
ರಾಂಚಿ: 'ದಿಶೋಮ್ ಗುರು' ಶಿಬು ಸೊರೇನ್ ಅವರಿಗೆ 'ಭಾರತ ರತ್ನ' ಪ್ರಶಸ್ತಿ ನೀಡುವಂತೆ ಒತ್ತಾಯಿಸಿದ್ದ ಜಾರ್ಖಂಡ್ ಮುಕ್ತಿ ಮೋರ್ಚಾ(ಜೆಎಂಎಂ) ಈಗ ಅವರಿಗೆ 'ರಾಜ್ಯದ ಪಿತಾಮಹ' ಸ್ಥಾನಮಾನ ನೀಡಬೇಕೆಂದು ಒತ್ತಾಯಿಸುತ್ತಿದೆ.
ಈ ಸಂಬಂಧ ಜೆಎಂಎಂ ವಕ್ತಾರ ಮನೋಜ್ ಪಾಂಡೆ ಅವರು ಮಂಗಳವಾರ ಜಾರ್ಖಂಡ್ ವಿಧಾನಸಭಾ ಅಧಿವೇಶನದಲ್ಲಿ ಮುಖ್ಯಮಂತ್ರಿ ಹೇಮಂತ್ ಸೊರೇನ್ ಅವರನ್ನು ಭೇಟಿ ಮಾಡಿ ಅವರಿಗೆ ಮನವಿ ಪತ್ರ ಹಸ್ತಾಂತರಿಸಿದರು.
"ಜೆಎಂಎಂ ಸಂಸ್ಥಾಪಕ, ದಿವಂಗತ ಶಿಬು ಸೊರೇನ್ ಅವರಿಗೆ ಜಾರ್ಖಂಡ್ 'ರಾಜ್ಯದ ಪಿತಾಮಹ' ಸ್ಥಾನಮಾನ ನೀಡಬೇಕೆಂದು ಒತ್ತಾಯಿಸಿ ಮನವಿ ಪತ್ರ ಸಲ್ಲಿಸಿದ್ದೇನೆ" ಎಂದು ಪಾಂಡೆ ಹೇಳಿದ್ದಾರೆ.
"ಮಹಾತ್ಮ ಗಾಂಧಿಯವರಿಗೆ ರಾಷ್ಟ್ರಪಿತ ಸ್ಥಾನಮಾನ ನೀಡಿರುವಂತೆಯೇ, ಜಾರ್ಖಂಡ್ ಚಳುವಳಿ ಮತ್ತು ರಾಜ್ಯ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಿದ ಶಿಬು ಸೊರೇನ್ ಅವರಿಗೆ 'ರಾಜ್ಯದ ಪಿತಾಮಹ' ಗೌರವ ಸಿಗಬೇಕು" ಎಂದು ಅವರು ಆಗ್ರಹಿಸಿದರು.
ಹೊಸ ಪೀಳಿಗೆ ಅವರ ಕೊಡುಗೆ ಮತ್ತು ಹೋರಾಟದಿಂದ ಸ್ಫೂರ್ತಿ ಪಡೆಯಲು ಸಾಧ್ಯವಾಗುವಂತೆ ಶಿಬು ಸೊರೇನ್ ಅವರ ಚಿತ್ರವನ್ನು ರಾಜ್ಯದ ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಪ್ರದರ್ಶಿಸಬೇಕೆಂದು ಜೆಎಂಎಂ ವಕ್ತಾರರು ಒತ್ತಾಯಿಸಿದರು.
ಜೆಎಂಎಂ ಕಚೇರಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಪಾಂಡೆ, ಜಾರ್ಖಂಡ್‌ನ ಗುರುತನ್ನು ಬಲಪಡಿಸಲು ಈ ಕ್ರಮ ಅಗತ್ಯವಾಗಿದೆ ಮತ್ತು ಇದು ರಾಜ್ಯದ ಜನರು ಹೆಮ್ಮೆ ಪಡುವಂತೆ ಮಾಡುತ್ತದೆ ಎಂದಿದ್ದಾರೆ.
Advertisement