
ಮಹೋ: ಅನಿರೀಕ್ಷಿತ ಭೌಗೋಳಿಕ ರಾಜಕೀಯ ವಾತಾವರಣದ ದೃಷ್ಟಿಯಿಂದ ಅಲ್ಪಾವಧಿಯ ಸಂಘರ್ಷದಿಂದ ಹಿಡಿದು ಐದು ವರ್ಷಗಳ ಯುದ್ಧದವರೆಗೆ ಎಲ್ಲಾ ರೀತಿಯ ಭದ್ರತಾ ಸವಾಲುಗಳಿಗೆ ಸಿದ್ಧರಾಗಿರಬೇಕು ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಬುಧವಾರ ಹೇಳಿದ್ದಾರೆ.
ಇಲ್ಲಿನ ಆರ್ಮಿ ವಾರ್ ಕಾಲೇಜ್‌ನಲ್ಲಿ ನಡೆದ 'ಯುದ್ಧ ಕುರಿತ ಸಂವಾದ' ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಭಾರತವು ಯಾರ ಭೂಮಿಯನ್ನು ಬಯಸುವುದಿಲ್ಲ, ಆದರೆ ತನ್ನ ಪ್ರಾದೇಶಿಕ ಸಮಗ್ರತೆ ರಕ್ಷಿಸಲು ಯಾವುದೇ ಹಂತಕ್ಕೂ ಹೋಗಲು ಸಿದ್ಧವಾಗಿದೆ ಎಂದು ಹೇಳಿದರು.
"ಇಂದಿನ ಯುಗದಲ್ಲಿ, ಯುದ್ಧಗಳು ತುಂಬಾ ಹಠಾತ್ ಮತ್ತು ಅನಿರೀಕ್ಷಿತವಾಗಿ ಮಾರ್ಪಟ್ಟಿವೆ. ಯಾವುದೇ ಯುದ್ಧವು ಯಾವಾಗ ಕೊನೆಗೊಳ್ಳುತ್ತದೆ ಮತ್ತು ಅದು ಎಷ್ಟು ಕಾಲ ಉಳಿಯುತ್ತದೆ ಎಂದು ಊಹಿಸಲು ತುಂಬಾ ಕಷ್ಟ" ಎಂದು ಸಿಂಗ್ ಹೇಳಿದರು.
ಭಾರತೀಯ ಸೇನೆಯು ಪ್ರತಿಯೊಂದು ಪರಿಸ್ಥಿತಿಗೂ ಸನ್ನದ್ಧವಾಗಿರಬೇಕು. ಅಲ್ವಾವಧಿಯಿಂದ ಹಿಡಿದು ಐದು ವರ್ಷಗಳವರೆಗೆ ಯಾವುದೇ ಯುದ್ಧ ಸಂಭವಿಸಿದ್ದರೂ ಅದಕ್ಕೆ ನಾವು ಸಂಪೂರ್ಣವಾಗಿ ಸಿದ್ಧರಾಗಿರಬೇಕು ಎಂದು ಅವರು ಹೇಳಿದರು.
ರಾಷ್ಟ್ರೀಯ ಭದ್ರತೆಯು ಇನ್ನು ಮುಂದೆ ಮಿಲಿಟರಿಯ ವಿಷಯವಲ್ಲ. ಇದು 'ಇಡೀ ರಾಷ್ಟ್ರದ ವಿಚಾರವಾಗಿದೆ ಎಂದು ಹೇಳಿದ ಸಚಿವರು, ಆಪರೇಷನ್ ಸಿಂಧೂರ್‌ನಲ್ಲಿ ಮೂರು ಸೇನೆಗಳು ತೋರಿದ ಸೇವೆಯನ್ನು ಶ್ಲಾಘಿಸಿದರು.
ಮೂರು ರಕ್ಷಣಾ ಪಡೆಗಳ ಮುಖ್ಯಸ್ಥ ಜನರಲ್ ಅನಿಲ್ ಚೌಹಾಣ್, ಏರ್ ಚೀಫ್ ಮಾರ್ಷಲ್ ಎಪಿ ಸಿಂಗ್ ಮತ್ತು ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ದಿನೇಶ್ ಕೆ ತ್ರಿಪಾಠಿ ಸಂವಾದದಲ್ಲಿ ಉಪಸ್ಥಿತರಿದ್ದರು.
Advertisement