
ನವದೆಹಲಿ: 21 ವರ್ಷದ ಯುವಕನೊಬ್ಬ ಭಾನುವಾರ ರಾತ್ರಿ ತನ್ನ ಸಹೋದರಿಗೆ ವಿಡಿಯೋ ಕಾಲ್ ಮಾಡಿ ಯಮುನಾ ಸೇತುವೆಯಿಂದ ಹಾರಿದ್ದಾರೆ. ಈ ಬಗ್ಗೆ ರಾತ್ರಿ 11:22ಕ್ಕೆ ಸನ್‌ಲೈಟ್ ಕಾಲೋನಿ ಪೊಲೀಸ್ ಠಾಣೆಗೆ ಪಿಸಿಆರ್ ಕರೆ ಬಂದಿದ್ದು, ಪೊಲೀಸರು ಮತ್ತು ರಕ್ಷಣಾ ತಂಡ ತಕ್ಷಣ ಸ್ಥಳಕ್ಕೆ ತೆರಳಿ ವ್ಯಾಪಕ ಶೋಧ ಕಾರ್ಯಾಚರಣೆ ನಡೆಸಿವೆ.
ಪೊಲೀಸರ ಪ್ರಕಾರ, ಕರೆ ಮಾಡಿದವರು ಯುವಕ ನದಿಗೆ ಹಾರಿರುವುದಾಗಿ ಹೇಳಿದ್ದಾರೆ. ಸ್ಥಳೀಯ ಪೊಲೀಸರು ಮತ್ತು ಪಿಸಿಆರ್ ತಂಡ ಸ್ಥಳಕ್ಕೆ ತೆರಳಿ ಪರಿಶೀಲಿಸಿದಾಗ, ಸೇತುವೆಯ ಮೇಲೆ ಬಿಟ್ಟು ಹೋಗಿದ್ದ ಬೈಕ್ ಮತ್ತು ಮೊಬೈಲ್ ಫೋನ್ ಪತ್ತೆಯಾಗಿದೆ. ವಿಡಿಯೋ ಕರೆ ಮಾಡಿದವರನ್ನು ಸುಮನ್ ಎಂದು ಗುರುತಿಸಲಾಗಿದ್ದು, ಅವರು ಬಿಹಾರದ ನಿವಾಸಿ ಬಾಲ್ ಕಿಶನ್ ಅವರ ಪುತ್ರಿ ಎನ್ನಲಾಗಿದೆ.
ನಾಗರಿಕ ಸೇವೆಗಳ ಆಕಾಂಕ್ಷಿಯಾಗಿರುವ ಸುಮನ್ ಅವರು ಪ್ರಸ್ತುತ ದೆಹಲಿಯ ಕರೋಲ್ ಬಾಗ್‌ನಲ್ಲಿ ವಾಸಿಸುತ್ತಿದ್ದಾರೆ. ವಿಚಾರಣೆಯ ಸಮಯದಲ್ಲಿ, ತನ್ನ ಸಹೋದರ ರಿತಿಕ್ ಕೆಲವು ತಿಂಗಳುಗಳಿಂದ ಉದ್ಯೋಗ ಹುಡುಕುತ್ತಾ ತನ್ನೊಂದಿಗೆ ವಾಸಿಸುತ್ತಿದ್ದನು. ರಿತಿಕ್ ತನ್ನ ಗೆಳತಿಯೊಂದಿಗೆ ಬ್ರೇಕ್ ಆದ ನಂತರ ಕಳೆದ ಎರಡು ಮೂರು ತಿಂಗಳುಗಳಿಂದ ಖಿನ್ನತೆಯಿಂದ ಬಳಲುತ್ತಿದ್ದ ಎಂದು ಆತನ ಸಹೋದರಿ ಸುಮನ್ ಹೇಳಿದ್ದಾರೆ.
ಘಟನೆಯ ರಾತ್ರಿ, ರಿತಿಕ್ ತನಗೆ ವೀಡಿಯೊ ಕರೆ ಮಾಡಿದ್ದ. ಆ ಸಮಯದಲ್ಲಿ ತನ್ನೊಂದಿಗೆ ಜಗಳವಾಡಿದ. ನಂತರ ಹತಾಶೆಯಿಂದ, ನದಿಗೆ ಹಾರಿದನು ಎಂದು ಸುಮನ್ ತಿಳಿಸಿದ್ದಾರೆ.
ಸನ್‌ಲೈಟ್ ಕಾಲೋನಿ ಪೊಲೀಸ್ ಠಾಣೆಯಲ್ಲಿ ವ್ಯಕ್ತಿ ಕಾಣೆಯಾದ ಬಗ್ಗೆ ದೂರು ದಾಖಲಾಗಿದೆ. ಕರೆ ಬಂದ ತಕ್ಷಣ, ಸ್ಥಳೀಯ ಪೊಲೀಸರು ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ಪಡೆ(ಎನ್‌ಡಿಆರ್‌ಎಫ್), ಅಗ್ನಿಶಾಮಕ ದಳ ಮತ್ತು ಇತರ ತುರ್ತು ಸೇವೆಗಳಿಗೆ ಮಾಹಿತಿ ನೀಡಿದರು.
15-20 ನಿಮಿಷಗಳಲ್ಲಿ ಎನ್‌ಡಿಆರ್‌ಎಫ್‌ನ ಮೋಟಾರ್ ಬೋಟ್ ತಂಡ ಸ್ಥಳಕ್ಕೆ ಆಗಮಿಸಿ ನದಿಯಲ್ಲಿ ಹುಡುಕಾಟ ಆರಂಭಿಸಿತು. ಈ ಸಮಯದಲ್ಲಿ ಅಗ್ನಿಶಾಮಕ ದಳ ಮತ್ತು ದೆಹಲಿ ವಿಪತ್ತು ನಿರ್ವಹಣಾ ಪ್ರಾಧಿಕಾರದ(ಡಿಡಿಎಂಎ) ತಂಡ ಕೂಡ ಆಗಮಿಸಿತ್ತು. ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ರಾತ್ರಿಯಿಡೀ ಮುಂದುವರೆದಿದ್ದು, ಇನ್ನೂ ಮುಂದುವರೆದಿದೆ. ಆದರೆ ರಿತಿಕ್ ಇನ್ನೂ ಪತ್ತೆಯಾಗಿಲ್ಲ.
Advertisement