

ಪಿಥೋರಗಢ: ಭಾರತದ ಪ್ರಮುಖ ಕಂಪನಿ ಪತಂಜಲಿ ತಯಾರಿಸಿದ ತುಪ್ಪದ ಮಾದರಿಯು ಗುಣಮಟ್ಟ ನಿಯಂತ್ರಣ ಪರೀಕ್ಷೆಗಳಲ್ಲಿ ವಿಫಲವಾದ ಕಾರಣ ಉತ್ತರಾಖಂಡದ ಸ್ಥಳೀಯ ನ್ಯಾಯಾಲಯವು ದಂಡ ವಿಧಿಸಿದೆ.
ತುಪ್ಪವು ಕಲಬೆರಕೆಯಾಗಿದೆ ಎಂದು ರಾಜ್ಯ ಮತ್ತು ರಾಷ್ಟ್ರೀಯ ಪ್ರಯೋಗಾಲಯಗಳು ದೃಢಪಡಿಸಿದ ನಂತರ ಉತ್ಪಾದಕ, ವಿತರಕ ಮತ್ತು ಚಿಲ್ಲರೆ ವ್ಯಾಪಾರಿಗಳ ವಿರುದ್ಧ ಒಟ್ಟು 1.40 ಲಕ್ಷ ರೂ.ಗಳಿಗೂ ಹೆಚ್ಚಿನ ದಂಡ ವಿಧಿಸಲಾಗಿದೆ.
ಉತ್ತರಾಖಂಡ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆ ಈ ನಿರ್ಧಾರವನ್ನ ಹೊರಡಿಸಿದೆ. ಈ ಪ್ರಕರಣವು 2020ರ ಪತಂಜಲಿಯ ಹಸುವಿನ ತುಪ್ಪದ ಮಾದರಿಗೆ ಸಂಬ೦ಧಿಸಿದ್ದಾಗಿದೆ. ಹಿರಿಯ ಆಹಾರ ಸುರಕ್ಷತಾ ಅಧಿಕಾರಿ ದಿಲೀಪ್ ಜೈನ್ ಅವರು ಪಿಥೋರಗಢದ ಕಶ್ನಿಯಲ್ಲಿರುವ ಕರಣ್ ಜನರಲ್ ಸ್ಟೋರ್‌ನಿಂದ ಪತಂಜಲಿ ತುಪ್ಪದ ಮಾದರಿಯನ್ನು ನಿಯಮಿತ ತಪಾಸಣೆಗಾಗಿ ಸಂಗ್ರಹಿಸಿದರು.
ಮಾದರಿಯನ್ನು ಆರಂಭದಲ್ಲಿ ಪರೀಕ್ಷೆಗಾಗಿ ಉತ್ತರಾಖಂಡದ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಪರೀಕ್ಷಾ ಫಲಿತಾಂಶಗಳು ತುಪ್ಪವು ಆಹಾರ ಸುರಕ್ಷತಾ ಮಾನದಂಡಗಳನ್ನು ಪೂರೈಸಿಲ್ಲ. ಹೀಗಾಗಿ ಅದು ಕಳಪೆ ಗುಣಮಟ್ಟದ್ದಾಗಿತ್ತು ಎಂದು ಬಹಿರಂಗಪಡಿಸಿದೆ. ಈ ತುಪ್ಪವನ್ನು ಸೇವಿಸುವುದರಿಂದ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದು ಮತ್ತು ಅನಾರೋಗ್ಯಕ್ಕೂ ಕಾರಣವಾಗಬಹುದು ಎಂದು ಪ್ರಯೋಗಾಲಯದ ವರದಿ ಬಹಿರಂಗಪಡಿಸಿದೆ.
2021ರಲ್ಲಿ ಈ ವಿಷಯದ ಬಗ್ಗೆ ಪತಂಜಲಿಗೆ ನೋಟಿಸ್ ಕಳುಹಿಸಲಾಯಿತು. ಆದರೆ, ಕಂಪನಿಯು ಪ್ರತಿಕ್ರಿಯಿಸಲಿಲ್ಲ. ನಂತರ ಕಂಪನಿಯ ಅಧಿಕಾರಿಗಳು ಮಾದರಿಯನ್ನ ಮರುಪರೀಕ್ಷೆ ಮಾಡುವಂತೆ ಒತ್ತಾಯಿಸಿದರು. ಅವರು ಮಾದರಿಯನ್ನ ಕೇಂದ್ರ ಪ್ರಯೋಗಾಲಯದಲ್ಲಿ ಪರೀಕ್ಷಿಸಬೇಕೆಂದು ಒತ್ತಾಯಿಸಿದರು.
ನಂತರ ಅಕ್ಟೋಬರ್ 16, 2021ರಂದು, ಅಧಿಕಾರಿಗಳ ತಂಡವು ಗಾಜಿಯಾಬಾದ್ ನಲ್ಲಿರುವ ರಾಷ್ಟ್ರೀಯ ಆಹಾರ ಪ್ರಯೋಗಾಲಯಕ್ಕೆ ಭೇಟಿ ನೀಡಿ, ಅಲ್ಲಿ ತುಪ್ಪದ ಮಾದರಿಗಳನ್ನು ಮರುಪರೀಕ್ಷೆ ಮಾಡಲಾಯಿತು. ನವೆಂಬರ್ 26, 2021ರಂದು, ರಾಷ್ಟ್ರೀಯ ಆಹಾರ ಪ್ರಯೋಗಾಲಯವು ತನ್ನ ವರದಿಯನ್ನ ಸಲ್ಲಿಸಿತು. ಈ ವರದಿಯಲ್ಲಿ, ತುಪ್ಪದ ಮಾದರಿಗಳು ಆಹಾರ ಸುರಕ್ಷತಾ ಪರೀಕ್ಷೆಯಲ್ಲಿಯೂ ವಿಫಲವಾಗಿವೆ.
ಆಹಾರ ಸುರಕ್ಷತಾ ಅಧಿಕಾರಿ ತರುವಾಯ ಪಿಥೋರಗಢದ ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದರು. ಕಳೆದ ಗುರುವಾರ ತೀರ್ಪು ನೀಡಿದ ಎಡಿಎಂ ಯೋಗೇಂದ್ರ ಸಿಂಗ್, ಎಲ್ಲಾ ವಾದಗಳನ್ನು ಆಲಿಸಿ ಮತ್ತು ಸಾಕ್ಷ್ಯಗಳನ್ನು ಪರಿಶೀಲಿಸಿದ ನಂತರ, ಆರೋಪಿಗಳ ವಿರುದ್ಧ ತೀರ್ಪು ನೀಡಿದ್ದಾರೆ.
ಈ ತೀರ್ಪಿನಲ್ಲಿ ಉತ್ಪಾದಕ ಪತಂಜಲಿ ಆಯುರ್ವೇದ ಲಿಮಿಟೆಡ್ ವಿರುದ್ಧ 1,00,000 ರೂ.ಗಳ ದಂಡ ವಿಧಿಸಲಾಯಿತು. ಇದಲ್ಲದೆ, ಪಿಥೋರಗಢದ ಧಾರ್ಚುಲಾ ರಸ್ತೆಯ ವಿತರಕ ಬ್ರಹ್ಮ್ ಆಕ್ಸೆಸರೀಸ್‌ಗೆ 25,000 ರೂ.ಗಳ ದಂಡ ವಿಧಿಸಲಾಯಿತು, ಆದರೆ ಚಿಲ್ಲರೆ ವ್ಯಾಪಾರಿ ಕರಣ್ ಜನರಲ್ ಸ್ಟೋರ್‌ಗೆ 15,000 ರೂ.ಗಳ ದಂಡ ವಿಧಿಸಲಾಯಿತು.
ರಾಷ್ಟ್ರೀಯವಾಗಿ ಗುರುತಿಸಲ್ಪಟ್ಟ ಬ್ರ್ಯಾಂಡ್ ವಿರುದ್ಧದ ನಿರ್ಧಾರವು ರಾಜ್ಯಾದ್ಯಂತ ಮತ್ತು ಆಹಾರ ಸುರಕ್ಷತಾ ಮಾನದಂಡಗಳಿಗೆ ಸಂಬಂಧಿಸಿದಂತೆ ಸಾಕಷ್ಟು ಚರ್ಚೆಗೆ ನಾಂದಿ ಹಾಡಿದೆ.
ಆಹಾರ ಸುರಕ್ಷತಾ ಅಧಿಕಾರಿ ದಿಲೀಪ್ ಜೈನ್ ಈ ತೀರ್ಪಿನ ಬಗ್ಗೆ ಪ್ರತಿಕ್ರಿಯಿಸುತ್ತಾ, "ಆಹಾರ ಉತ್ಪನ್ನಗಳ ಸಮಗ್ರತೆ ಅತ್ಯಂತ ಮುಖ್ಯ. ಈ ತೀರ್ಪು ಉನ್ನತ ಮಟ್ಟದ ಬ್ರ್ಯಾಂಡ್‌ಗಳು ಸಹ ಗ್ರಾಹಕರ ಸುರಕ್ಷತೆಗಾಗಿ ನಿಗದಿಪಡಿಸಿದ ಸ್ಥಾಪಿತ ಗುಣಮಟ್ಟದ ಮಾನದಂಡಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂಬ ಸ್ಪಷ್ಟ ಸಂದೇಶವನ್ನು ರವಾನಿಸುತ್ತದೆ ಎಂದು ಹೇಳಿದರು.
Advertisement