
ವಾಣಿಜ್ಯ ರಾಜಧಾನಿ ಮುಂಬೈಯಲ್ಲಿ ಕಳೆದ ರಾತ್ರಿಯಿಂದ ಸತತವಾಗಿ ಧಾರಾಕಾರ ಮಳೆಯಾಗುತ್ತಿದ್ದು ಇಂದು ಬೆಳಗ್ಗೆ ಜನರು ಮನೆಯಿಂದ ಹೊರಗೆ ಬರಲಾಗದ ಪರಿಸ್ಥಿತಿ ಉಂಟಾಗಿದೆ.
ರಾತ್ರಿಯಿಡೀ ನಿರಂತರವಾಗಿ ಸುರಿದ ಮಳೆಯಿಂದಾಗಿ ಮುಂಬೈ ನಗರವು ಸ್ತಬ್ಧವಾಗಿದೆ. ರಸ್ತೆಗಳು ಮುಳುಗಿ, ಸ್ಥಳೀಯ ರೈಲು ಸೇವೆಗಳು ಅಸ್ತವ್ಯಸ್ತಗೊಂಡಿವೆ. ನಗರ ಮತ್ತು ನೆರೆಯ ಕೊಂಕಣ ಜಿಲ್ಲೆಗಳಾದ್ಯಂತ ಶಾಲಾ-ಕಾಲೇಜುಗಳಿಗೆ, ಆಫೀಸುಗಳಿಗೆ ರಜೆ ನೀಡಲಾಗಿದೆ.
ಭಾರತೀಯ ಹವಾಮಾನ ಇಲಾಖೆ (IMD) ಮುಂಬೈ ಮತ್ತು ಪಕ್ಕದ ಪ್ರದೇಶಗಳಿಗೆ ರೆಡ್ ಅಲರ್ಟ್ ಘೋಷಣೆ ಮಾಡಿತ್ತು. ಅತಿ ಹೆಚ್ಚು ಮಳೆಯಾಗುವ ಮುನ್ಸೂಚನೆ ನೀಡಿತ್ತು. ಹಲವಾರು ಪ್ರದೇಶಗಳಲ್ಲಿ ಕೇವಲ 21 ಗಂಟೆಗಳಲ್ಲಿ 150 ಮಿ.ಮೀ.ಗಿಂತ ಹೆಚ್ಚು ಮಳೆಯಾಗಿದೆ.
ಗಾಂಧಿ ಮಾರುಕಟ್ಟೆ, ದಾದರ್, ಚೆಂಬೂರ್, ಬೊರಿವಲಿ, ಅಂಧೇರಿ ಮತ್ತು ಸಿಯಾನ್‌ನಂತಹ ತಗ್ಗು ಪ್ರದೇಶಗಳು ಭಾರೀ ಪ್ರಮಾಣದಲ್ಲಿ ಜಲಾವೃತಗೊಂಡಿದ್ದು, ತೀವ್ರ ಸಂಚಾರ ದಟ್ಟಣೆ ಉಂಟಾಗಿದೆ. ಅನೇಕ ಉಪನಗರ ಮಾರ್ಗಗಳಲ್ಲಿ ರೈಲು ಸೇವೆಗಳು ಸಹ ವಿಳಂಬವಾಗಿವೆ.
ಬೆಂಗಳೂರು ನಗರದಲ್ಲಿ ಇಂದು ನಸುಕಿನ ಜಾವ 5 ರಿಂದ 6 ಗಂಟೆಯವರೆಗೆ ವಿಶೇಷವಾಗಿ ತೀವ್ರವಾದ ಮಳೆ ಸುರಿದಿದೆ. ಮುಂಬೈ ಸೆಂಟ್ರಲ್, ಗ್ರಾಂಟ್ ರೋಡ್, ದಾದರ್, ವರ್ಲಿ ಮತ್ತು ಮಲಬಾರ್ ಹಿಲ್‌ನಂತಹ ಪ್ರದೇಶಗಳಲ್ಲಿ ಕೇವಲ ಒಂದು ಗಂಟೆಯಲ್ಲಿ 40 ಮಿ.ಮೀ. ಮತ್ತು 65 ಮಿ.ಮೀ. ನಡುವೆ ಮಳೆಯಾಗಿದೆ.
ಮುನ್ನೆಚ್ಚರಿಕೆ ಕ್ರಮವಾಗಿ ಪಾಲ್ಘರ್, ಥಾಣೆ, ರಾಯಗಢ, ರತ್ನಗಿರಿ ಮತ್ತು ಸಿಂಧುದುರ್ಗದ ಎಲ್ಲಾ ಕಾಲೇಜುಗಳಿಗೆ ಉನ್ನತ ಶಿಕ್ಷಣ ನಿರ್ದೇಶನಾಲಯವು ರಜೆ ಘೋಷಿಸಿದೆ.
ಆಫೀಸು ಕಚೇರಿಗಳಿಗೆ ರಜೆ ಘೋಷಣೆ, ರೆಡ್ ಅಲರ್ಟ್
ಅಗತ್ಯ/ತುರ್ತು ಸೇವೆಗಳನ್ನು ಹೊರತುಪಡಿಸಿ, ಬೃಹನ್ ಮುಂಬೈ ಮಹಾನಗರ ಪಾಲಿಕೆ ತನ್ನ ವ್ಯಾಪ್ತಿಯಲ್ಲಿರುವ ಎಲ್ಲಾ ಖಾಸಗಿ ಕಚೇರಿಗಳು ಮತ್ತು ಸಂಸ್ಥೆಗಳಿಗೆ ಇಂದು ರಜೆ ಘೋಷಿಸಿದೆ. ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (BMC) ಪ್ರದೇಶದಲ್ಲಿ (ಮುಂಬೈ ನಗರ ಮತ್ತು ಉಪನಗರಗಳು) ಇಂದು ಅತ್ಯಂತ ಭಾರೀ ಮಳೆಯಾಗುವ ಸಾಧ್ಯತೆ ಇರುವುದರಿಂದ ಭಾರತ ಹವಾಮಾನ ಇಲಾಖೆ (ಐಎಂಡಿ) ರೆಡ್ ಅಲರ್ಟ್ ನೀಡಿದೆ.
ಸಂಬಂಧಪಟ್ಟ ಕಚೇರಿಗಳು ಮತ್ತು ಸಂಸ್ಥೆಗಳು ತಮ್ಮ ಉದ್ಯೋಗಿಗಳಿಗೆ ಅವರ ಕೆಲಸದ ಸ್ವರೂಪವನ್ನು ಅವಲಂಬಿಸಿ ಮನೆಯಿಂದಲೇ ಕೆಲಸ ಮಾಡಲು ತಕ್ಷಣ ಸೂಚನೆ ನೀಡಬೇಕು ಎಂದು ಆದೇಶ ನೀಡಲಾಗಿದೆ.
ಮುಂಬೈ ಉಪನಗರಗಳಲ್ಲಿ 200 ಮಿ.ಮೀ ಮಳೆ, ವಿಖ್ರೋಲಿಯಲ್ಲಿ ಅತಿ ಹೆಚ್ಚು
ಕಳೆದ 24 ಗಂಟೆಗಳಲ್ಲಿ ಮುಂಬೈನ ಹಲವಾರು ಭಾಗಗಳಲ್ಲಿ 200 ಮಿ.ಮೀ ಗಿಂತ ಹೆಚ್ಚು ಮಳೆಯಾಗಿದ್ದು, ಪೂರ್ವ ಉಪನಗರಗಳ ವಿಖ್ರೋಲಿಯಲ್ಲಿ 255.5 ಮಿ.ಮೀ ಅತಿ ಹೆಚ್ಚು ಮಳೆಯಾಗಿದೆ ಎಂದು ಭಾರತ ಹವಾಮಾನ ಇಲಾಖೆ ತಿಳಿಸಿದೆ.
ಇಂದು ಬೆಳಗ್ಗೆ 8.30 ಕ್ಕೆ ಕೊನೆಗೊಂಡ 24 ಗಂಟೆಗಳ ಅವಧಿಯಲ್ಲಿ, ಸಾಂತಾಕ್ರೂಜ್ ವೀಕ್ಷಣಾಲಯ (ಪಶ್ಚಿಮ ಉಪನಗರಗಳ ಪ್ರತಿನಿಧಿ) 238.2 ಮಿ.ಮೀ ಮಳೆಯನ್ನು ದಾಖಲಿಸಿದೆ, ಕೊಲಾಬಾ ವೀಕ್ಷಣಾಲಯ (ದಕ್ಷಿಣ ಮುಂಬೈನಲ್ಲಿ) 110.4 ಮಿ.ಮೀ ಮಳೆಯನ್ನು ದಾಖಲಿಸಿದೆ.
ವಿಖ್ರೋಲಿಯಲ್ಲಿ 255.5 ಮಿ.ಮೀ ಅತಿ ಹೆಚ್ಚು ಮಳೆಯಾಗಿದ್ದು, ಬೈಕುಲ್ಲಾ 241 ಮಿ.ಮೀ, ಜುಹು 221.5 ಮಿ.ಮೀ ಮತ್ತು ಬಾಂದ್ರಾ 211 ಮಿ.ಮೀ ಮಳೆಯಾಗಿದೆ ಎಂದು ಐಎಂಡಿ ತಿಳಿಸಿದೆ. ಮಹಾಲಕ್ಷ್ಮಿ ಪ್ರದೇಶದಲ್ಲಿ 72.5 ಮಿ.ಮೀ ಕಡಿಮೆ ಮಳೆಯಾಗಿದೆ.
Advertisement