
ಅರಾರಿಯಾ: ಭಾರತೀಯ ಚುನಾವಣಾ ಆಯೋಗವು ಗೋದಿ ಆಯೋಗ ಆಗಿ ಮಾರ್ಪಟ್ಟಿದ್ದು, ಭಾರತೀಯ ಜನತಾ ಪಕ್ಷದ ಸೆಲ್' ಆಗಿ ಕೆಲಸ ಮಾಡುತ್ತಿದೆ ಎಂದು ಆರ್ ಜೆಡಿ ನಾಯಕ ತೇಜಸ್ವಿ ಯಾದವ್ ಭಾನುವಾರ ಕಿಡಿಕಾರಿದ್ದಾರೆ.
ಬಿಹಾರದ ಅರಾರಿಯಾದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತಿತರ ನಾಯಕರೊಂದಿಗೆ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ತೇಜಸ್ವಿ ಯಾದವ್, ಚುನಾವಣಾ ಆಯೋಗ ತನ್ನ ವಿಶ್ವಾಸಾರ್ಹತೆಯನ್ನು ಕಳೆದುಕೊಂಡಿದೆ. ಬಿಹಾರದಲ್ಲಿ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆಯು ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯ ಮೇಲಿನ ನೇರ ದಾಳಿಯಾಗಿದೆ. ಇದು ಜನರ ಮತಗಳನ್ನು ಕದಿಯುವ ಪ್ರಯತ್ನವಾಗಿದೆ ಎಂದು ಆರೋಪಿಸಿದರು.
ಚುನಾವಣಾ ಆಯೋಗವು ಬಿಜೆಪಿಯ ಸೆಲ್‌ನಂತೆ ಕೆಲಸ ಮಾಡುತ್ತಿದೆ. ಇದು 'ಗೋದಿ ಆಯೋಗ' ಆಗಿದೆ... ಅದರ ಅಧಿಕಾರಿಗಳು ಬಿಜೆಪಿ ಕಾರ್ಯಕರ್ತರಂತೆ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿದರು.
ರಾಜ್ಯದಲ್ಲಿ ಮುಂಬರುವ ಚುನಾವಣೆಯಲ್ಲಿ ಬಿಜೆಪಿಗೆ ಲಾಭವಾಗುವಂತೆ ಬಿಹಾರದಲ್ಲಿ ಮತ ಕಳ್ಳತನಕ್ಕೆ ಚುನಾವಣಾ ಆಯೋಗಕ್ಕೆ ಅವಕಾಶ ನೀಡುವುದಿಲ್ಲ ಎಂದು ಪ್ರತಿಪಾದಿಸಿದರು.'
ಬೇರೆಡೆಯಿಂದ ವಲಸೆ ಬಂದವರ ಕುರಿತು ಇತ್ತೀಚೆಗೆ ಪ್ರಧಾನಿ ಮೋದಿ ನೀಡಿದ ಹೇಳಿಕೆ ವಿರುದ್ಧ ವಾಗ್ದಾಳಿ ನಡೆಸಿದ ತೇಜಸ್ವಿ ಯಾದವ್, ಅವರು ಸುಳ್ಳನ್ನು ಹರಡುತ್ತಿದ್ದಾರೆ. ಬಿಜೆಪಿ ಮತ್ತು ಅದರ ಮಿತ್ರಪಕ್ಷಗಳನ್ನು ಒಳ ನುಸುಳುಕೋರರು ಎಂದು ಬ್ರಾಂಡ್ ಮಾಡಿದ್ದಕ್ಕಾಗಿ ಬಿಹಾರದ ಜನರು ತಕ್ಕ ಉತ್ತರ ನೀಡಲಿದ್ದಾರೆ ಎಂದರು.
ದೀಪಂಕರ್ ಭಟ್ಟಾಚಾರ್ಯ ಮಾತನಾಡಿ, ಚುನಾವಣಾ ಆಯೋಗ ತನ್ನ ವಿಶ್ವಾಸಾರ್ಹತೆಯ ಕೊರತೆಗೆ ಸ್ವತಃ ಹೊಣೆಯಾಗಿದೆ. 'ಕೇಂದ್ರೀಯ ಚುನಾವಣಾ ಆಯೋಗ ಈಗ 'ಕೇಂದ್ರೀಯ ಚುನಾತಿ ಆಯೋಗ ಎಂದು ಕರೆಯಲು ಅರ್ಹವಾಗಿದೆ. ಚುನಾವಣಾ ಆಯೋಗದ SIR (ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ) ಪ್ರಜಾಪ್ರಭುತ್ವದ ಮೇಲಿನ ನೇರ ದಾಳಿಯಾಗಿದೆ ಎಂದು ಆರೋಪಿಸಿದರು.
Advertisement