ಲಿ ಕಳೆದ 24 ಗಂಟೆಗಳಲ್ಲಿ 200 ಮಿ.ಮೀ ಗಿಂತ ಹೆಚ್ಚು ಮಳೆಯಾಗಿದೆ ಎಂದು IMD ತಿಳಿಸಿದೆ.
ಕಳೆದೆರಡು ದಿನಗಳಲ್ಲಿ ಆರು ಜನರ ಸಾವು:
ಕಳೆದೆರಡು ದಿನಗಳಲ್ಲಿ ರಾಜ್ಯದಲ್ಲಿ ಮಳೆ ಸಂಬಂಧಿತ ಘಟನೆಗಳಲ್ಲಿ ಕನಿಷ್ಠ ಆರು ಮಂದಿ ಸಾವನ್ನಪ್ಪಿದ್ದಾರೆ. ಕಳೆದ ಎರಡು ದಿನಗಳಲ್ಲಿ ನಾಂದೇಡ್ ಜಿಲ್ಲೆಯ ಪ್ರವಾಹ ಪೀಡಿತ ಗ್ರಾಮಗಳಿಂದ 290 ಕ್ಕೂ ಹೆಚ್ಚು ಜನರನ್ನು ರಕ್ಷಿಸಲಾಗಿದೆ ಮತ್ತು ರಾಜ್ಯ ವಿಪತ್ತು ನಿರ್ವಹಣಾ ಪಡೆ (SDRF) ಮತ್ತು ಸೇನೆಯನ್ನು ಈ ಪ್ರದೇಶದಲ್ಲಿ ನಿಯೋಜಿಸಲಾಗಿದೆ.
ಮುಜ್ಖೇಡ್-ಉದ್ಗೀರ್ ರಸ್ತೆಯಲ್ಲಿ ಬೆಳಗಿನ ಜಾವ 1.40ರ ಸುಮಾರಿಗೆ ಆಟೊರಿಕ್ಷಾ ಮತ್ತು ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಏಳು ಮಂದಿ ನೀರು ಪಾಲಾಗಿದ್ದರು. ಸ್ಥಳೀಯ ರಕ್ಷಣಾ ತಂಡಗಳು ಮೂವರು ಪುರುಷರನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದು, ಒಬ್ಬ ಪುರುಷ ಮತ್ತು ಮೂವರು ಮಹಿಳೆಯರಿಗಾಗಿ ಹುಡುಕಾಟ ನಡೆಯುತ್ತಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಹವಾಮಾನಶಾಸ್ತ್ರಜ್ಞರ ಪ್ರಕಾರ, ಬಂಗಾಳಕೊಲ್ಲಿಯಲ್ಲಿ ಕಡಿಮೆ ಒತ್ತಡದ ಪ್ರದೇಶ ಮತ್ತು ಮಾನ್ಸೂನ್ ಮಾರುತಗಳು ಬಲಗೊಂಡಿದ್ದರಿಂದ ಧಾರಾಕಾರ ಮಳೆಯಾಗಿದೆ. ಇದರಿಂದ ಕೊಂಕಣ, ಮಧ್ಯ ಮಹಾರಾಷ್ಟ್ರ ಸುತ್ತಮುತ್ತ ಅತಿ ಹೆಚ್ಚು ಭಾರೀ ಮಳೆಗೆ ಕಾರಣವಾಗಿದೆ. ಆದರೆ ರಾಜ್ಯದ ಉಳಿದ ಭಾಗಗಳಲ್ಲಿ ಸಾಧಾರಣ ಮಳೆಯಾಗಿದೆ" ಎಂದು ಪುಣೆಯ ಭಾರತೀಯ ಹವಾಮಾನ ಇಲಾಖೆಯ ಹಿರಿಯ ವಿಜ್ಞಾನಿ ಎಸ್‌ಡಿ ಸನಪ್ ಹೇಳಿದ್ದಾರೆ.
Advertisement