
ನವದೆಹಲಿ: ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಅವರ ಸಿವಿಲ್ ಲೈನ್ಸ್ ರಸ್ತೆಯಲ್ಲಿರುವ ಅಧಿಕೃತ ನಿವಾಸದಲ್ಲಿ ಇಂದು ಬುಧವಾರ ಬೆಳಗ್ಗೆ ನಡೆದ ಜನಸ್ಪಂದನ ಕಾರ್ಯಕ್ರಮದ ಸಂದರ್ಭದಲ್ಲಿ ಅವರ ಮೇಲೆ ಕಪಾಳಮೋಕ್ಷ ನಡೆಸಲಾಗಿದೆ.
ಮುಖ್ಯಮಂತ್ರಿಗಳ ಮೇಲೆ ಹಲ್ಲೆ ಮಾಡಿದವನನ್ನು ಸುಮಾರು 35 ವರ್ಷದ ಆರೋಪಿಯನ್ನು ಗುಜರಾತ್‌ನ ರಾಜ್‌ಕೋಟ್ ನಿವಾಸಿ ರಾಜೇಶ ಖಿಮ್ಜಿ ಎಂದು ಗುರುತಿಸಲಾಗಿದೆ ಎಂದು ದೆಹಲಿ ಪೊಲೀಸ್ ಮೂಲಗಳು ತಿಳಿಸಿವೆ.
ದಾಖಲೆಗಳನ್ನು ಸಲ್ಲಿಸುವ ನೆಪದಲ್ಲಿ ಮುಖ್ಯಮಂತ್ರಿಯವರ ಬಳಿ ಬಂದಿದ್ದಾಗ ಅವರಿಗೆ ಕಪಾಳಮೋಕ್ಷ ನಡೆಸಿದ್ದಾನೆ ಎಂದು ಭಾರತೀಯ ಜನತಾ ಪಕ್ಷದ ಮೂಲಗಳು ತಿಳಿಸಿವೆ. ಮುಖ್ಯಮಂತ್ರಿಗಳಿಗೆ ಅಹವಾಲು ಸಲ್ಲಿಸಿ ಕೆಲವು ದಾಖಲೆಗಳನ್ನು ಸಲ್ಲಿಸಿದ ನಂತರ ದಾಳಿ ನಡೆಸಿದ್ದಾನೆ ಎಂದು ಆರೋಪಿಸಲಾಗಿದೆ.
ಆರೋಪಿಯನ್ನು ತಕ್ಷಣವೇ ಪೊಲೀಸರು ಬಂಧಿಸಿ ಕಸ್ಟಡಿಗೆ ತೆಗೆದುಕೊಂಡರು. ದೆಹಲಿ ಪೊಲೀಸ್ ಆಯುಕ್ತರು, ಉತ್ತರ ಡಿಸಿಪಿ ಮತ್ತು ಇತರ ಹಿರಿಯ ಪೊಲೀಸ್ ಅಧಿಕಾರಿಗಳು ಸಿಎಂ ನಿವಾಸಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.
ಇಂದು ಬೆಳಗ್ಗೆ 'ಜನ್ ಸುನ್‌ವೈ' ಜನಸ್ಪಂದನ ಕಾರ್ಯಕ್ರಮ ಸಮಯದಲ್ಲಿ ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಅವರ ಮೇಲೆ ವ್ಯಕ್ತಿಯೊಬ್ಬ ಹಲ್ಲೆ ನಡೆಸಿದ್ದಾನೆ. ದೆಹಲಿ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ ಎಂದು ಮುಖ್ಯಮಂತ್ರಿ ಕಚೇರಿ ಹೇಳಿಕೆಯಲ್ಲಿ ತಿಳಿಸಿದೆ.
ದಾಳಿಕೋರನ ಬಗ್ಗೆ ಹೆಚ್ಚಿನ ವಿವರಗಳನ್ನು ಪಡೆಯಲು ದೆಹಲಿ ಪೊಲೀಸರು ಗುಜರಾತ್ ಪೊಲೀಸರೊಂದಿಗೆ ಸಮನ್ವಯ ಸಾಧಿಸುತ್ತಿದ್ದಾರೆ. ಸಿಎಂ ಸುತ್ತ ಭದ್ರತಾ ಸಿಬ್ಬಂದಿ ಇದ್ದರೂ ಈ ಘಟನೆ ನಡೆದಿದೆ.
ದೆಹಲಿ ಬಿಜೆಪಿ ಅಧ್ಯಕ್ಷ ವೀರೇಂದ್ರ ಸಚ್‌ದೇವ ಮುಖ್ಯಮಂತ್ರಿ ಮೇಲಿನ ದಾಳಿಯನ್ನು ತೀವ್ರವಾಗಿ ಖಂಡಿಸಿದ್ದಾರೆ. ಸಿಎಂ ಅವರನ್ನು ಭೇಟಿಯಾದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಚ್‌ದೇವ, ರೇಖಾ ಗುಪ್ತಾ ಅವರಿಗೆ ಯಾವುದೇ ಗಾಯಗಳಾಗಿಲ್ಲ, ಆದರೆ ಘಟನೆಯಿಂದ ತೀವ್ರ ಆಘಾತಗೊಂಡಿದ್ದಾರೆ ಎಂದರು.
ಮುಖ್ಯಮಂತ್ರಿಗಳು ಸದ್ಯ ವಿಶ್ರಾಂತಿ ಪಡೆಯುತ್ತಿದ್ದಾರೆ. ಅವರು ತಮ್ಮ ನಿಗದಿತ ಕಾರ್ಯಕ್ರಮಗಳನ್ನು ರದ್ದುಗೊಳಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ ಎಂದು ಹೇಳಿದರು. ಕ್ಯಾಂಪ್ ಕಚೇರಿಯಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ. ಘಟನೆಯ ಬಗ್ಗೆ ಗೃಹ ಸಚಿವಾಲಯಕ್ಕೆ (MHA) ತಿಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಮಧ್ಯೆ, ದೆಹಲಿ ವಿಧಾನಸಭೆಯ ವಿರೋಧ ಪಕ್ಷದ ನಾಯಕಿ ಮತ್ತು ಎಎಪಿ ನಾಯಕಿ ಅತಿಶಿ ಅವರು ಸಿಎಂ ಮೇಲಿನ ದಾಳಿಯನ್ನು ಖಂಡಿಸಿದರು.
ಎಕ್ಸ್‌ನಲ್ಲಿ ಪೋಸ್ಟ್‌ನಲ್ಲಿ, ಮಾಜಿ ಮುಖ್ಯಮಂತ್ರಿ, "ಪ್ರಜಾಪ್ರಭುತ್ವದಲ್ಲಿ, ಭಿನ್ನಾಭಿಪ್ರಾಯ ಮತ್ತು ಪ್ರತಿಭಟನೆಗೆ ಸ್ಥಳವಿದೆ, ಆದರೆ ಹಿಂಸಾಚಾರಕ್ಕೆ ಸ್ಥಳವಿಲ್ಲ" ಎಂದು ಹೇಳಿದ್ದಾರೆ.
Advertisement