

ಲಖನೌ: ಉತ್ತರ ಪ್ರದೇಶದಲ್ಲಿ ವಿವಾದಾತ್ಮಕ ವಿಶೇಷ ಸಮಗ್ರ ಪರಿಷ್ಕರಣೆ(SIR)ಗೆ ಸಂಬಂಧಿಸಿದ ಕೆಲಸದ ಒತ್ತಡದಿಂದಾಗಿ ಮತ್ತೊಬ್ಬ ಬೂತ್ ಮಟ್ಟದ ಅಧಿಕಾರಿ(BLO) ಸಾವನ್ನಪ್ಪಿದ್ದು, ಒಂದು ವಾರಕ್ಕಿಂತ ಕಡಿಮೆ ಅವಧಿಯಲ್ಲಿ ಐವರು ಬಿಎಲ್ಒ ಮೃತಪಟ್ಟಿದ್ದಾರೆ.
ಹತ್ರಾಸ್ ಜಿಲ್ಲೆಯ ಸಿಕಂದ್ರ ರಾವ್‌ನ ಬ್ರಹ್ಮನ್‌ಪುರಿ ಪ್ರದೇಶದ ನಿವಾಸಿ 40 ವರ್ಷದ ಕಮಲಕಾಂತ್ ಶರ್ಮಾ ಅವರು ಮಂಗಳವಾರ ಬೆಳಗ್ಗೆ ತಮ್ಮ ನಿವಾಸದಲ್ಲಿ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ.
ನವಲಿ ಲಾಲ್‌ಪುರದ ಕಾಂಪೋಸಿಟ್ ಶಾಲೆಯಲ್ಲಿ ಸಹಾಯಕ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದ ಶರ್ಮಾ ಅವರು ಅವರು BLO ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು.
ಕುಟುಂಬ ಸದಸ್ಯರ ಪ್ರಕಾರ, ಶರ್ಮಾ ತಮ್ಮ ಮನೆಯ ಮೇಲಿನ ಮಹಡಿಯಿಂದ ಕೆಳಗೆ ಬಂದು ಚಹಾ ಕುಡಿಯುತ್ತಿದ್ದಾಗ ಇದ್ದಕ್ಕಿದ್ದಂತೆ ತಲೆತಿರುಗುವಿಕೆ ಉಂಟಾಗಿ ಕುಸಿದು ಬಿದ್ದರು. ತಕ್ಷಣ ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ದಾರಿ ಮಧ್ಯೆಯೇ ನಿಧನರಾದರು. ಅವರ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.
ಶರ್ಮಾ ಅವರ ಮಗ ವಿನಾಯಕ್, BLO ಕರ್ತವ್ಯಗಳಿಗೆ ಸಂಬಂಧಿಸಿದ ಕೆಲಸದ ಹೊರೆಯಿಂದಾಗಿ ತಮ್ಮ ತಂದೆ ತೀವ್ರ ಒತ್ತಡಕ್ಕೆ ಸಿಲುಕಿದ್ದರು ಹೇಳಿರುವುದಾಗಿ ಎಂದು ಪಿಟಿಐ ವರದಿ ಮಾಡಿದೆ.
"ಅವರು ಬೆಳಗ್ಗೆ 7 ಗಂಟೆ ಸುಮಾರಿಗೆ ಚಹಾ ಕುಡಿಯಲು ಕೆಳಗೆ ಬಂದರು ಮತ್ತು ಇದ್ದಕ್ಕಿದ್ದಂತೆ ಮೂರ್ಛೆ ಹೋದರು. ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗಮಧ್ಯೆ ಅವರು ನಿಧನರಾದರು" ಎಂದು ಪುತ್ರ ತಿಳಿಸಿದ್ದಾರೆ.
ನವೆಂಬರ್ 30 ರಂದು, 46 ವರ್ಷದ ದಲಿತ ಶಾಲಾ ಶಿಕ್ಷಕ ಸರ್ವೇಶ್ ಕುಮಾರ್ ಮೊರಾದಾಬಾದ್ ಜಿಲ್ಲೆಯ ತಮ್ಮ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಅವರನ್ನು ಅಕ್ಟೋಬರ್ 7 ರಂದು ಬಿಎಲ್‌ಒ ಆಗಿ ನೇಮಿಸಲಾಗಿತ್ತು. ಕುಮಾರ್ ಅವರು ತಮ್ಮ ಆತ್ಮಹತ್ಯೆ ಪತ್ರದಲ್ಲಿ ಬಿಎಲ್ ಒ ಕೆಲಸ ಉಸಿರುಗಟ್ಟಿಸುತ್ತಿರುವುದಾಗಿ ಹೇಳಿದ್ದಾರೆ.
Advertisement