
ಶ್ರೀನಗರ: ಕೇಂದ್ರಾಡಳಿತ ಪ್ರದೇಶದ ಎಲ್ಲಾ ಸರ್ಕಾರಿ ಕಚೇರಿಗಳ ಅಧಿಕೃತ ಸಾಧನಗಳಲ್ಲಿ ಯುಎಸ್‌ಬಿ ಮತ್ತು ಪೆನ್ ಡ್ರೈವ್‌ಗಳ ಬಳಕೆಯನ್ನು ಜಮ್ಮು ಮತ್ತು ಕಾಶ್ಮೀರ ಸರ್ಕಾರ ನಿಷೇಧಿಸಿದೆ.
ಸೂಕ್ಷ್ಮ ಸರ್ಕಾರಿ ಮಾಹಿತಿಯನ್ನು ರಕ್ಷಿಸಲು ಮತ್ತು ಡೇಟಾ ಉಲ್ಲಂಘನೆಯ ಅಪಾಯ ಕಡಿಮೆ ಮಾಡಲು ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಸರ್ಕಾರ ತಿಳಿಸಿದೆ.
ಸರ್ಕಾರದ ಆಯುಕ್ತ ಕಾರ್ಯದರ್ಶಿ ಎಂ ರಾಜು ಹೊರಡಿಸಿದ ಅಧಿಕೃತ ಆದೇಶದ ಪ್ರಕಾರ, ಈ ಕ್ರಮವು ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶದ ಸೈಬರ್ ಭದ್ರತಾ ನಿಲುವು ಹೆಚ್ಚಿಸುವ ಗುರಿ ಹೊಂದಿದೆ.
"ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶದ ಸೈಬರ್ ಭದ್ರತಾ ನಿಲುವನ್ನು ಹೆಚ್ಚಿಸಲು, ಸೂಕ್ಷ್ಮ ಸರ್ಕಾರಿ ಮಾಹಿತಿಯನ್ನು ರಕ್ಷಿಸಲು ಮತ್ತು ಡೇಟಾ ಉಲ್ಲಂಘನೆ, ಮಾಲ್‌ವೇರ್ ವೈರಸ್ ಮತ್ತು ಅನಧಿಕೃತ ಪ್ರವೇಶದ ಅಪಾಯಗಳನ್ನು ಕಡಿಮೆ ಮಾಡಲು, ಸಿವಿಲ್ ಸೆಕ್ರೆಟರಿಯೇಟ್ ಜಮ್ಮು ಮತ್ತು ಶ್ರೀನಗರದಲ್ಲಿನ ಎಲ್ಲಾ ಸರ್ಕಾರಿ ಇಲಾಖೆಗಳು, ಎಲ್ಲಾ ಜಿಲ್ಲೆಗಳ ಉಪ ಆಯುಕ್ತರ ಕಚೇರಿಗಳಲ್ಲಿ ಅಧಿಕೃತ ಸಾಧನಗಳಲ್ಲಿ ಪೆನ್ ಡ್ರೈವ್‌ಗಳ ಬಳಕೆ ನಿಷೇಧಿಸಲು ನಿರ್ಧರಿಸಲಾಗಿದೆ" ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಪರ್ಯಾಯವಾಗಿ, ಸರ್ಕಾರಿ ಇಲಾಖೆಗಳು(https://govdrive.gov.in) GovDrive ಅನ್ನು ಅಳವಡಿಸಿಕೊಳ್ಳಲು ನಿರ್ದೇಶಿಸಲಾಗಿದೆ.
Advertisement