
ನೋಯ್ಡಾ: ವರದಕ್ಷಿಣೆ ಹಣಕ್ಕಾಗಿ ಕುಟುಂಬವೊಂದು ಮಹಿಳೆಯನ್ನು ಆಕೆಯ ಸಹೋದರಿ ಮತ್ತು ಮಗನ ಕಣ್ಣೆದುರಿನಲ್ಲೇ ಹಲ್ಲೆ ಮಾಡಿ, ಕೂದಲು ಹಿಡಿದು ಎಳೆದಾಡಿ ಬೆಂಕಿ ಹಚ್ಚಿ ಕೊಂದ ಘಟನೆ ಗ್ರೇಟರ್ ನೋಯ್ಡಾದಲ್ಲಿ ನಡೆದಿದೆ.
ಸದ್ಯ ಪೊಲೀಸರು ಮಹಿಳೆಯ ಪತಿಯನ್ನು ಬಂಧಿಸಿದ್ದು, ಇತರ ಆರೋಪಿಗಳಿಗಾಗಿ ಹುಡುಕಾಟ ನಡೆಸಿದ್ದಾರೆ.30 ವರ್ಷದ ನಿಕ್ಕಿ ಮೃತ ಮಹಿಳೆ. ಈಕೆಯ ಮೇಲೆ ಹಲ್ಲೆ ಮಾಡಿರುವ ಮತ್ತು ಬೆಂಕಿ ಹಚ್ಚಿರುವ ವಿಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿವೆ. ನಿಕ್ಕಿ ಅವರ ಸಹೋದರಿ ಕಾಂಚನಾ ಘಟನೆಯ ದೃಶ್ಯವನ್ನು ವಿಡಿಯೊ ಮಾಡಿದ್ದು, ಗ್ರೇಟರ್ ನೋಯ್ಡಾದ ಕಾಸ್ನಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನನ್ನ ಅಮ್ಮನ ಮೈಮೇಲೆ ಏನೋ ಸುರಿದರು, ಕೆನ್ನೆಗೆ ಹೊಡೆದು ಲೈಟರ್‌ನಲ್ಲಿ ಬೆಂಕಿ ಹಚ್ಚಿದರು ಎಂದು ಮೃತ ಮಹಿಳೆಯ ಆರು ವರ್ಷದ ಪುತ್ರ ಪೊಲೀಸರಿಗೆ ತಿಳಿಸಿದ್ದಾನೆ. ಪತಿ ಮತ್ತು ಅತ್ತೆ–ಮಾವ ಅಕ್ಕನನ್ನು 36 ಲಕ್ಷ ವರದಕ್ಷಿಣೆ ಹಣಕ್ಕಾಗಿ ಕೊಂದಿದ್ದಾರೆ. ಅವರು ವರದಕ್ಷಿಣೆಗಾಗಿ ಹಲವು ದಿನಗಳಿಂದ ಹಿಂಸಿಸುತ್ತಿದ್ದರು. ನನ್ನ ಅಕ್ಕನ ಕುತ್ತಿಗೆ, ತಲೆಗೆ ಹೊಡೆದಿದ್ದಾರೆ, ಆ್ಯಸಿಡ್ ಎರಚಿದ್ದಾರೆ, ನನಗೂ ಚಿತ್ರಹಿಂಸೆ ನೀಡಿದ್ದಾರೆ, ನನ್ನಿಂದ ಏನನ್ನೂ ಮಾಡಲು ಸಾಧ್ಯವಾಗಲಿಲ್ಲ ಎಂದು ಮೃತ ಮಹಿಳೆಯ ಸಹೋದರಿ ಕಾಂಚನಾ ತಿಳಿಸಿದ್ದಾರೆ.
ಕಳೆದ ಹಲವು ದಿನಗಳಿಂದ ವರದಕ್ಷಿಣೆಗಾಗಿ ನಮ್ಮನ್ನು ಥಳಿಸಿ ಚಿತ್ರಹಿಂಸೆ ನೀಡಲಾಗುತ್ತಿತ್ತು. ಮೃತ ಮಹಿಳೆಯ ಪತಿ ವಿಪಿನ್ ಮರುಮದುವೆಯಾಗಲು ಅವರ ಅತ್ತೆ ಮಾವಂದಿರು ತಮ್ಮ ಸಹೋದರಿಯನ್ನು ದೂರವಿಡಬೇಕೆಂದು ಬಯಸಿದ್ದರು ಎಂದು ಕಾಂಚನ್ ಹೇಳಿದರು. ಅವರು ನನಗೆ ಕಪಾಳಮೋಕ್ಷ ಮಾಡಿದರು. ನಾನು ಇಡೀ ದಿನ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದೆ ಎಂದಿದ್ದಾರೆ. ಕಾಂಚನಾ ಕೂಡ ಇದೇ ಕುಟುಂಬಕ್ಕೆ ಸೇರಿದ ವ್ಯಕ್ತಿಯನ್ನು ವಿವಾಹವಾಗಿದ್ದಾರೆ.
ಘಟನೆಯ ಕುರಿತು ವಿವರಿಸಿರುವ ಹೆಚ್ಚುವರಿ ಪೊಲೀಸ್ ಉಪ ಆಯುಕ್ತ ಸುಧೀರ್ ಕುಮಾರ್, ‘ಆ.21ರಂದು ಫೋರ್ಟೀಸ್ ಆಸ್ಪತ್ರೆಯಿಂದ ಮಹಿಳೆಯೊಬ್ಬರು ಸುಟ್ಟ ಗಾಯಗಳಿಂದ ದಾಖಲಾಗಿರುವ ಬಗ್ಗೆ ಮಾಹಿತಿ ಬಂದಿತ್ತು, ನಮ್ಮ ತಂಡ ಅಲ್ಲಿಗೆ ತಲುಪುವಷ್ಟರಲ್ಲಿ ಮಹಿಳೆ ಮೃತರಾಗಿದ್ದರು. ಮರಣೋತ್ತರ ಪರೀಕ್ಷೆ ಬಳಿಕ ಮಹಿಳೆಯ ಅಕ್ಕ ಕಾಂಚನಾ ಅವರು ನೀಡಿದ ದೂರಿನ ಅನ್ವಯ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿತ್ತು. ಸದ್ಯ ಮಹಿಳೆಯ ಪತಿಯನ್ನು ಬಂಧಿಸಲಾಗಿದೆ, ಕುಟುಂಬದ ಇತರ ಸದಸ್ಯರಿಗಾಗಿ ಹುಡುಕಾಟ ನಡೆಸುತ್ತಿದ್ದೇವೆ’ ಎಂದಿದ್ದಾರೆ. ನಿಕ್ಕಿ 2016 ರಲ್ಲಿ ವಿಪಿನ್ ಅವರನ್ನು ವಿವಾಹವಾದರು ಮತ್ತು ದಂಪತಿಗೆ ಒಬ್ಬ ಮಗನಿದ್ದಾನೆ.
Advertisement