
ನವದೆಹಲಿ: ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಅವರ ಮೇಲೆ ವ್ಯಕ್ತಿಯೊಬ್ಬ ಹಲ್ಲೆ ನಡೆಸಿದ ನಂತರ ಕೇಂದ್ರ ಸರ್ಕಾರ ಅವರಿಗೆ 'ಝಡ್' ಶ್ರೇಣಿಯ ವಿಐಪಿ ಭದ್ರತೆಯನ್ನು ಒದಗಿಸಿದೆ ಎಂದು ಅಧಿಕೃತ ಮೂಲಗಳು ಗುರುವಾರ ತಿಳಿಸಿವೆ.
ರೇಖಾ ಗುಪ್ತಾ, ಅವರ ಅಧಿಕೃತ ನಿವಾಸ ಮತ್ತು ರಾಷ್ಟ್ರ ರಾಜಧಾನಿಯ ಸಿವಿಲ್ ಲೈನ್ಸ್ ಪ್ರದೇಶದ ರಾಜ್ ನಿವಾಸ್ ಮಾರ್ಗದಲ್ಲಿರುವ ಕ್ಯಾಂಪ್ ಆಫೀಸ್‌ನಲ್ಲಿ ಅರೆಸೈನಿಕ ಪಡೆಯ ವಿಐಪಿ ಸೆಕ್ಯುರಿಟಿ ಗ್ರೂಪ್‌ನ (ವಿಎಸ್‌ಜಿ) ಭದ್ರತೆಯನ್ನು ಒದಗಿಸಲಾಗಿದೆ. ಇದು ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಕಾಂಗ್ರೆಸ್‌ನ ಗಾಂಧಿ ಕುಟುಂಬದ ಭದ್ರತೆಯನ್ನು ನೋಡಿಕೊಳ್ಳುತ್ತದೆ.
ಕೇಂದ್ರ ಗೃಹ ಸಚಿವಾಲಯದ ನಿರ್ದೇಶನದ ಮೇರೆಗೆ ಗುರುವಾರ ದೆಹಲಿ ಮುಖ್ಯಮಂತ್ರಿಯ ಭದ್ರತೆಯನ್ನು ಕೇಂದ್ರ ಮೀಸಲು ಪೊಲೀಸ್ ಪಡೆ (CRPF) ವಹಿಸಿಕೊಂಡಿದೆ. ಕೇಂದ್ರ ಗುಪ್ತಚರ ಸಂಸ್ಥೆಗಳ ವರದಿ ನಂತರ ಗುಪ್ತಾ ಅವರಿಗೆ 'Z' ಶ್ರೇಣಿಯ ಭದ್ರತೆಯನ್ನು ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ದಿನದ 24 ಗಂಟೆಯೂ 22 ರಿಂದ 25 ಶಸ್ತ್ರಸಜ್ಜಿತ CRPF ಕಮಾಂಡೋಗಳ ತಂಡವು ಮುಖ್ಯಮಂತ್ರಿಯವರಿಗೆ ಭದ್ರತೆ ಒದಗಿಸುವ ಕಾರ್ಯದಲ್ಲಿ ನಿರತವಾಗಿರುತ್ತದೆ. ಅವರ ಭದ್ರತೆಗಾಗಿ CRPF ಹೊಸ ಕ್ರಮಗಳನ್ನು ಜಾರಿಗೆ ತರುತ್ತದೆ ಎನ್ನಲಾಗಿದೆ.
51 ವರ್ಷದ ರೇಖಾ ಗುಪ್ತಾ ಅವರಿಗೆ ದೆಹಲಿ ಪೊಲೀಸರು ಈ ಹಿಂದೆ ಉನ್ನತ ಮಟ್ಟದ ಭದ್ರತೆಯನ್ನು ಒದಗಿಸಿದ್ದರು.
ಬುಧವಾರ ಜನ ಸಂವಾದ ಕಾರ್ಯಕ್ರಮದಲ್ಲಿ ವ್ಯಕ್ತಿಯೊಬ್ಬ ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಅವರ ಮೇಲೆ ಹಲ್ಲೆ ನಡೆಸಿದ್ದನು. ಬಳಿಕ ಅವರ ಕಚೇರಿಯು ಈ ಹಲ್ಲೆಯನ್ನು 'ಅವರನ್ನು ಕೊಲ್ಲಲು ಯೋಜಿಸಲಾದ ಪಿತೂರಿ'ಯ ಭಾಗ ಎಂದು ಕರೆದಿದೆ. ಕೊಲೆ ಪ್ರಕರಣದ ಆರೋಪದ ಮೇಲೆ ಗುಪ್ತಾ ಅವರ ಮೇಲೆ ದಾಳಿ ಮಾಡಿದ ವ್ಯಕ್ತಿಯನ್ನು ಸ್ಥಳದಲ್ಲೇ ಬಂಧಿಸಲಾಗಿದ್ದು, ಸದ್ಯ ದೆಹಲಿ ಪೊಲೀಸರ ಕಸ್ಟಡಿಯಲ್ಲಿದ್ದಾನೆ.
ಮೂಲಗಳ ಪ್ರಕಾರ, ಗುಪ್ತಾ ಅವರ ನಿವಾಸಕ್ಕೆ ಪ್ರವೇಶ ನಿಯಂತ್ರಿಸುವುದು, ಭದ್ರತಾ ಸಾಧನಗಳನ್ನು ನಿಯೋಜಿಸುವುದು ಮತ್ತು ಆಕೆ ಸಾರ್ವಜನಿಕವಾಗಿ ಓಡಾಡುವಾಗ ಪುರುಷ ಮತ್ತು ಮಹಿಳಾ ವೈಯಕ್ತಿಕ ಭದ್ರತಾ ಅಧಿಕಾರಿಗಳ (ಪಿಎಸ್‌ಒ) ಮೂಲಕ ಆಕೆಗೆ ಹತ್ತಿರದ ರಕ್ಷಣೆ ಒದಗಿಸುವುದು ಇವುಗಳಲ್ಲಿ ಸೇರಿವೆ.
ಸಿಆರ್‌ಪಿಎಫ್ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಮತ್ತು ಪಶ್ಚಿಮ ಬಂಗಾಳ, ಸಿಕ್ಕಿಂ, ಬಿಹಾರ ಮತ್ತು ಕರ್ನಾಟಕದ ರಾಜ್ಯಪಾಲರಿಗೆ ಮತ್ತು ಇತರ ಹಲವಾರು ಉನ್ನತ ವ್ಯಕ್ತಿಗಳಿಗೆ ಭದ್ರತೆಯನ್ನು ಒದಗಿಸುತ್ತದೆ.
Advertisement