ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಸತತ ಭಾರಿ ಮಳೆಯಿಂದಾಗಿ ತ್ರಿಕೂಟ ಬೆಟ್ಟದ ಮೇಲಿರುವ ಮಾತಾ ವೈಷ್ಣೋದೇವಿ ದೇಗುಲಕ್ಕೆ ತೆರಳುವ ಮಾರ್ಗದಲ್ಲಿ ಮಂಗಳವಾರ ಮಧ್ಯಾಹ್ನ ಭೂಕುಸಿತ ಸಂಭವಿಸಿದ್ದು, ಕನಿಷ್ಠ ಆರು ಮಂದಿ ಸಾವನ್ನಪ್ಪಿದ್ದಾರೆ.
Authorities have asked people to stay away from water bodies
ಮಳೆ ಅನಾಹುತದ ಚಿತ್ರಗಳು
Updated on

ಜಮ್ಮು: ಕೇಂದ್ರಾಡಳಿತ ಪ್ರದೇಶ ಜಮ್ಮುವಿನಾದ್ಯಂತ ಭಾರಿ ಮಳೆಯಾಗುತ್ತಿದ್ದು, ಅಪಾರ ಪ್ರಮಾಣದ ಹಾನಿಯಾಗಿದೆ. ಸತತ ಭಾರಿ ಮಳೆಯಿಂದಾಗಿ ತ್ರಿಕೂಟ ಬೆಟ್ಟದ ಮೇಲಿರುವ ಮಾತಾ ವೈಷ್ಣೋದೇವಿ ದೇಗುಲಕ್ಕೆ ತೆರಳುವ ಮಾರ್ಗದಲ್ಲಿ ಮಂಗಳವಾರ ಮಧ್ಯಾಹ್ನ ಭೂಕುಸಿತ ಸಂಭವಿಸಿದ್ದು, ಕನಿಷ್ಠ ಆರು ಮಂದಿ ಸಾವನ್ನಪ್ಪಿದ್ದಾರೆ. 14 ಮಂದಿ ಗಾಯಗೊಂಡಿದ್ದಾರೆ. ಭೂಕುಸಿತ ಸಂಭವಿಸಿದಾಗ ಜಮ್ಮು ಮತ್ತು ಕಾಶ್ಮೀರದ ರಿಯಾಸಿ ಜಿಲ್ಲೆಯ ಪ್ರಸಿದ್ಧ ದೇಗುಲಕ್ಕೆ ಯಾತ್ರೆಯನ್ನು ಸ್ಥಗಿತಗೊಳಿಸಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮಧ್ಯಾಹ್ನ 3 ಗಂಟೆ ಸುಮಾರಿಗೆ ಭೂಕುಸಿತ ಸಂಭವಿಸಿದ ಅಧಕ್ವಾರಿಯ ಇಂದ್ರಪ್ರಸ್ಥ ಭೋಜನಾಲಯದ ಬಳಿ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಬೆಟ್ಟದ ಮೇಲಿನ ದೇಗುಲಕ್ಕೆ 12 ಕಿಲೋಮೀಟರ್ ಅಂತರದ ಅರ್ಧದಾರಿಯಲ್ಲೇ ಈ ಅನಾಹುತ ಸಂಭವಿಸಿದೆ. ಬೆಳಿಗ್ಗೆಯಿಂದ ಹಿಮಕೋಟಿ ಟ್ರೆಕ್ ಮಾರ್ಗದಲ್ಲಿ ಯಾತ್ರೆಯನ್ನು ಸ್ಥಗಿತಗೊಳಿಸಲಾಗಿತ್ತು. ಆದರೆ ಮಧ್ಯಾಹ್ನ 1.30 ರವರೆಗೆ ಹಳೆಯ ಮಾರ್ಗದಲ್ಲಿಯೇ ಸಾಗಿದ್ದು, ಧಾರಾಕಾರ ಮಳೆಯ ದೃಷ್ಟಿಯಿಂದ ಮುಂದಿನ ಆದೇಶದವರೆಗೆ ಯಾತ್ರೆಯನ್ನು ಸ್ಥಗಿತಗೊಳಿಸಲು ಅಧಿಕಾರಿಗಳು ನಿರ್ಧರಿಸಿದ್ದಾರೆ.

ಎಲ್ಲಾ ಶಿಕ್ಷಣ ಸಂಸ್ಥೆಗಳಿಗೆ ನಾಳೆ ರಜೆ: ಜಮ್ಮುವಿನ ದೋಡಾ ಜಿಲ್ಲೆಯಲ್ಲಿ ಪ್ರತ್ಯೇಕ ಮಳೆ ಸಂಬಂಧಿತ ಘಟನೆಗಳಲ್ಲಿ ನಾಲ್ವರು ಸಾವನ್ನಪ್ಪಿದ್ದಾರೆ. ಭಾರೀ ಮಳೆಯಿಂದಾಗಿ ಅಗತ್ಯ ಸೇವೆಗಳು ಮತ್ತು ಕಾನೂನು ಮತ್ತು ಸುವ್ಯವಸ್ಥೆ ಇಲಾಖೆಗಳನ್ನು ಹೊರತುಪಡಿಸಿ ಎಲ್ಲಾ ಶಿಕ್ಷಣ ಸಂಸ್ಥೆಗಳು ಮತ್ತು ಕಚೇರಿಗಳನ್ನು ಮುಚ್ಚಲು ಸರ್ಕಾರ ಆದೇಶಿಸಿದೆ.

ಸದ್ಯದ ಪ್ರತಿಕೂಲ ಹವಾಮಾನ ಮತ್ತು ಸಾರ್ವಜನಿಕ ಸುರಕ್ಷತೆಯ ಹಿತದೃಷ್ಟಿಯಿಂದ ಶಾಲಾ ಕಾಲೇಜುಗಳು, ವಿಶ್ವವಿದ್ಯಾನಿಲಯಗಳು, ಕೋಚಿಂಗ್ ಸೆಂಟರ್‌ಗಳು ಮತ್ತು ತರಬೇತಿ ಸಂಸ್ಥೆಗಳು ಸೇರಿದಂತೆ ಎಲ್ಲಾ ಶಿಕ್ಷಣ ಸಂಸ್ಥೆಗಳಿಗೆ ನಾಳೆ ರಜೆ ಘೋಷಿಸಿ ವಿಭಾಗೀಯ ಆಯುಕ್ತ ಜಮ್ಮು ರಮೇಶ್ ಕುಮಾರ್ ಆದೇಶದಲ್ಲಿ ತಿಳಿಸಿದ್ದಾರೆ.

ಕೊಚ್ಚಿ ಹೋದ ರಸ್ತೆ, ಸೇತುವೆಗಳು: ಪ್ರತಿಕೂಲ ಹವಾಮಾನದಿಂದಾಗಿ ಮಂಗಳವಾರ ನಿಗದಿಯಾಗಿದ್ದ ಪೊಲೀಸ್ ಕಾನ್‌ಸ್ಟೆಬಲ್ ಹುದ್ದೆಯ ನೇಮಕಾತಿಯನ್ನು ಸ್ಥಗಿತಗೊಳಿಸಲಾಯಿತು. ಭಾರಿ ಮಳೆಯಿಂದಾಗಿ ಎರಡು ಡಜನ್‌ಗೂ ಹೆಚ್ಚು ಮನೆಗಳು ಮತ್ತು ಸೇತುವೆಗಳು ಹಾನಿಗೊಳಗಾಗಿವೆ. ಜಮ್ಮುವಿನಲ್ಲಿ ಬಹುತೇಕ ಎಲ್ಲಾ ನದಿಗಳು ಅಪಾಯದ ಮಟ್ಟಕ್ಕಿಂತ ಹೆಚ್ಚು ಹರಿಯುತ್ತಿವೆ, ನಗರ ಮತ್ತು ಇತರೆಡೆಗಳಲ್ಲಿ ಹಲವಾರು ತಗ್ಗು ಪ್ರದೇಶಗಳು ಮತ್ತು ರಸ್ತೆಗಳು ಮುಳುಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಜಮ್ಮು-ಶ್ರೀನಗರ ಮತ್ತು ಕಿಶ್ತ್ವಾರ್-ದೋಡಾ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಂಚಾರ ಸ್ಥಗಿತಗೊಳಿಸಲಾಗಿದ್ದು, ಹತ್ತಾರು ಗುಡ್ಡಗಾಡು ರಸ್ತೆಗಳು ಭೂಕುಸಿತ ಅಥವಾ ಹಠಾತ್ ಪ್ರವಾಹದಿಂದ ಹಾನಿಗೊಳಗಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮಳೆಯ ದೃಷ್ಟಿಯಿಂದ ಮುಂಜಾಗ್ರತಾ ಕ್ರಮವಾಗಿ ಮಾತಾ ವೈಷ್ಣೋದೇವಿ ದೇಗುಲಕ್ಕೆ ಯಾತ್ರೆಯನ್ನು ಸಹ ಸ್ಥಗಿತಗೊಳಿಸಲಾಗಿದೆ.

ಜಮ್ಮು ಪ್ರಾಂತ್ಯದ ಹಲವು ಭಾಗಗಳಲ್ಲಿ ಪರಿಸ್ಥಿತಿ "ಸಾಕಷ್ಟು ಗಂಭೀರವಾಗಿದೆ. ಪರಿಸ್ಥಿತಿಯನ್ನು ಪರಿಶೀಲಿಸುತ್ತಿರುವುದಾಗಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ತಿಳಿಸಿದ್ದಾರೆ. ತುರ್ತು ಪರಿಹಾರ ಕಾರ್ಯ ಮತ್ತಿತರ ಇತರ ಅಗತ್ಯತೆಗಳನ್ನು ಸರಿದೂಗಿಸಲು ಜಿಲ್ಲಾಧಿಕಾರಿ ಬಳಿಯ ಹೆಚ್ಚುವರಿ ಹಣ ಬಳಸಿಕೊಳ್ಳುವಂತೆ ಸೂಚಿಸಲಾಗಿದೆ ಎಂದು ಅವರು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

Authorities have asked people to stay away from water bodies
Watch | ಜಮ್ಮು: ಭಾರೀ ಮಳೆ, ಪ್ರವಾಹ, ಭೂಕುಸಿತ; ಮೂವರು ಸಾವು

ಹವಾಮಾನ ಇಲಾಖೆಯು ಮುಂದಿನ 40 ಗಂಟೆಗಳಲ್ಲಿ ಜಮ್ಮು ಭಾಗದಲ್ಲಿ ಭಾರಿ ಮಳೆಯಾಗುವ ಮುನ್ಸೂಚನೆಯನ್ನು ನೀಡಿದೆ. ಬಸಂತರ್, ತಾವಿ ಮತ್ತು ಚೆನಾಬ್ ನದಿಗಳು ಅಪಾಯದ ಮಟ್ಟ ಮೀರಿ ಹರಿಯುವ ಎಚ್ಚರಿಕೆ ನೀಡಲಾಗಿದೆ.

ಜಮ್ಮು, ಸಾಂಬಾ, ಕಥುವಾ, ರಿಯಾಸಿ, ಉಧಂಪುರ್, ರಾಜೌರಿ, ರಾಂಬನ್, ದೋಡಾ ಮತ್ತು ಕಿಶ್ತ್ವಾರ್ ಜಿಲ್ಲೆಗಳ ಹಲವು ಸ್ಥಳಗಳಲ್ಲಿ ಭಾರಿ ಮಳೆ ಮುನ್ಸೂಚನೆ ನಡುವೆ ಆಗಸ್ಟ್ 27 ರವರೆಗೆ ಹಠಾತ್ ಮೋಡ ಸ್ಫೋಟಗಳು, ಪ್ರವಾಹಗಳು ಮತ್ತು ಭೂಕುಸಿತಗಳು ಹೆಚ್ಚಾಗುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ಸಲಹೆಗಳನ್ನು ನೀಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com