
ನವದೆಹಲಿ: ಆಪರೇಷನ್ ಸಿಂಧೂರ್ ವೇಳೆ ಪಾಕಿಸ್ತಾನದ ಮಿಲಿಟರಿ ಟಾರ್ಗೆಟ್ ಮೇಲೆ ಭಾರತೀಯ ವಾಯುಪಡೆಯು 50ಕ್ಕಿಂತ ಕಡಿಮೆ ಶಸ್ತ್ರಾಸ್ತ್ರಗಳನ್ನು ಹಾರಿಸಿದ್ದರಿಂದ, ಮೇ 10 ರ ವೇಳೆಗೆ ಇಸ್ಲಾಮಾಬಾದ್ ಯುದ್ಧವನ್ನು ಕೊನೆಗೊಳಿಸುವಂತೆ ವಿನಂತಿಸಬೇಕಾಯಿತು ಎಂದು ವಾಯುಪಡೆ ಉಪ ಮುಖ್ಯಸ್ಥ ಏರ್ ಮಾರ್ಷಲ್ ನರ್ಮದೇಶ್ವರ ತಿವಾರಿ ಅವರು ಶನಿವಾರ ಹೇಳಿದ್ದಾರೆ.
ಮೇ 9 ಮತ್ತು 10 ರ ಮಧ್ಯರಾತ್ರಿ ಪಾಕಿಸ್ತಾನದ ದಾಳಿಯ ನಂತರ ಐಎಎಫ್ ಪಾಕಿಸ್ತಾನ ಮಿಲಿಟರಿಯ ಮೇಲೆ "ಸಂಪೂರ್ಣ ಪ್ರಾಬಲ್ಯ" ಸಾಧಿಸಿತು ಎಂದು ಏರ್ ಮಾರ್ಷಲ್ ತಿವಾರಿ ಅವರು ಕಾರ್ಯಾಚರಣೆಯನ್ನು ವಿವರಿಸಿದ್ದಾರೆ.
"50 ಕ್ಕಿಂತ ಕಡಿಮೆ ಶಸ್ತ್ರಾಸ್ತ್ರಗಳಲ್ಲಿ, ನಾವು ಸಂಪೂರ್ಣ ಪ್ರಾಬಲ್ಯ ಸಾಧಿಸಲು ಸಾಧ್ಯವಾಯಿತು ಎಂಬುದು ನಮಗೆ ಅತ್ಯಂತ ಮಹತ್ವದ್ದಾಗಿದ್ದು, ಇದನ್ನು ನಾನು ನಿಮಗೆ ಹೇಳಲೇಬೇಕು. ಇದು ಹಿಂದೆಂದೂ ಈ ರೀತಿ ಆಗಿಲ್ಲ" ಎಂದು ಎನ್‌ಡಿಟಿವಿ ರಕ್ಷಣಾ ಶೃಂಗಸಭೆಯಲ್ಲಿ ತಿವಾರಿ ಹೇಳಿದ್ದಾರೆ.
"ನಾವು ಪಾಕಿಸ್ತಾನದಿಂದ ಪ್ರತಿಕ್ರಿಯೆಯನ್ನು ನಿರೀಕ್ಷಿಸಿದ್ದೆವು ಮತ್ತು ನಾವು ಮಿಲಿಟರಿ ಗುರಿಗಳ ಮೇಲೆ ಮಾತ್ರ ದಾಳಿ ಮಾಡಿದ್ದೇವೆ. ಆದರೆ ಮೇ 9-10 ರ ರಾತ್ರಿ ಮುಖ್ಯ ದಾಳಿ ನಡೆದಾಗ, ನಾವು ಸರಿಯಾದ ಸಂದೇಶವನ್ನು ಕಳುಹಿಸಬೇಕು ಎಂದು ನಿರ್ಧರಿಸಿದ ಸಮಯ ಅದು. ನಾವು ಅವರ ಮೇಲೆ ಪ್ಯಾನಲ್-ಫ್ರಂಟ್ ದಾಳಿ ಮಾಡಿದ್ದೇವೆ" ಎಂದು ಅವರು ತಿಳಿಸಿದ್ದಾರೆ.
"ನಾವು ಪ್ರತಿಯೊಂದು ಶಸ್ತ್ರಾಸ್ತ್ರವನ್ನೂ ಗಣನೆಗೆ ತೆಗೆದುಕೊಂಡಿದ್ದೇವೆ. 1971ರ ಯುದ್ಧದ ಸಮಯದಲ್ಲಿಯೂ ಸಹ ಮಾಡಲಾರದಂತಹ ದಾಳಿಯನ್ನು ನಾವು ಮಾಡಿದ್ದೇವೆ. ನಾವು ಅವರ ಸಾಮರ್ಥ್ಯಕ್ಕೆ ದೊಡ್ಡ ಹಾನಿ ಮಾಡಿದ್ದೇವೆ. IAF ತನ್ನ ದಾಳಿಗಳನ್ನು ಕೇವಲ ಮಿಲಿಟರಿ ಟಾರ್ಗೆಟ್ ಗೆ ಸೀಮಿತಗೊಳಿಸಿದೆ ಎಂದು ಹೇಳಿದ್ದಾರೆ.
ಪಾಕಿಸ್ತಾನ ಸೇನಾ ಸಾಮರ್ಥ್ಯವನ್ನು ಬಹಿರಂಗಪಡಿಸುವುದು ಮತ್ತು "ಸರಿಯಾದ ಸಂದೇಶ"ವನ್ನು ಕಳುಹಿಸುವುದು ಈ ದಾಳಿಯ ಹಿಂದಿನ ಉದ್ದೇಶವಾಗಿತ್ತು ಎಂದು IAF ಹಿರಿಯ ಅಧಿಕಾರಿ ತಿಳಿಸಿದ್ದಾರೆ.
ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತಿಯಾಗಿ ಭಾರತೀಯ ಸೇನೆ, ಪಾಕಿಸ್ತಾನ ನಿಯಂತ್ರಣದಲ್ಲಿರುವ ಪ್ರದೇಶಗಳಲ್ಲಿನ ಉಗ್ರರ ನೆಲೆಗಳನ್ನು ಗುರಿಯಾಗಿಸಿಕೊಂಡು ಮೇ 7 ರಂದು ಆಪರೇಷನ್ ಸಿಂಧೂರ್ ಪ್ರಾರಂಭಿಸಿತು.
ಈ ದಾಳಿಯು ಉಭಯ ದೇಶಗಳ ನಡುವೆ ನಾಲ್ಕು ದಿನಗಳ ಕಾಲ ತೀವ್ರ ಘರ್ಷಣೆಗೆ ಕಾರಣವಾಯಿತು. ನಂತರ ಮೇ 10 ರಂದು ಭಾರತ, ಪಾಕಿಸ್ತಾನ ಕದನ ವಿರಾಮ ಘೋಷಿಸಿದವು.
Advertisement