
ಮುಂಬೈ: ಮುಂಬೈನ ಆಜಾದ್ ಮೈದಾನದಲ್ಲಿ ಮರಾಠಾ ಮೀಸಲಾತಿಗಿ ಆಗ್ರಹಿಸಿ ಮನೋಜ್ ಜಾರಂಗೆ ನಡೆಸುತ್ತಿರುವ ಉಪವಾಸ ಸತ್ಯಾಗ್ರಹ ಭಾನುವಾರ ಮೂರನೇ ದಿನಕ್ಕೆ ಕಾಲಿಟ್ಟಿದ್ದು, ತಮ್ಮ ಬೇಡಿಕೆ ಸಾಂವಿಧಾನಿಕವಾಗಿದೆ ಎಂದು ಪ್ರತಿಪಾದಿಸಿದ್ದಾರೆ.
ಈ ಮಧ್ಯೆ, ಮಹಾರಾಷ್ಟ್ರದ ಕೆಲವು ಬಿಜೆಪಿ ಸಚಿವರು ಮರಾಠ ಸಮುದಾಯಕ್ಕೆ ಅಸ್ತಿತ್ವದಲ್ಲಿರುವ EWS ಕೋಟಾದಡಿ ಮೀಸಲಾತಿ ನೀಡಬೇಕು ಎಂದು ಹೇಳಿದ್ದಾರೆ.
ಮರಾಠರಿಗೆ ಶೇಕಡಾ 10 ರಷ್ಟು ಮೀಸಲಾತಿಗೆ ಒತ್ತಾಯಿಸುತ್ತಿದ್ದಾರೆ ಮತ್ತು ಎಲ್ಲಾ ಮರಾಠರನ್ನು(ಕುಂಬಿಸ್) ಇತರ ಹಿಂದುಳಿದ ವರ್ಗಗಳ ಕೋಟಾದಡಿ ಸರ್ಕಾರಿ ಉದ್ಯೋಗ ಮತ್ತು ಶಿಕ್ಷಣದಲ್ಲಿ ಮೀಸಲಾತಿ ನೀಡಬೇಕೆಂದು ಒತ್ತಾಯಿಸಿ ಜಾರಂಗೆ ಅವರು ಉಪವಾಸ ಸತ್ಯಾಗ್ರಹಗಳನ್ನು ಕೈಗೊಂಡಿದ್ದಾರೆ.
ತಮ್ಮ ಬೇಡಿಕೆಗಳನ್ನು ಈಡೇರಿಸುವವರೆಗೆ ಮುಂಬೈಯಿಂದ ಕದಲುವುದಿಲ್ಲ ಎಂದು ಜಾರಂಗೆ ಹೇಳಿದ್ದು, "ಸರ್ಕಾರ 58 ಲಕ್ಷ ಮರಾಠರನ್ನು ಕುಂಬಿಸ್ ಎಂದು ದಾಖಲಿಸಿದೆ" ಎಂದಿದ್ದಾರೆ.
"ಸರ್ಕಾರ ಬೇಡಿಕೆ ಈಡೇರಿಸದಿದ್ದರೆ ನಾಳೆಯಿಂದ ನಾನು ನೀರು ಸಹ ಕುಡಿಯುವುದಿಲ್ಲ ಮತ್ತು ಕೋಟಾ ಬೇಡಿಕೆ ಈಡೇರುವವರೆಗೆ ನಾನು ಮುಂಬೈಯಿಂದ ಹಿಂತಿರುಗುವುದಿಲ್ಲ. ಏನೇ ಆದರೂ ನಾವು ಒಬಿಸಿ ವರ್ಗದ ಅಡಿಯಲ್ಲಿ ಮರಾಠಾ ಮೀಸಲಾತಿಯನ್ನು ಪಡೆದೇ ಪಡೆಯುತ್ತೇವೆ" ಎಂದು ಜಾರಂಗೆ ಹೇಳಿದ್ದಾರೆ.
ಏತನ್ಮಧ್ಯೆ, ಮಹಾರಾಷ್ಟ್ರದ ಇಬ್ಬರೂ ಬಿಜೆಪಿ ಸಚಿವರಾದ ಚಂದ್ರಕಾಂತ್ ಪಾಟೀಲ್ ಮತ್ತು ನಿತೇಶ್ ರಾಣೆಯವರು, ಮರಾಠಾ ಸಮುದಾಯವನ್ನು ಒಬಿಸಿ ಎಂದು ವರ್ಗೀಕರಿಸುವ ಬದಲು ಅಸ್ತಿತ್ವದಲ್ಲಿರುವ ಇಡಬ್ಲ್ಯೂಎಸ್ ಕೋಟಾದಡಿ ಮೀಸಲಾತಿ ನೀಡಬೇಕು ಎಂದು ಹೇಳಿದ್ದಾರೆ.
ಪಾಟೀಲ್ ಮತ್ತು ರಾಣೆ ಇಬ್ಬರೂ ಮರಾಠಾ ಸಮುದಾಯಕ್ಕೆ ಸೇರಿದವರು.
Advertisement