HR88B8888 ಭಾರತದ ಅತ್ಯಂತ ದುಬಾರಿ ಕಾರು ನೋಂದಣಿ ಸಂಖ್ಯೆ ಮರು ಹರಾಜಿಗೆ..! ಕಾರಣ ಏನು ಗೊತ್ತಾ?
ನವದೆಹಲಿ: ದುಬಾರಿ ಬೆಲೆಗೆ ಬಿಕರಿಯಾಗಿ ದಾಖಲೆ ನಿರ್ಮಿಸಿದ್ದ ಹರ್ಯಾಣ ನೋಂದಣಿ ಸಂಖ್ಯೆ ಮರು ಹರಾಜಿಗೆ ಆದೇಶಿಸಲಾಗಿದೆ.
ಹೌದು.. HR88 B8888 ಸಂಖ್ಯೆ ಈ ಹಿಂದೆ ಹರಾಜಿನಲ್ಲಿ ಬರೊಬ್ಬರಿ 1.17 ಕೋಟಿ ರೂಗೆ ಮಾರಾಟವಾಗಿತ್ತು. ಈ ಸಂಖ್ಯೆಗಾಗಿ ವ್ಯಾಪಕ ಪೈಪೋಟಿ ಎದುರಾಗಿತ್ತು. ಈ ಸಂಖ್ಯೆಯು ಅತಿ ಹೆಚ್ಚು ಅಂದರೆ 45 ಅರ್ಜಿಗಳನ್ನು ಸ್ವೀಕರಿಸಿತ್ತು.
ಸಂಖ್ಯೆಯ ಮೂಲ ಬಿಡ್ಡಿಂಗ್ ಬೆಲೆಯನ್ನು 50,000 ರೂ. ಎಂದು ನಿಗದಿಪಡಿಸಲಾಗಿತ್ತು. ಇದು ಪ್ರತಿ ನಿಮಿಷ ಕಳೆದಂತೆ ಹೆಚ್ಚುತ್ತಲೇ ಇತ್ತು, ಮಧ್ಯಾಹ್ನ 12 ಗಂಟೆಗೆ, ಬಿಡ್ಡಿಂಗ್ ಬೆಲೆ 88 ಲಕ್ಷ ರೂ.ಗಳಾಗಿತ್ತು. ನಂತರ ಸಂಜೆ 5 ಗಂಟೆಗೆ 1.17 ಕೋಟಿ ರೂ.ಗೆ ಇತ್ಯರ್ಥವಾಗಿ ಮಾರಾಟವಾಗಿತ್ತು.
ಸಾರಿಗೆ ಸೇವೆ ನೀಡುವ ರೊಮುಲಸ್ ಸೊಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್‌ನ ನಿರ್ದೇಶಕ ಸುಧೀರ್ ಕುಮಾರ್ ಅವರು 'HR88B8888' ಎಂಬ VIP ಸಂಖ್ಯೆಯನ್ನು ದಾಖಲೆಯ 1.17ಕೋಟಿ ರೂಗೆ ಬಿಡ್ ಮಾಡಿ ಹರಾಜು ಗೆದ್ದಿದ್ದರು. ಆದರೆ ಇದೀಗ ಅದೇ ಸಂಖ್ಯೆ ಮತ್ತೆ ಹರಾಜಿಗೆ ಬಂದಿದೆ.
ಮರು ಹರಾಜಿಗೆ ಕಾರಣ?
ಮೂಲಗಳ ಪ್ರಕಾರ ದಾಖಲೆ ಬೆಲೆಯ ಬಿಡ್ ಮಾಡಿದ್ದ ಸುಧೀರ್ ಕುಮಾರ್ ಬಿಡ್ಡಿಂಗ್ ನಡೆದ 2 ದಿನಗಳ ನಂತರವೂ ಬಿಡ್ ಮಾಡಿದ್ದ ಹಣ ಪಾವತಿ ಮಾಡದ ಕಾರಣ ಹರ್ಯಾಣ ಸಾರಿಗೆ ಇಲಾಖೆ ಈ ಸಂಖ್ಯೆಯನ್ನು ಮರು ಹರಾಜಿಗೆ ಆದೇಶಿಸಿದೆ. 1.17 ಕೋಟಿ ರೂ. ಪಾವತಿಸಲು ಇಂದು ಡಿಸೆಂಬರ್ 1, ಮಧ್ಯಾಹ್ನ 12 ಗಂಟೆ ಅಂತಿಮ ಗಡುವಾಗಿತ್ತು.
ಹಣ ಪಾವತಿಗೆ ಯತ್ನಿಸಿದ್ದ ಸುಧೀರ್ ಕುಮಾರ್
ಇನ್ನು ಹರಾಜು ಪ್ರಕ್ರಿಯೆ ಕುರಿತು ಸ್ಪಷ್ಟನೆ ನೀಡಿರುವ ಸುಧೀರ್ ಕುಮಾರ್, ಶನಿವಾರ ರಾತ್ರಿಯೇ ಎರಡು ಬಾರಿ ಬಿಡ್ ಮೊತ್ತವನ್ನು ಠೇವಣಿ ಮಾಡಲು ಪ್ರಯತ್ನಿಸಿದ್ದಾಗಿ ಮತ್ತು ತಾಂತ್ರಿಕ ದೋಷದಿಂದಾಗಿ ಅದು ವಿಫಲವಾಗಿತ್ತು ಎಂದು ಹೇಳಿದರು.
ಕುಟುಂಬಸ್ಥರ ವಿರೋಧ
ಅಂತೆಯೇ ಸುಧೀರ್ ಕುಮಾರ್ ಕೇವಲ ನಂಬರ್ ಪ್ಲೇಟ್‌ಗಾಗಿ ಭಾರಿ ಮೊತ್ತವನ್ನು ಖರ್ಚು ಮಾಡುವುದನ್ನು ಅವರ ಕುಟುಂಬ ವಿರೋಧಿಸಿತ್ತು. ಇದೇ ಕಾರಣಕ್ಕೆ ಸುಧೀರ್ ಹಣ ಪಾವತಿಗೆ ಹಿಂದೇಟು ಹಾಕಿದ್ದರು ಎನ್ನಲಾಗಿದೆ. "ಪ್ರಸ್ತುತ ಕುಟುಂಬದೊಂದಿಗೆ ಚರ್ಚೆಗಳು ನಡೆಯುತ್ತಿವೆ. ನಂಬರ್ ಪ್ಲೇಟ್‌ಗಾಗಿ ಇಷ್ಟೊಂದು ದೊಡ್ಡ ಮೊತ್ತವನ್ನು ಖರ್ಚು ಮಾಡುವುದು ಬುದ್ಧಿವಂತ ನಿರ್ಧಾರವಲ್ಲ ಎಂದು ಕುಟುಂಬದ ಹಿರಿಯರು ಹೇಳಿದ್ದಾರೆ, ಆದರೆ ನನ್ನ ಅಭಿಪ್ರಾಯ ಅದರ ಪರವಾಗಿದೆ. ಸೋಮವಾರದೊಳಗೆ ನಾವು ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತೇವೆ' ಎಂದು ಸುಧೀರ್ ಕುಮಾರ್ ಹೇಳಿದ್ದಾರೆ ಎಂದು ವರದಿಯಾಗಿದೆ.
ಏನಿದು ಹರಾಜು ಪ್ರಕ್ರಿಯೆ?
ಶುಕ್ರವಾರ ಸಂಜೆ 5 ರಿಂದ ಸೋಮವಾರ ಬೆಳಿಗ್ಗೆ 9 ರವರೆಗೆ, ಬಿಡ್ಡರ್‌ಗಳು ತಮ್ಮ ಆಯ್ಕೆಯ ಸಂಖ್ಯೆಗೆ ಅರ್ಜಿ ಸಲ್ಲಿಸಬಹುದಾಗಿತ್ತು. ನಂತರ ಬುಧವಾರ ಸಂಜೆ 5 ರಂದು ಫಲಿತಾಂಶಗಳನ್ನು ಪ್ರಕಟಿಸುವವರೆಗೆ ಬಿಡ್ಡಿಂಗ್ ಆಟ ಪ್ರಾರಂಭವಾಗುತ್ತದೆ. ಅಧಿಕೃತ fancy.parivahan.gov.in ಪೋರ್ಟಲ್‌ನಲ್ಲಿ ಹರಾಜು ಸಂಪೂರ್ಣವಾಗಿ ಆನ್‌ಲೈನ್‌ನಲ್ಲಿ ನಡೆಯುತ್ತದೆ.
HR88B8888 ಎಂದರೆ ಏನು?
HR88B8888 ಎಂಬುದು ಬಿಡ್ಡಿಂಗ್ ಮೂಲಕ ಪ್ರೀಮಿಯಂನಲ್ಲಿ ಖರೀದಿಸಿದ ವಿಶಿಷ್ಟ ವಾಹನ ಸಂಖ್ಯೆ ಅಥವಾ VIP ಸಂಖ್ಯೆಯಾಗಿದೆ. ಇದರಲ್ಲಿ HR ಎಂಬುದು ಹರ್ಯಾಣ ರಾಜ್ಯ ಸಂಕೇತವಾಗಿದ್ದು, ವಾಹನವು ಹರಿಯಾಣದಲ್ಲಿ ನೋಂದಾಯಿಸಲ್ಪಟ್ಟಿದೆ ಎಂದು ಸೂಚಿಸುತ್ತದೆ.
88 ವಾಹನವನ್ನು ನೋಂದಾಯಿಸಲಾದ ಹರಿಯಾಣದ ನಿರ್ದಿಷ್ಟ ಪ್ರಾದೇಶಿಕ ಸಾರಿಗೆ ಕಚೇರಿ (RTO) ಅಥವಾ ಜಿಲ್ಲೆಯನ್ನು ಪ್ರತಿನಿಧಿಸುತ್ತದೆ. ಬಳಿಕ ನಿರ್ದಿಷ್ಟ RTO ಒಳಗೆ ವಾಹನ ಸರಣಿ ಕೋಡ್ ಅನ್ನು ಸೂಚಿಸಲು B ಅನ್ನು ಬಳಸಲಾಗುತ್ತದೆ.
8888 ಎಂಬುದು ವಾಹನಕ್ಕೆ ನಿಯೋಜಿಸಲಾದ ವಿಶಿಷ್ಟ, ನಾಲ್ಕು-ಅಂಕಿಯ ನೋಂದಣಿ ಸಂಖ್ಯೆಯಾಗಿದೆ. ಸಂಖ್ಯೆ ಫಲಕವನ್ನು ವಿಶೇಷವಾಗಿಸುವ ಅಂಶವೆಂದರೆ ಅದು ಎಂಟುಗಳ ಸ್ಟ್ರಿಂಗ್‌ನಂತೆ ಕಾಣುತ್ತದೆ. ದೊಡ್ಡಕ್ಷರದಲ್ಲಿ 'B' ಅನ್ನು 8ನ್ನು ಹೋಲುತ್ತದೆ ಮತ್ತು ಕೇವಲ ಒಂದು ಅಂಕೆ ಮಾತ್ರ ಪುನರಾವರ್ತನೆಯಾಗುತ್ತದೆ.
ಕೇರಳದಲ್ಲೂ ದಾಖಲೆ ಬೆಲೆಗೆ ಮಾರಾಟವಾಗಿದ್ದ ಸಂಖ್ಯೆ
ಈ ವರ್ಷದ ಆರಂಭದಲ್ಲಿ, ಏಪ್ರಿಲ್‌ನಲ್ಲಿ, ಕೇರಳದ ಟೆಕ್ ಬಿಲಿಯನೇರ್ ವೇಣು ಗೋಪಾಲಕೃಷ್ಣನ್ ತಮ್ಮ ಲ್ಯಾಂಬೋರ್ಘಿನಿ ಉರುಸ್ ಪರ್ಫಾರ್ಮೆಂಟ್ ಕಾರಿಗಾಗಿ "KL 07 DG 0007" ಸಂಖ್ಯೆಯನ್ನು 45.99 ಲಕ್ಷ ರೂಪಾಯಿ ವೆಚ್ಚದಲ್ಲಿ VIP ಪರವಾನಗಿ ಪ್ಲೇಟ್ ಖರೀದಿಸಿದರು. ಈ ಸಂಖ್ಯೆಯ ಬಿಡ್ಡಿಂಗ್ 25,000 ರೂಪಾಯಿಗಳಿಂದ ಪ್ರಾರಂಭವಾಗಿತ್ತು. ಬಳಿಕ ಸಂಖ್ಯೆಯ ಬಿಡ್ಡಿಂಗ್ ಬೆಲೆ ಗಣನೀಯವಾಗಿ ಏರಿಕೆಯಾಗಿತ್ತು. ಬಳಿಕ ಇದು ದಾಖಲೆಯ ಅಂತಿಮ ಬೆಲೆಗೆ ಮಾರಾಟವಾಯಿತು.


