ನೀಲಿ ಡ್ರಮ್ ನಲ್ಲಿ ಮತ್ತೊಂದು ಶವ ಪತ್ತೆ: Lover ಜೊತೆ ಸೇರಿ ಪತಿಯ ಕಥೆ ಮುಗಿಸಿದ ಪತ್ನಿ, ಮೇಲ್ಛಾವಣಿಯಲ್ಲಿ ದುರ್ನಾತ! Video
ಜೈಪುರ: ಮೀರತ್ ಹತ್ಯಾ ಪ್ರಕರಣದ ಬಳಿಕ ನೀಲಿ ಡ್ರಮ್ ಹೆಸರು ಕೇಳಿದರೆ ಪುರುಷರು ಬೆಚ್ಚಿ ಬೀಳುವಂತಾಗಿತ್ತು. ಇದೀಗ ಅಂತಹುದೇ ಮತ್ತೊಂದು ಪ್ರಕರಣ ವರದಿಯಾಗಿದೆ.
ಮನೆಯ ಮೇಲ್ಛಾವಣಿ ಮೇಲೆ ನೀಲಿ ಬಣ್ಣದ ಡ್ರಮ್ ನಲ್ಲಿ ಪುರುಷನೋರ್ವನ ಶವ ಪತ್ತೆಯಾಗಿದ್ದು, ರಾಜಸ್ಥಾನದ ಖೈರ್ತಾಲ್-ತಿಜಾರಾ ಜಿಲ್ಲೆಯ ಕಿಶನ್‌ಗಢಬಾಸ್‌ನ ಆದರ್ಶ ಕಾಲೋನಿಯಲ್ಲಿ ಡ್ರಮ್‌ನಲ್ಲಿ ಕೊಳೆತ ರೀತಿಯಲ್ಲಿ ವ್ಯಕ್ತಿಯೊಬ್ಬರ ಶವ ಪತ್ತೆಯಾಗಿದೆ.
ಆಗಸ್ಟ್ 17, 2025ರಂದು ಪೊಲೀಸ್ ತನಿಖೆಯಲ್ಲಿ ಈ ಕೇಸ್ ಬೆಳಕಿಗೆ ಬಂದಿದ್ದು, ಬಾಡಿಗೆ ಮನೆಯ ಮೇಲ್ಛಾವಣಿಯ ಮೇಲಿರುವ ನೀಲಿ ಡ್ರಮ್‌ನಲ್ಲಿ ವ್ಯಕ್ತಿಯೊಬ್ಬರ ಕೊಳೆತ ಶವ ಪತ್ತೆಯಾಗಿದೆ.
ಮೃತ ವ್ಯಕ್ತಿಯನ್ನು ಉತ್ತರ ಪ್ರದೇಶದ ಶಹಜಹಾನ್‌ಪುರ ಜಿಲ್ಲೆಯ ನವಾಡಿಯಾ ನವಾಜ್‌ಪುರ ಗ್ರಾಮದ ನಿವಾಸಿ ಹಂಸ್ ರಾಮ್ ಉರ್ಫ್ ಸೂರಜ್ ಎಂದು ಗುರುತಿಸಲಾಗಿದೆ. ಇತ್ತ ಮೃತನ ಪತ್ನಿ ಸುನೀತಾ, ಮೂವರು ಮಕ್ಕಳಾದ ಹರ್ಷಲ್, ನಂದಿನಿ, ಗೋಲು ಮತ್ತು ಮನೆ ಮಾಲೀಕನ ಮಗ ಜಿತೇಂದ್ರ ಶನಿವಾರದಿಂದ ಕಾಣೆಯಾಗಿದ್ದಾರೆ.
ಪೊಲೀಸ್ ಮೂಲಗಳ ಪ್ರಕಾರ ಹಂಸ್ರಾಮ್ ಕಳೆದ ಒಂದೂವರೆ ತಿಂಗಳಿನಿಂದ ಆದರ್ಶ ಕಾಲೋನಿಯಲ್ಲಿ ಬಾಡಿಗೆ ಮನೆಯ ಮೇಲ್ಛಾವಣಿಯ ಕೊಠಡಿಯಲ್ಲಿ ಪತ್ನಿ ಮತ್ತು ಮೂವರು ಮಕ್ಕಳೊಂದಿಗೆ ವಾಸಿಸುತ್ತಿದ್ದ. ಅವನು ಸ್ಥಳೀಯ ಇಟ್ಟಿಗೆ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ.
ಡ್ರಮ್ ನಲ್ಲಿ ಶವಪತ್ತೆ
ಶನಿವಾರ ಜನ್ಮಾಷ್ಟಮಿ ಆಚರಣೆಯ ಬಳಿಕ ಮನೆ ಮಾಲೀಕನ ಪತ್ನಿ ಮಿಥಿಲೇಶ್, ಮೇಲ್ಛಾವಣಿಯಿಂದ ದುರ್ವಾಸನೆ ಬರುತ್ತಿರುವುದನ್ನು ಗಮನಿಸಿದ್ದಾರೆ. ಅಲ್ಲಿದ್ದ ಡ್ರಮ್ ಮೇಲೆ ದೊಡ್ಡ ಕಲ್ಲನ್ನಿಡಲಾಗಿತ್ತು. ಪೊಲೀಸರಿಗೆ ಮಾಹಿತಿ ತಿಳಿದ ನಂತರ, ಕಿಶನ್‌ಗಢಬಾಸ್ ಡಿಎಸ್‌ಪಿ ರಾಜೇಂದ್ರ ಸಿಂಗ್ ನಿರ್ವಾನ್, ಠಾಣೆಯ ಇನ್‌ಚಾರ್ಜ್ ಜಿತೇಂದ್ರ ಸಿಂಗ್ ಶೇಖಾವತ್ ಮತ್ತು ಎಎಸ್‌ಐ ಜ್ಞಾನ್ ಚಂದ್ ತಂಡದೊಂದಿಗೆ ಸ್ಥಳಕ್ಕೆ ಧಾವಿಸಿದ್ದಾರೆ.
ಡ್ರಮ್ ತೆರೆದಾಗ, ಹಂಸ್ರಾಮ್‌ನ ಶವವು ಕೊಳೆತ ಸ್ಥಿತಿಯಲ್ಲಿ, ಗಂಟಲಿನ ಮೇಲೆ ಹರಿತ ಆಯುಧದಿಂದ ಗಾಯಗೊಂಡಿರುವುದು ಕಂಡುಬಂದಿದೆ. ಶವದ ಮೇಲೆ ಉಪ್ಪು ಹಾಕಲಾಗಿತ್ತು, ಇದು ಕೊಳೆಯುವಿಕೆಯನ್ನು ವೇಗಗೊಳಿಸಲು ಮಾಡಿದ ಕೃತ್ಯವೆಂದು ಪೊಲೀಸರು ಶಂಕಿಸಿದ್ದಾರೆ.
ಪೊಲೀಸರು ಶವವನ್ನು ಮರಣೋತ್ತರ ಪರೀಕ್ಷೆಗೆ ಕಿಶನ್‌ಗಢಬಾಸ್ ಸರಕಾರಿ ಆಸ್ಪತ್ರೆಗೆ ಕಳುಹಿಸಿದ್ದಾರೆ. ಕೊಲೆ ಪ್ರಕರಣ ದಾಖಲಿಸಿರುವ ಪೊಲೀಸರು, ಕಾಣೆಯಾದ ಸುನೀತಾ, ಆಕೆಯ ಮಕ್ಕಳು ಮತ್ತು ಜಿತೇಂದ್ರ ಶರ್ಮಾರನ್ನು ಹುಡುಕಲು ಶೋಧ ಕಾರ್ಯ ಆರಂಭಿಸಿದ್ದಾರೆ.
ಪತ್ನಿ-ಜಿತೇಂದ್ರ ನಡುವೆ ಅಕ್ರಮ ಸಂಬಂಧ
ಡಿಎಸ್‌ಪಿ ರಾಜೇಂದ್ರ ಸಿಂಗ್ ಪ್ರಕಾರ, ಹಂಸ್ರಾಮ್ ಮದ್ಯದ ಚಟ ಹೊಂದಿದ್ದು, ಜಿತೇಂದ್ರ ಜೊತೆ ಆಗಾಗ ಕುಡಿಯುತ್ತಿದ್ದ. ಜಿತೇಂದ್ರನ ಪತ್ನಿ 12 ವರ್ಷಗಳ ಹಿಂದೆ ನಿಧನರಾಗಿದ್ದರು.
ಪ್ರಾಥಮಿಕ ತನಿಖೆಯಲ್ಲಿ ಸುನೀತಾ ಮತ್ತು ಜಿತೇಂದ್ರ ನಡುವೆ ಸಂಬಂಧವಿತ್ತು ಎಂಬ ಶಂಕೆ ವ್ಯಕ್ತವಾಗಿದ್ದು, ಇದು ಕೊಲೆಗೆ ಕಾರಣವಾಗಿರಬಹುದೆಂದು ಪೊಲೀಸರು ಭಾವಿಸಿದ್ದಾರೆ. ಫೋರೆನ್ಸಿಕ್ ತಂಡವು ಸ್ಥಳದಲ್ಲಿ ಸಾಕ್ಷ್ಯ ಸಂಗ್ರಹಿಸುತ್ತಿದೆ ಎಂದು ಹೇಳಿದ್ದಾರೆ.
ಖೈರ್ತಾಲ್-ತಿಜಾರಾ ಎಸ್‌ಪಿ ಮನೀಶ್ ಚೌಧರಿ, "ಇದೊಂದು ಯೋಜಿತ ಕೊಲೆಯಾಗಿದ್ದು, ಶೀಘ್ರದಲ್ಲೇ ಆರೋಪಿಗಳನ್ನು ಬಂಧಿಸಲಾಗುವುದು" ಎಂದು ಭರವಸೆ ನೀಡಿದ್ದಾರೆ. ಕೊಲೆಯ ಹಿಂದಿನ ನಿಖರ ಕಾರಣ ಮತ್ತು ಕಾಣೆಯಾದವರ ಗುರುತನ್ನು ಪತ್ತೆ ಹಚ್ಚಲು ಪೊಲೀಸರ ತನಿಖೆ ನಡೆಯುತ್ತಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಮೀರತ್ ಪ್ರಕರಣ
ಇನ್ನು ಹಾಲಿ ಪ್ರಕರಣವು ಮೀರತ್ ಅಪರಾಧ ಘಟನೆಯನ್ನು ನೆನಪಿಸುವಂತಿದೆ. ಇದೇ ಮಾರ್ಚ್ 2025ರಲ್ಲಿ ಉತ್ತರ ಪ್ರದೇಶದ ಮೀರತ್‌ನಲ್ಲಿ ಇಂತಹುದೇ ಕೊಲೆಯಾಗಿತ್ತು. ಮೀರತ್‌ನಲ್ಲಿ, ವ್ಯಾಪಾರಿ ನೌಕಾಪಡೆಯ ಅಧಿಕಾರಿ ಸೌರಭ್ ರಜಪೂತ್‌ನನ್ನು ಆತನ ಪತ್ನಿ ಮುಸ್ಕಾನ್ ರಸ್ತೋಗಿ ಮತ್ತು ಆಕೆಯ ಪ್ರೇಮಿ ಸಾಹಿಲ್ ಕೊಂದು, ಶವವನ್ನು ಡ್ರಮ್‌ನಲ್ಲಿ ತುಂಬಿ, ಸಿಮೆಂಟ್‌ನಿಂದ ಮುಚ್ಚಿದ್ದರು. ಮುಸ್ಕಾನ್ ಳ ಪುತ್ರಿ ನೀಡಿದ ಮಾಹಿತಿ ಮೇರೆಗೆ ಪ್ರಕರಣ ಬಹಿರಂಗವಾಗಿತ್ತು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ