
ಲಖನೌ: ಉತ್ತರ ಪ್ರದೇಶದ ಚಂದೌಲಿಯಲ್ಲಿ ಗುರುವಾರ ಸುಮಾರು 2 ಕೋಟಿ ರೂಪಾಯಿ ಮೌಲ್ಯದ 1 ಕೆಜಿಗೂ ಹೆಚ್ಚು ಹೆರಾಯಿನ್‌ನೊಂದಿಗೆ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರ ಪ್ರಕಾರ, ರಾಜಸ್ಥಾನದಿಂದ ಕಳ್ಳಸಾಗಣೆ ಮಾಡುತ್ತಿದ್ದ ಈ ಹೆರಾಯಿನ್ ಅನ್ನು, ನೆರೆಯ ಘಾಜಿಪುರ ಜಿಲ್ಲೆಯ ಜಮಾನಿಯಾ ಪ್ರದೇಶಕ್ಕೆ ಸರಬರಾಜು ಮಾಡಲು ಉದ್ದೇಶಿಸಲಾಗಿತ್ತು ಎಂದು ಅವರು ಹೇಳಿದ್ದಾರೆ.
ಜಿಟಿಆರ್ ಸೇತುವೆಯ ಬಳಿ ಅನುಮಾನಾಸ್ಪದ ವಸ್ತುವನ್ನು ಹೊತ್ತ ವ್ಯಕ್ತಿಯೊಬ್ಬರು ನಿಂತಿದ್ದಾರೆ ಎಂಬ ಖಚಿತ ಮಾಹಿತಿ ಮೊಘಲ್‌ಸರಾಯ್ ಕೊಟ್ವಾಲಿ ಪೊಲೀಸ್ ಠಾಣೆಯ ತಂಡಕ್ಕೆ ಸಿಕ್ಕಿತ್ತು ಎಂದು ವೃತ್ತ ಅಧಿಕಾರಿ ಕೃಷ್ಣ ಮುರಾರಿ ತಿಳಿಸಿದ್ದಾರೆ.
ಪೊಲೀಸ್ ತಂಡ ಸ್ಥಳಕ್ಕೆ ಧಾವಿಸಿ ಮಾನಸರೋವರ್ ಪೋಖರಾ ಬಳಿ ಚೀಲವನ್ನು ಹೊತ್ತ ವ್ಯಕ್ತಿಯನ್ನು ವಶಕ್ಕೆ ಪಡೆದು, ಪರಿಶೀಲಿಸಿದಾಗ 1.12 ಕೆಜಿ ಹೆರಾಯಿನ್ ಮತ್ತು 1,000 ರೂಪಾಯಿ ನಗದು ಹೊಂದಿರುವ ಎರಡು ಪ್ಯಾಕೆಟ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಮುರಾರಿ ಹೇಳಿದ್ದಾರೆ.
ಈ ಡ್ರಗ್ಸ್ ನ ಮೌಲ್ಯ ಸುಮಾರು 2 ಕೋಟಿ ರೂಪಾಯಿ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಯನ್ನು ರಾಜಸ್ಥಾನದ ಚಿತ್ತೋರ್‌ಗಢ ಜಿಲ್ಲೆಯ ಗುಜರೋಕಿ ಮೌರಾನ್ ಗ್ರಾಮದ ನಿವಾಸಿ ಸೀತಾರಾಮ್ ಭೀಲ್(24) ಎಂದು ಗುರುತಿಸಲಾಗಿದೆ.
ಭೀಲ್ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ಆತನನ್ನು ಜೈಲಿಗೆ ಕಳುಹಿಸಲಾಗಿದೆ. ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Advertisement