
ನವದೆಹಲಿ: ಬೀದಿ ನಾಯಿಗಳ ಕುರಿತು ಸುಪ್ರೀಂ ಕೋರ್ಟ್‌ನ ಪರಿಷ್ಕೃತ ನಿರ್ದೇಶನಗಳನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಶುಕ್ರವಾರ ಸ್ವಾಗತಿಸಿದ್ದಾರೆ ಮತ್ತು ಇದು ಪ್ರಾಣಿ ಕಲ್ಯಾಣ ಮತ್ತು ಸಾರ್ವಜನಿಕ ಸುರಕ್ಷತೆಯನ್ನು ಸಮತೋಲನಗೊಳಿಸುವತ್ತ ಒಂದು ಪ್ರಗತಿಪರ ಹೆಜ್ಜೆಯಾಗಿದೆ ಎಂದು ಹೇಳಿದ್ದಾರೆ.
ದೆಹಲಿ-ಎನ್‌ಸಿಆರ್‌ನಾದ್ಯಂತ ಬೀದಿ ನಾಯಿಗಳನ್ನು ಆಶ್ರಯ ತಾಣಗಳಿಗೆ ಸ್ಥಳಾಂತರಿಸುವ ಆಗಸ್ಟ್ 11 ರಂದು ನೀಡಿದ್ದ ತೀರ್ಪನ್ನು ಸುಪ್ರೀಂ ಕೋರ್ಟ್ ಶುಕ್ರವಾರ ಮಾರ್ಪಡಿಸಿದೆ ಮತ್ತು ಬೀದಿ ನಾಯಿಗಳನ್ನು ಸಂತಾನಶಕ್ತಿಹರಣ ಶಸ್ತ್ರಚಿಕಿತ್ಸೆ ನಡೆಸಿ, ಲಸಿಕೆ ಹಾಕಿ ಅದೇ ಪ್ರದೇಶದಲ್ಲಿ ಬಿಡಬೇಕು ಎಂದು ಹೇಳಿದೆ.
ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ರಾಹುಲ್ ಗಾಂಧಿ, 'ಪ್ರಾಣಿ ಕಲ್ಯಾಣ ಮತ್ತು ಸಾರ್ವಜನಿಕ ಸುರಕ್ಷತೆಯನ್ನು ಸಮತೋಲನಗೊಳಿಸುವತ್ತ ಪ್ರಗತಿಪರ ಹೆಜ್ಜೆಯಾಗಿರುವುದರಿಂದ, ಬೀದಿ ನಾಯಿಗಳ ಕುರಿತು ಸುಪ್ರೀಂ ಕೋರ್ಟ್‌ನ ಪರಿಷ್ಕೃತ ನಿರ್ದೇಶನಗಳನ್ನು ನಾನು ಸ್ವಾಗತಿಸುತ್ತೇನೆ. ಈ ವಿಧಾನವು ಸಹಾನುಭೂತಿಯುಳ್ಳದ್ದು ಮತ್ತು ವೈಜ್ಞಾನಿಕ ತಾರ್ಕಿಕತೆಯನ್ನು ಆಧರಿಸಿದೆ' ಎಂದು ಹೇಳಿದ್ದಾರೆ.
ಬೀದಿನಾಯಿಗಳನ್ನು ಆಶ್ರಯ ತಾಣಗಳಿಗೆ ಸ್ಥಳಾಂತರಿಸುವಂತೆ ಸುಪ್ರೀಂ ಕೋರ್ಟ್ ಆಗಸ್ಟ್ 11ರಂದು ನೀಡಿದ್ದ ನಿರ್ದೇಶನವನ್ನು ತಾತ್ಕಾಲಿಕವಾಗಿ ಅಮಾನತಿನಲ್ಲಿಡಲಾಗಿದೆ ಎಂದು ಹೇಳಿದೆ.
ನ್ಯಾಯಮೂರ್ತಿಗಳಾದ ಸಂದೀಪ್ ಮೆಹ್ತಾ ಮತ್ತು ಎನ್ ವಿ ಅಂಜಾರಿಯಾ ಅವರಿದ್ದ ಪೀಠವು, 'ಆ ಪ್ರದೇಶಗಳಿಂದ ಸೆರೆಹಿಡಿಯುವ ನಾಯಿಗಳಿಗೆ ರೋಗನಿರೋಧಕ ಚುಚ್ಚುಮದ್ದು ನೀಡಿ, ಲಸಿಕೆ ಹಾಕಿದ ನಂತರ ಅವುಗಳನ್ನು ಅದೇ ಪ್ರದೇಶಕ್ಕೆ ಹಿಂತಿರುಗಿಸಬೇಕು' ಎಂದು ಹೇಳಿದೆ.
ಈ ಪ್ರಕ್ರಿಯೆಯು ರೇಬೀಸ್ ಸೋಂಕಿತ ಅಥವಾ ರೇಬೀಸ್ ಸೋಂಕಿಗೆ ಒಳಗಾಗಿದೆ ಎಂದು ಶಂಕಿಸಲಾದ ನಾಯಿಗಳು ಮತ್ತು ಆಕ್ರಮಣಕಾರಿ ನಡವಳಿಕೆಯನ್ನು ಪ್ರದರ್ಶಿಸುವ ನಾಯಿಗಳಿಗೆ ಅನ್ವಯಿಸುವುದಿಲ್ಲ. ಅಂತಹ ನಾಯಿಗಳಿಗೆ ಲಸಿಕೆ ಹಾಕಬೇಕು. ಆದರೆ, ಯಾವುದೇ ಸಂದರ್ಭದಲ್ಲೂ ಅವುಗಳನ್ನು ಮತ್ತೆ ಬೀದಿಗಳಿಗೆ ಬಿಡಬಾರದು ಎಂದು ಪೀಠ ಸ್ಪಷ್ಟಪಡಿಸಿತು.
ನಾಯಿಗಳಿಗೆ ಎಲ್ಲೆಂದರಲ್ಲಿ ಆಹಾರ ನೀಡಬಾರದು. ಪ್ರತಿ ಪುರಸಭೆಯ ವಾರ್ಡ್‌ನಲ್ಲಿ ಬೀದಿ ನಾಯಿಗಳಿಗಾಗಿಯೇ ನಿರ್ಧಿಷ್ಟ ಸ್ಥಳವನ್ನು ಮೀಸಲಿಡಬೇಕು ಎಂದು ಪುರಸಭೆಯ ಅಧಿಕಾರಿಗಳಿಗೆ ನಿರ್ದೇಶನ ನೀಡಿತು. ಎಲ್ಲೆಂದರಲ್ಲಿ ಬೀದಿ ನಾಯಿಗಳಿಗೆ ಆಹಾರ ನೀಡುತ್ತಿರುವುದು ಕಂಡುಬಂದರೆ ಅಂತಹ ವ್ಯಕ್ತಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೀಠ ತಿಳಿಸಿದೆ.
Advertisement