
ಚಂಡೀಗಢ: ಪಂಜಾಬ್ ನಲ್ಲಿ ಪ್ರವಾಹದಿಂದ ಹಲವು ಹಳ್ಳಿಗಳು ತತ್ತರಿಸಿದ್ದು, ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಯ ಮೇಲ್ವಿಚಾರಣೆಗಾಗಿ ಪ್ರವಾಹ ಪೀಡಿತ ಪ್ರದೇಶಗಳ ಪ್ರವಾಸದಲ್ಲಿದ್ದ ಮೂವರು ಸಚಿವರು ಸ್ವೀಡನ್ ಮತ್ತು ಗೋವಾದಲ್ಲಿನ ಐಷಾರಾಮಿ ಕ್ರೂಸ್‌ಗಳ ಕುರಿತು ಮಾತನಾಡುತ್ತಿರುವುದು ಕ್ಯಾಮೆರಾದಲ್ಲಿ ಸೆರೆಯಾಗಿದೆ. ಸಚಿವರ ಬೇಜವಾಬ್ದಾರಿ ಬಗ್ಗೆ ಪ್ರತಿಪಕ್ಷಗಳ ತೀವ್ರ ಆಕ್ರೋಶ ವ್ಯಕ್ತಪಡಿಸಿವೆ.
ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ 27 ಸೆಕೆಂಡುಗಳ ವಿಡಿಯೋದಲ್ಲಿ, ಮೂವರು ರಾಜ್ಯ ಕ್ಯಾಬಿನೆಟ್ ಸಚಿವರು ತರಣ್ ತರಣ್‌ನಲ್ಲಿನ ಪ್ರವಾಹ ಪರಿಸ್ಥಿತಿಯನ್ನು ಪರಿಶೀಲಿಸುವಾಗ ತಮ್ಮ ಕ್ರೂಸ್ ಪ್ರವಾಸದ ಬಗ್ಗೆ ಚರ್ಚಿಸುತ್ತಿದ್ದಾರೆ.
ಮೂಲಗಳು ಭುಲ್ಲರ್ ಅವರ ಫೇಸ್‌ಬುಕ್ ಪುಟದಲ್ಲಿ ವಿಡಿಯೋವನ್ನು ನೇರ ಪ್ರಸಾರ ಮಾಡಲಾಗುತ್ತಿದೆ ಎಂದು ಹೇಳಿವೆ. ಆದರೆ ಅದನ್ನು ದೃಢೀಕರಿಸಲು ಸಾಧ್ಯವಾಗಿಲ್ಲ. ವಿಡಿಯೋದಲ್ಲಿ, ಭುಲ್ಲರ್ ಅವರು ಸ್ವೀಡನ್‌ಗೆ ಭೇಟಿ ನೀಡಿದ್ದನ್ನು ನೆನಪಿಸಿಕೊಳ್ಳುತ್ತಾರೆ, ಅಲ್ಲಿ ಅವರು ಹೋಟೆಲ್‌ಗಳು ಮತ್ತು ಇತರ ಐಷಾರಾಮಿ ಸೌಲಭ್ಯಗಳನ್ನು ಹೊಂದಿರುವ ಬೃಹತ್ ಕ್ರೂಸ್ ಹಡಗುಗಳಲ್ಲಿನ ತಮ್ಮ ಅನುಭವ ಹಂಚಿಕೊಂಡಿದ್ದಾರೆ.
ಭುಲ್ಲರ್ ಅವರು ಮಾತನಾಡುವಾಗ ಮಧ್ಯ ಪ್ರವೇಶಿಸಿದ ಗೋಯಲ್ ಗೋವಾದಲ್ಲಿ ಅದೇ ರೀತಿಯ ಕ್ರೂಸ್‌ಗಳು ಇವೆ ಎಂದು ಆಕಸ್ಮಿಕವಾಗಿ ಹೇಳುತ್ತಾರೆ. ಪ್ರವಾಹ ಪರಿಹಾರದ ಬಗ್ಗೆ ಚರ್ಚಿಸಬೇಕಾದ ಸಚಿವರು, ತಮ್ಮ ಐಷಾರಾಮಿ ಕ್ರೂಸ್ ಪ್ರವಾಸದ ಬಗ್ಗೆ ಚರ್ಚಿಸುತ್ತಿರುವುದು ಪ್ರತಿಪಕ್ಷಗಳ ಆಕ್ರೋಶಕ್ಕೆ ಕಾರಣವಾಗಿದೆ.
ಪಂಜಾಬ್‌ನ ಹಿರಿಯ ಕಾಂಗ್ರೆಸ್ ನಾಯಕ ಮತ್ತು ವಿರೋಧ ಪಕ್ಷದ ನಾಯಕ ಪ್ರತಾಪ್ ಸಿಂಗ್ ಬಜ್ವಾ ಮತ್ತು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ತರುಣ್ ಚುಗ್ ಅವರು X ನಲ್ಲಿ ವಿಡಿಯೋ ಕ್ಲಿಪ್‌ನಲ್ಲಿ ಹಂಚಿಕೊಂಡಿದ್ದು, ಲೋಕೋಪಯೋಗಿ ಸಚಿವ ಹರ್ಭಜನ್ ಸಿಂಗ್, ಪಂಜಾಬ್ ಜಲಸಂಪನ್ಮೂಲ ಸಚಿವ ಬರೀಂದರ್ ಕುಮಾರ್ ಗೋಯಲ್ ಮತ್ತು ಸಾರಿಗೆ ಸಚಿವ ಲಾಲ್‌ಜಿತ್ ಸಿಂಗ್ ಭುಲ್ಲರ್ ಅವರು ಲೈಫ್ ಜಾಕೆಟ್‌ಗಳೊಂದಿಗೆ ದೋಣಿಯಲ್ಲಿ ಕುಳಿತು ಸ್ವೀಡನ್ ಮತ್ತು ಗೋವಾದಲ್ಲಿನ ತಮ್ಮ ಕ್ರೂಸ್ ಪ್ರವಾಸದ ಕುರಿತು ಚರ್ಚಿಸುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದು ಟೀಕಿಸಿದ್ದಾರೆ.
ಎಎಪಿ ಸರ್ಕಾರ ಮತ್ತು ಸಚಿವರನ್ನು ಟೀಕಿಸಿದ ಚುಗ್, "ಪಂಜಾಬ್ ಮುಳುಗಿ ಹೋಗಿದೆ, ಹೊಲಗಳು ನಾಶವಾಗಿವೆ, ಮನೆಗಳು ಹಾನಿಗೊಳಗಾಗಿವೆ ಮತ್ತು ಕುಟುಂಬಗಳು ಬೀದಿಪಾಲಾಗಿವೆ. ಆದರೆ ಇಂತಹ ಪರಿಸ್ಥಿತಿಯಲ್ಲಿಯೂ ಸಚಿವರು ಪ್ರವಾಹ ಪೀಡಿತರ ಸಂಕಷ್ಟಗಳ ಬಗ್ಗೆ ಚರ್ಚಿಸುವ ಬದಲು ದೋಣಿಯಲ್ಲಿ ಕುಳಿತು ಸ್ವೀಡನ್-ಗೋವಾ ಕ್ರೂಸ್ ಬಗ್ಗೆ ಮಾತನಾಡುತ್ತಿದ್ದಾರೆ" ಎಂದು ಹೇಳಿದ್ದಾರೆ.
Advertisement