
ಟೋಕಿಯೋ: ಎರಡು ದಿನಗಳ ಭೇಟಿಗಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಜಪಾನ್'ಗೆ ಭೇಟಿ ನೀಡಿದ್ದು, ಈ ವೇಳೆ ಮೋದಿಯವರಿಗೆ ಅದ್ಧೂರಿಯಾಗಿ ಸ್ವಾಗತ ಕೋರಲಾಗಿದೆ.
ಮೋದಿಯವರು ಜಪಾನ್'ಗೆ ಭೇಟಿ ನೀಡಿರುವ ಕುರಿತು ವಿದೇಶಾಂಗ ಸಚಿವಾಲಯ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿದೆ.
ಭಾರತ-ಜಪಾನ್ ಪಾಲುದಾರಿಕೆಯನ್ನು ಮುನ್ನಡೆಸಲು ಪ್ರಧಾನಿ ಮೋದಿಯವರು ಇಂದು ಸಂಜೆ ಜಪಾನ್ ಪ್ರಧಾನಿ ಶಿಗೇರು ಇಶಿಬಾ ಅವರೊಂದಿಗೆ ಚರ್ಚೆ ನಡೆಸಲಿದ್ದಾರೆ. ಪ್ರಧಾನಿ ಮೋದಿ ಅವರ ಈ ಭೇಟಿ ಎರಡೂ ದೇಶಗಳ ನಡುವಿನ ನಾಗರೀಕರು ಮತ್ತು ಸಾಂಸ್ಕೃತಿಕ ಸಂಬಂಧಗಳನ್ನು ಬಲಪಡಿಸಲು ಒಂದು ಅವಕಾಶವಾಗಿದೆ ಎಂದು ಹೇಳಿದೆ.
ಆಗಸ್ಟ್ 29 ರಿಂದ 30 ರವರೆಗೆ ಮೋದಿಯವರು ಜಪಾನ್ ರಾಷ್ಟ್ರದಲ್ಲಿ ತಂಗಲಿದ್ದು, ಈ ಸಮಯದಲ್ಲಿ ಜಪಾನ್ ಪ್ರಧಾನಿ ಇಶಿಬಾ ಅವರೊಂದಿಗೆ ಮಾತುಕತೆ ನಡೆಸಲಿದ್ದಾರೆ.
ನಮ್ಮ ಕಾರ್ಯತಂತ್ರ ಮತ್ತು ಜಾಗತಿಕ ಪಾಲುದಾರಿಕೆಯಲ್ಲಿ ಕಳೆದ 11 ವರ್ಷಗಳಲ್ಲಿ ಸ್ಥಿರ ಮತ್ತು ಗಮನಾರ್ಹ ಪ್ರಗತಿ ಸಾಧಿಸಲಾಗಿದ್ದು, ಮುಂದಿನ ಹಂತ ತಲುಪುವತ್ತ ನಾವು ಗಮನಹರಿಸುತ್ತೇವೆ. ನಮ್ಮ ಈ ಸಹಯೋಗಕ್ಕೆ ಹೊಸ ಶಕ್ತಿ ನೀಡಲು, ನಮ್ಮ ಆರ್ಥಿಕ ಮತ್ತು ಹೂಡಿಕೆ ಸಂಬಂಧಗಳ ವ್ಯಾಪ್ತಿ ಮತ್ತು ಮಹತ್ವಾಕಾಂಕ್ಷೆಯನ್ನು ವಿಸ್ತರಿಸಲು ಮತ್ತು AI ಸೇರಿದಂತೆ ಹೊಸ ಮತ್ತು ಉದಯೋನ್ಮುಖ ತಂತ್ರಜ್ಞಾನಗಳಲ್ಲಿ ಸಹಕಾರವನ್ನು ಹೆಚ್ಚಿಸಲು ನಾವು ಪ್ರಯತ್ನಿಸುತ್ತೇವೆಂದು ಮೋದಿಯವರು ಹೇಳಿದ್ದಾರೆ.
ಜಪಾನ್ ಮತ್ತು ಚೀನಾ ಭೇಟಿ ನಮ್ಮ ರಾಷ್ಟ್ರೀಯ ಹಿತಾಸಕ್ತಿಗಳು ಮತ್ತು ಆದ್ಯತೆಗಳನ್ನು ಮತ್ತಷ್ಟು ಹೆಚ್ಚಿಸುತ್ತವೆ. ಪ್ರಾದೇಶಿಕ ಮತ್ತು ಜಾಗತಿಕ ಶಾಂತಿ, ಭದ್ರತೆ ಮತ್ತು ಸುಸ್ಥಿರ ಅಭಿವೃದ್ಧಿಯನ್ನು ಮುನ್ನಡೆಸುವಲ್ಲಿ ಫಲಪ್ರದ ಸಹಕಾರವನ್ನು ನಿರ್ಮಿಸಲು ಕೊಡುಗೆ ನೀಡುತ್ತವೆ ಎಂದು ನನಗೆ ವಿಶ್ವಾಸವಿದೆ ಎಂದು ತಿಳಿಸಿದ್ದಾರೆ.
ಜಪಾನ್ ಭೇಟಿ ಬಳಿಕ ಮೋದಿಯವರು ಆಗಸ್ಟ್ 31 ಮತ್ತು ಸೆಪ್ಟೆಂಬರ್ 1 ರಂದು ಟಿಯಾಂಜಿನ್‌ನಲ್ಲಿ ನಡೆಯಲಿರುವ ಶಾಂಘೈ ಸಹಕಾರ ಸಂಸ್ಥೆಯ (SCO) ವಾರ್ಷಿಕ ಶೃಂಗಸಭೆಯಲ್ಲಿ ಪಾಲ್ಗೊಳ್ಳಳಿದ್ದಾರೆ. ಬಳಿಕ ಎರಡು ದಿನಗಳ ಭೇಟಿಗಾಗಿ ಚೀನಾ ರಾಷ್ಟ್ರಕ್ಕೂ ಪ್ರಯಾಣಿಸಲಿದ್ದಾರೆ.
Advertisement