
ನವದೆಹಲಿ: ಕೋವಿಡ್-19 ಔಷಧಿಗಳನ್ನು ಅಕ್ರಮವಾಗಿ ದಾಸ್ತಾನು ಮಾಡಿ ವಿತರಿಸಿದ ಆರೋಪ ಹೊತ್ತಿರುವ ಭಾರತೀಯ ಕ್ರಿಕೆಟ್ ತಂಡದ ಮುಖ್ಯ ಕೋಚ್ ಗೌತಮ್ ಗಂಭೀರ್, ಅವರ ಫೌಂಡೇಶನ್ ಮತ್ತು ಇತರರ ವಿರುದ್ಧದ ವಿಚಾರಣಾ ನ್ಯಾಯಾಲಯದ ವಿಚಾರಣೆಗೆ ತಡೆ ನೀಡಲು ದೆಹಲಿ ಹೈಕೋರ್ಟ್ ಸೋಮವಾರ ನಿರಾಕರಿಸಿದೆ.
ನ್ಯಾಯಮೂರ್ತಿ ನೀನಾ ಬನ್ಸಾಲ್ ಕೃಷ್ಣ ನೇತೃತ್ವದ ಪೀಠವು, ತಕ್ಷಣ ಪರಿಹಾರ ನೀಡಲು ನಿರಾಕರಿಸಿತು. ಆದರೆ, ಆಗಸ್ಟ್ 29 ರಂದು ಗೌತಮ್ ಗಂಭೀರ್ ಅವರ ಅರ್ಜಿಯನ್ನು ವಿಚಾರಣೆಗೆ ಕೈಗೆತ್ತಿಕೊಳ್ಳಲು ಒಪ್ಪಿಕೊಂಡಿತು.
ಗಂಭೀರ್ ಅರ್ಜಿಯಲ್ಲಿ, ತಮ್ಮ ವಿರುದ್ಧದ ಎಫ್‌ಐಆರ್ ಅನ್ನು ರದ್ದುಗೊಳಿಸಲು ಮತ್ತು ವಿಚಾರಣಾ ನ್ಯಾಯಾಲಯದ ವಿಚಾರಣೆಗಳನ್ನು ಮುಂದುವರಿಸಲು ಅವಕಾಶ ನೀಡಿದ್ದ ಹಿಂದಿನ ಆದೇಶವನ್ನು (ಏಪ್ರಿಲ್ 9) ರದ್ದುಗೊಳಿಸಲು ಕೋರಿದ್ದಾರೆ.
'ಒಮ್ಮೆ ನಿಮಗೆ ತಡೆಯಾಜ್ಞೆ ದೊರೆತರೆ, ನೀವು ನ್ಯಾಯಾಲಯಕ್ಕೆ ಹಾಜರಾಗುವುದನ್ನು ನಿಲ್ಲಿಸುತ್ತೀರಿ. ಆಗ ತನಿಖೆ ಸ್ಥಗಿತಗೊಳ್ಳುತ್ತದೆ ಮತ್ತು ಇಡೀ ಪ್ರಕರಣವು ವೇಗವನ್ನು ಕಳೆದುಕೊಳ್ಳುತ್ತದೆ ಅಥವಾ ಕುಸಿದು ಬೀಳುತ್ತದೆ' ಎಂದು ಎಂದು ನ್ಯಾಯಾಧೀಶರು ಗಂಭೀರ್ ಅವರ ವಕೀಲರಿಗೆ ಹೇಳಿದರು.
ವಕೀಲ ಜೈ ಅನಂತ್ ದೇಹಾದ್ರಾಯ್ ತಮ್ಮ ಕಕ್ಷಿದಾರರಾದ ಗೌತಮ್ ಗಂಭೀರ್ ಅವರ ಹಿನ್ನೆಲೆಯನ್ನು ಎತ್ತಿ ತೋರಿಸಿದರು. ಗಂಭೀರ್ ಮಾಜಿ ಸಂಸತ್ ಸದಸ್ಯರು ಮತ್ತು ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕರಾಗಿದ್ದಾರೆ. COVID-19 ಬಿಕ್ಕಟ್ಟಿನ ಸಮಯದಲ್ಲಿ ಇಡೀ ಆರೋಗ್ಯ ವ್ಯವಸ್ಥೆಯೇ ಕುಸಿದುಬಿದಿದ್ದಾಗ ಮತ್ತು ಸರ್ಕಾರವು ಸಹ ಪರಿಸ್ಥಿತಿಯನ್ನು ನಿಭಾಯಿಸಲು ಪರದಾಡುತ್ತಿದ್ದಾಗ ಆಮ್ಲಜನಕ ಸಿಲಿಂಡರ್‌ಗಳು ಮತ್ತು ಔಷಧಿಗಳನ್ನು ದಾನ ಮಾಡುವ ಮೂಲಕ ಜನರಿಗೆ ಸಹಾಯ ಮಾಡಿದ್ದರು ಎಂದರು.
ಈ ಅಂಶಗಳು ಪ್ರಕರಣಕ್ಕೆ ಮುಖ್ಯವಲ್ಲ ಎಂದು ನ್ಯಾಯಾಲಯವು ಹೇಳಿದೆ.
ನೀವು ನೇರವಾಗಿ ಸರಳವಾದ ವಿನಂತಿಯನ್ನು ಮಾಡಿದ್ದರೆ, ನಾನು ಅದನ್ನು ಪರಿಗಣಿಸುತ್ತಿದ್ದೆ. ಆದರೆ, ನೀವು ಹಲವು ವಿಚಾರಗಳನ್ನು ಹೇಳಿದ್ದೀರಿ. ಮೊದಲನೆಯದಾಗಿ ಪಕ್ಷದ ಹೆಸರು, ಅವರ ರಾಜಕೀಯ ಸಂಬಂಧ ಮತ್ತು ಹಿಂದಿನ ಕೊಡುಗೆಗಳನ್ನು ಒತ್ತಿ ಹೇಳುವ ಮೂಲಕ ನ್ಯಾಯಾಲಯದ ಮೇಲೆ ಪ್ರಭಾವ ಬೀರಲು ಪ್ರಯತ್ನಿಸುತ್ತಿರುವಿರಿ. ಈ ತಂತ್ರವು ನ್ಯಾಯಾಲಯದಲ್ಲಿ ನ್ಯಾಯಾಂಗದ ನಿರ್ಧಾರಗಳ ಮೇಲೆ ಪ್ರಭಾವ ಬೀರುವುದಿಲ್ಲ' ಎಂದರು.
ಆಗ ವಕೀಲರು ಕ್ಷಮೆಯಾಚಿಸಿದರು ಮತ್ತು ತಾವು ಯಾವುದೇ ಪ್ರಭಾವ ಬೀರಲು ಪ್ರಯತ್ನಿಸುತ್ತಿಲ್ಲ ಎಂದು ಹೇಳಿದರು. ವಿಚಾರಣಾ ನ್ಯಾಯಾಲಯವು ಸೆಪ್ಟೆಂಬರ್ 8 ರಂದು ಈ ಪ್ರಕರಣದ ವಿಚಾರಣೆ ನಡೆಸಲು ನಿರ್ಧರಿಸಲಾಗಿದೆ. ಆದ್ದರಿಂದ, ವಿಚಾರಣಾ ನ್ಯಾಯಾಲಯದ ಪ್ರಕ್ರಿಯೆಗಳ ಮೇಲೆ ತಡೆಯಾಜ್ಞೆಯೊಡ್ಡಬೇಕು ಅಥವಾ ಆ ದಿನಾಂಕಕ್ಕೂ ಮುನ್ನವೇ ಅವರ ಅರ್ಜಿಯನ್ನು ಆಲಿಸಬೇಕು. ಇಲ್ಲದಿದ್ದರೆ, ನನ್ನ ಕಕ್ಷಿದಾರರ ಪತ್ನಿ ಮತ್ತು ತಾಯಿಗೆ ಸಮನ್ಸ್ ನೀಡಲಾಗುತ್ತದೆ ಎಂದು ಅವರು ಹೈಕೋರ್ಟ್ ಅನ್ನು ಒತ್ತಾಯಿಸಿದರು.
ಪ್ರಾಸಿಕ್ಯೂಷನ್‌ಗೆ ಮಾತ್ರ ತಡೆಯಾಜ್ಞೆ ನೀಡಲಾಗಿದೆ ಆದರೆ, ಪೊಲೀಸರು ತನಿಖೆ ಮುಂದುವರಿಸಲು ಸ್ವತಂತ್ರರು ಎಂದು ವಕೀಲರು ಗಮನಸೆಳೆದರು.
ಮೊದಲು ಪ್ರಾಸಿಕ್ಯೂಷನ್‌ಗೆ ತಿಳಿಸದೆ ಮತ್ತು ಅವರಿಗೆ ಪ್ರತಿಕ್ರಿಯಿಸಲು ಅವಕಾಶ ನೀಡದೆ, ವಿಚಾರಣೆ ಮೇಲಿನ ತಡೆಯಾಜ್ಞೆಯನ್ನು ತೆಗೆದುಹಾಕಿದ ಆದೇಶವನ್ನು ರದ್ದುಗೊಳಿಸಲು ಆಗುವುದಿಲ್ಲ ಎಂದು ನ್ಯಾಯಾಲಯ ಹೇಳಿದೆ.
ವಾದ ಮಂಡಿಸಲು ಅವಕಾಶ ನೀಡದೆಯೇ ನ್ಯಾಯಾಲಯ ತಡೆಯಾಜ್ಞೆಯನ್ನು ತೆಗೆದುಹಾಕಿದೆ ಮತ್ತು ಎದುರಾಳಿ ಪಕ್ಷವು ತಡೆಯಾಜ್ಞೆಯನ್ನು ತೆಗೆದುಹಾಕಲು ಔಪಚಾರಿಕ ವಿನಂತಿಯನ್ನು ಸಹ ಸಲ್ಲಿಸಿಲ್ಲ ಎಂದು ದೇಹದ್ರಾಯ್ ಹೇಳಿದರು.
ವಿಚಾರಣೆಗೆ ತಡೆಯಾಜ್ಞೆ ತೆಗೆದುಹಾಕಿದ ದಿನದಂದು ಗಂಭೀರ್ ಅವರ ವಕೀಲರು ಗೈರುಹಾಜರಾಗಿದ್ದರು ಎಂಬುದನ್ನು ನ್ಯಾಯಾಲಯ ಗಮನಿಸಿದ್ದು, ಮುಂದಿನ ವಿಚಾರಣೆಯನ್ನು ಆಗಸ್ಟ್ 29ಕ್ಕೆ ನಿಗದಿಪಡಿಸಿದೆ.
Advertisement