
ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಮತ್ತು ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಮಂಗಳವಾರ, ಮೈಲಾಪುರದ ಸೇಂಟ್ ಜೋಸೆಫ್ ಪ್ರಾಥಮಿಕ ಶಾಲೆಯಲ್ಲಿ ನಗರ ಪ್ರದೇಶಗಳಲ್ಲಿನ 2,430 ಸರ್ಕಾರಿ ಅನುದಾನಿತ ಶಾಲೆಗಳಲ್ಲಿ ಮುಖ್ಯಮಂತ್ರಿಗಳ ಬೆಳಗಿನ ಉಪಾಹಾರ ಯೋಜನೆಗೆ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಪಂಜಾಬ್ ಸಿಎಂ, ಬುಧವಾರ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಪಂಜಾಬ್‌ನಲ್ಲೂ ಇದೇ ರೀತಿಯ ಕಾರ್ಯಕ್ರಮವನ್ನು ಜಾರಿಗೊಳಿಸುವ ಬಗ್ಗೆ ಚರ್ಚಿಸುವುದಾಗಿ ಹೇಳಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಸ್ಟಾಲಿನ್, ಉಪಾಹಾರ ಯೋಜನೆಯನ್ನು ಈಗ ರಾಜ್ಯಾದ್ಯಂತ ವಿಸ್ತರಿಸಲಾಗಿದ್ದು, ಒಟ್ಟು 37,416 ಸರ್ಕಾರಿ ಮತ್ತು ಅನುದಾನಿತ ಶಾಲೆಗಳ 20.59 ಲಕ್ಷ ವಿದ್ಯಾರ್ಥಿಗಳಿಗೆ 600 ಕೋಟಿ ರೂ. ವೆಚ್ಚದಲ್ಲಿ ನೀಡಲಾಗುತ್ತಿದೆ ಎಂದು ಹೇಳಿದರು.
ಈ ವೆಚ್ಚವು ವೆಚ್ಚವಲ್ಲ, ಬದಲಾಗಿ ಭವಿಷ್ಯದಲ್ಲಿ ತಮಿಳು ಸಮಾಜಕ್ಕೆ ಸಮೃದ್ಧ ಲಾಭಾಂಶವನ್ನು ನೀಡುವ ಸಾಮಾಜಿಕ ಹೂಡಿಕೆಯಾಗಿದೆ ಎಂದು ತಮಿಳುನಾಡು ಸಿಎಂ ಒತ್ತಿ ಹೇಳಿದರು.
ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರನ್ನು ಅಭಿನಂದಿಸಿದ ಸ್ಟಾಲಿನ್, ಉನ್ನತ ಶಿಕ್ಷಣ ಪಡೆಯುತ್ತಿರುವ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ 1,000 ರೂ.ಗಳನ್ನು ಒದಗಿಸುವ ಪುದುಮೈ ಪೆನ್ ಯೋಜನೆಯನ್ನು ಪ್ರಾರಂಭಿಸಲು ಎಎಪಿ ನಾಯಕ ಅರವಿಂದ್ ಕೇಜ್ರಿವಾಲ್ ಅವರು ತಮಿಳುನಾಡಿಗೆ ಭೇಟಿ ನೀಡಿದ್ದನ್ನು ನೆನಪಿಸಿಕೊಂಡರು.
ಈ ಉಪಕ್ರಮವು ಹಸಿವನ್ನು ನೀಗಿಸುವ ಯೋಜನೆಗಿಂತ ಹೆಚ್ಚಿನದಾಗಿದೆ ಎಂದು ಬಣ್ಣಿಸಿದ ಸ್ಟಾಲಿನ್, ಉಪಾಹಾರ ಯೋಜನೆಯು ವಿದ್ಯಾರ್ಥಿಗಳ ಪೋಷಣೆ, ಆರೋಗ್ಯ, ಸಾಮಾಜಿಕ ಸಂವಹನ, ಶಾಲೆಗೆ ಹಾಜರಾಗುವ ಉತ್ಸಾಹ, ಏಕಾಗ್ರತೆ ಮತ್ತು ಕಲಿಕಾ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ ಎಂದರು.
ಈ ಉಪಹಾರ ಯೋಜನೆಯು ಇಬ್ಬರೂ ಕೆಲಸ ಮಾಡುವ ಪೋಷಕರ ಮೇಲಿನ ಹೊರೆಯನ್ನು ಕಡಿಮೆ ಮಾಡಿದೆ ಮತ್ತು ಆಸ್ಪತ್ರೆ ಭೇಟಿಯನ್ನೂ ಕಡಿಮೆ ಮಾಡಿದೆ ಎಂದು ಸ್ಟಾಲಿನ್ ಹೇಳಿದರು.
ಬಳಿಕ ಮಾತನಾಡಿದ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್, ಜನರು ಎಂ.ಕೆ. ಸ್ಟಾಲಿನ್ ಅವರ ಮೇಲೆ ಇಟ್ಟಿರುವ ಪ್ರೀತಿಯನ್ನು ನೋಡಿ ತುಂಬಾ ಸಂತೋಷವಾಗಿದೆ. ಅವರು "ನಿಜವಾದ ಜನ ನಾಯಕ" ಎಂದು ಕರೆದರು.
ಉಪಾಹಾರ ಯೋಜನೆಯನ್ನು ಮತ್ತಷ್ಟು ವಿಸ್ತರಿಸಿದ ಸ್ಟಾಲಿನ್ ಅವರನ್ನು ಅಭಿನಂದಿಸಿದ ಮಾನ್, ಪಂಜಾಬ್‌ನಲ್ಲಿ ಇದನ್ನು ಜಾರಿಗೆ ತರುವ ಬಗ್ಗೆ ಪರಿಗಣಿಸಲಾಗುವುದು. ಸರಕಾರವು ಮಕ್ಕಳ ಶಿಕ್ಷಣ ಮತ್ತು ಆರೋಗ್ಯ ಎರಡನ್ನೂ ಕಾಳಜಿ ವಹಿಸುತ್ತಿರುವುದರಿಂದ ಇದು ಗಮನಾರ್ಹ ಸಾಧನೆಯಾಗಿದೆ ಎಂದು ಮಾನ್ ಹೇಳಿದರು.
Advertisement