
ನವದೆಹಲಿ: ಮಾಜಿ ಉಪ ರಾಷ್ಟ್ರಪತಿ ಜಗದೀಪ್ ಧನಕರ್ ಅವರು ಜುಲೈ 21 ರಂದು ರಾಜೀನಾಮೆ ನೀಡಿದ ನಂತರ ಸಾರ್ವಜನಿಕವಾಗಿ ಎಲ್ಲಿಯೂ ಕಾಣಿಸಿಕೊಂಡಿಲ್ಲ. ಹೀಗಾಗಿ ಅವರ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬುಧವಾರ ಅವರು "ಸಂಪೂರ್ಣ ಮೌನವಾಗಿದ್ದಾರೆಯೇ?" ಎಂದು ಪ್ರಶ್ನಿಸಿದರು.
ಇಂದು ವಿರೋಧ ಪಕ್ಷಗಳ ಜಂಟಿ ಉಪ ರಾಷ್ಟ್ರಪತಿ ಅಭ್ಯರ್ಥಿ ಬಿ. ಸುದರ್ಶನ್ ರೆಡ್ಡಿ ಅವರ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ರಾಹುಲ್ ಗಾಂಧಿ, ಧನಕರ್ ರಾಜೀನಾಮೆ ನೀಡಿರುವುದರ ಹಿಂದೆ ಒಂದು "ದೊಡ್ಡ ಕಥೆ" ಇದೆ ಎಂದು ಹೇಳಿದರು.
"ಮಾಜಿ ಉಪರಾಷ್ಟ್ರಪತಿ ಜಗದೀಪ್ ಧನಕರ್ ಅವರು ಸಾರ್ವಜನಿಕವಾಗಿ ಏಕೆ ಕಾಣಿಸಿಕೊಳ್ಳುತ್ತಿಲ್ಲ? ಅವರು ಏಕೆ ಅಡಗಿಕೊಂಡಿದ್ದಾರೆ? ಎಂಬುದರ ಹಿಂದೆಯೂ ಒಂದು ದೊಡ್ಡ ಕಥೆ ಇದೆ. ಭಾರತದ ಮಾಜಿ ಉಪರಾಷ್ಟ್ರಪತಿಯೊಬ್ಬರೂ ಒಂದು ಮಾತನ್ನೂ ಆಡದ ಪರಿಸ್ಥಿತಿಯಲ್ಲಿ ಏಕಿದ್ದಾರೆ ಎಂಬುದು ಜನರಿಗೆ ತಿಳಿಯಬೇಕಿದೆ" ಎಂದು ರಾಹುಲ್ ಗಾಂಧಿ ಹೇಳಿದರು.
"ರಾಜ್ಯಸಭೆಯಲ್ಲಿ ಪ್ರತಿಪಕ್ಷಗಳ ಪ್ರತಿ ಮಾತಿಗೂ ಸಿಡಿಮಿಡಿಗೊಳ್ಳುತ್ತಿದ್ದ ವ್ಯಕ್ತಿ ಈಗ ಮೌನವಾಗಿದ್ದಾರೆ. ನಾವು ಯಾವ ಕಾಲಘಟ್ಟದಲ್ಲಿದ್ದೇವೆ ಎಂಬುದಕ್ಕೆ ಇದು ಸ್ಪಷ್ಟ ಉದಾಹರಣೆ" ಎಂದು ಲೋಕಸಭೆ ಪ್ರತಿಪಕ್ಷ ನಾಯಕ ಸೂಚ್ಯವಾಗಿ ನುಡಿದರು.
"ಭಾರತದ ಮಾಜಿ ಉಪರಾಷ್ಟ್ರಪತಿ ಏಕೆ ಅಡಗಿಕೊಂಡಿದ್ದಾರೆ? ಅವರು ಹೊರಗೆ ಬಂದು ಒಂದೇ ಒಂದು ಮಾತು ಮಾತನಾಡಲು ಸಾಧ್ಯವಾಗದ ಪರಿಸ್ಥಿತಿ ಏಕೆ ಉದ್ಭವಿಸಿದೆ? ಯೋಚಿಸಿ, ನಾವು ಯಾವ ಕಾಲಘಟ್ಟದಲ್ಲಿದ್ದೇವೆ" ಎಂದು ಕಾಂಗ್ರೆಸ್ ನಾಯಕ ನಂತರ X ನಲ್ಲಿ ಪೋಸ್ಟ್ ಮಾಡಿದ್ದಾರೆ.
Advertisement