
ಅಹಮದಾಬಾದ್: ಇಂಜಿನ್ ನಲ್ಲಿ ತಾಂತ್ರಿಕ ದೋಷ ಕಂಡುಬಂದ ಹಿನ್ನೆಲೆಯಲ್ಲಿ ಸುಮಾರು 150 ಪ್ರಯಾಣಿಕರಿದ್ದ ಇಂಡಿಗೋ ಸೂರತ್ -ದುಬೈ ವಿಮಾನ (6E-1507)ಗುಜರಾತ್ ನ ಅಹಮದಾಬಾದ್ ವಿಮಾನ ನಿಲ್ದಾಣದಲ್ಲಿ ತುರ್ತು ಲ್ಯಾಂಡಿಂಗ್ ಆಗಿರುವ ಘಟನೆ ಭಾನುವಾರ ನಡೆದಿದೆ.
ತಕ್ಷಣ ಕಾರ್ಯಪ್ರವೃತ್ತರಾದ ಪೈಲಟ್ ಸಂಭಾವ್ಯ ಅನಾಹುತವನ್ನು ತಪ್ಪಿಸಿದ್ದು, ಎಲ್ಲಾ ಪ್ರಯಾಣಿಕರು ಸುರಕ್ಷಿತವಾಗಿ ಇಳಿದಿದ್ದಾರೆ. ಬಳಿಕ ಮತ್ತೊಂದು ಪರ್ಯಾಯ ವಿಮಾನದಲ್ಲಿ ದುಬೈಗೆ ತೆರಳಿದ್ದಾರೆ.
ಸೂರತ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಟೇಕ್ ಆಪ್ ಆದ ಕೂಡಲೇ ವಿಮಾನದ ಇಂಜಿನ್ ವೊಂದರಲ್ಲಿ ತಾಂತ್ರಿಕ ದೋಷ ಕಂಡುಬಂದಿದೆ. ಇದನ್ನು ಅರಿತ ಕೂಡಲೇ ಪೈಲಟ್ ಏರ್ ಟ್ರಾಫಿಕ್ ಕಂಟ್ರೋಲ್ ಗೆ ವಿಷಯ ತಿಳಿಸಿದ್ದು, ಹತ್ತಿರದಲ್ಲಿದ್ದ ಅಹಮದಾಬಾದ್ ನ ಸರ್ದಾರ್ ವಲ್ಲಭಾಯಿ ಪಟೇಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಡೆಗೆ ತಿರುಗಿಸಲು ಅನುಮತಿ ಕೋರಿದ್ದಾರೆ.
ಇಂಜಿನ್ ನಲ್ಲಿ ತೊಂದರೆಯ ಘೋಷಣೆ ನಂತರ ಪ್ರಯಾಣಿಕರು ಆತಂಕಕ್ಕೊಳಗಾಗಿದ್ದರು. ಆದರೆ ಸಿಬ್ಬಂದಿ ಪರಿಸ್ಥಿತಿಯನ್ನು ನಿಭಾಯಿಸಿದ್ದಾರೆ. ಯಾವುದೇ ನೋವಿನ ಕುರಿತು ವರದಿಯಾಗಿಲ್ಲ. ಎಲ್ಲಾ ಪ್ರಯಾಣಿಕರು ಅಹಮದಾಬಾದ್ ನಲ್ಲಿ ಸುರಕ್ಷಿತವಾಗಿ ಇಳಿದಿದ್ದಾರೆ.
ತುರ್ತು ಭೂ ಸ್ಪರ್ಶ ಕುರಿತು ವಿಮಾನ ನಿಲ್ದಾಣದ ಅಧಿಕಾರಿಯೊಬ್ಬರು ಮಾತನಾಡಿದ್ದು, ಸೂರತ್ ನಿಂದ ದುಬೈಗೆ ಹೊರಟ್ಟಿದ್ದ ಇಂಡಿಗೋ ವಿಮಾನವೊಂದು ಅಹಮಾದಾಬಾದ್ ನಲ್ಲಿ ತುರ್ತು ಭೂ ಸ್ಪರ್ಶ ಮಾಡಿದೆ.
ಈ ಸಂಬಂಧ ವಿಮಾನ ನಿಲ್ದಾಣದ ತಾಂತ್ರಿಕ ತಂಡ ವಿಮಾನವನ್ನು ಸಮಗ್ರವಾಗಿ ಪರಿಶೀಲಿಸಿದೆ. ಪ್ರಯಾಣಿಕರಿಗೆ ಪರ್ಯಾಯ ವಿಮಾನವೊಂದನ್ನು ವ್ಯವಸ್ಥೆ ಮಾಡಲಾಯಿತು. ವಿಮಾನ ಕಾರ್ಯಾಚರಣೆಯನ್ನು ಯಾವುದೇ ಅಡಚಣೆಯಂತಹ ವರದಿಯಾಗಿಲ್ಲ. ತುರ್ತು ಲ್ಯಾಂಡಿಂಗ್ ಆದ ನಂತರ ಇಂಜಿನ್ ತೊಂದರೆ ಕುರಿತು ಇಂಡಿಗೋ ಇಂಜಿನಿಯರ್ ತನಿಖೆ ಆರಂಭಿಸಿದ್ದಾರೆ ಎಂದು ತಿಳಿಸಿದ್ದಾರೆ.
Advertisement