IndiGo: ಬರೊಬ್ಬರಿ 200 ವಿಮಾನಗಳ ಹಾರಾಟ ರದ್ದು, 'ಮುಚ್ಕೊಂಡ್ ಮನೆಗೆ ಹೋಗಿ..' 'crew shortage'ಗೆ ಪ್ರಯಾಣಿಕರ ಆಕ್ರೋಶ!
ನವದೆಹಲಿ: ಅಚ್ಚರಿ ಬೆಳವಣಿಗೆಯಲ್ಲಿ ದೇಶದ ಅತೀ ದೊಡ್ಡ ವಿಮಾನಯಾನ ಸಂಸ್ಥೆ ಇಂಡಿಗೋದ ಬರೊಬ್ಬರಿ 200 ವಿಮಾನಗಳ ಹಾರಾಟ ರದ್ದಾಗಿದ್ದು, ದಿಢೀರ್ ಅವ್ಯವಸ್ಥೆಯಿಂದಾಗಿ ದೇಶಾದ್ಯಂತ ಪ್ರಯಾಣಿಕರು ತತ್ತರಿಸಿ ಹೋಗಿದ್ದಾರೆ.
ಇಂಡಿಗೋದ ತಾಂತ್ರಿಕ ಮತ್ತು ಸಿಬ್ಬಂದಿ ಕೊರತೆ ಕಾರಣದಿಂದಾಗಿ ದೇಶಾದ್ಯಂತ ಬರೊಬ್ಬರಿ 200 ವಿಮಾನಗಳ ಹಾರಾಟ ರದ್ದಾಗಿದೆ. ಪರಿಣಾಮ ಬೆಂಗಳೂರು, ದೆಹಲಿ, ಮುಂಬೈ, ಹೈದರಾಬಾದ್ ಸೇರಿದಂತೆ ಪ್ರಮುಖ ವಿಮಾನ ನಿಲ್ದಾಣಗಳಲ್ಲಿ (Airport) ಸಾವಿರಾರು ಪ್ರಯಾಣಿಕರು ಗಂಟೆಗಟ್ಟಲೆ ಕಾದು ಕಾದು ಸುಸ್ತಾಗಿದ್ದಾರೆ.
ಮೂಲಗಳ ಪ್ರಕಾರ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಒಟ್ಟು 42 ದೇಶೀಯ ವಿಮಾನಗಳು ರದ್ದಾಗಿದ್ದು ಈ ಪೈಕಿ 22 ಆಗಮನ, 20 ನಿರ್ಗಮನ ವಿಮಾನಗಳು ರದ್ದಾಗಿವೆ.
ಅಂತೆಯೇ ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲೇ 67 ವಿಮಾನಗಳು ರದ್ದಾಗಿದ್ದು, ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ವಿಮಾನ ನಿಲ್ದಾಣದಲ್ಲಿ 51ಕ್ಕೂ ಹೆಚ್ಚು ವಿಮಾನಗಳು ರದ್ದಾಗಿದೆ. ಮುತ್ತಿನ ನಗರಿ ಹೈದರಾಬಾದ್‌ನಲ್ಲಿ 19 ಇಂಡಿಗೋ ವಿಮಾನಗಳು ರದ್ದಾಗಿವೆ ಎಂದು ತಿಳಿದುಬಂದಿದೆ.
ಇದಲ್ಲದೆ ಬೆಂಗಳೂರಿನಿಂದ ದೆಹಲಿ, ಮುಂಬೈ, ಚೆನ್ನೈ, ಹೈದರಾಬಾದ್, ಗೋವಾ, ಕೋಲ್ಕತ್ತಾ ಮತ್ತು ಲಕ್ನೋವನ್ನು ಸಂಪರ್ಕಿಸುವ ವಿಮಾನಗಳು ಸಹ ಈ ಅಡಚಣೆಗಳಿಗೆ ಸಾಕ್ಷಿಯಾದವು.
ಈ ವಾರ ದೆಹಲಿ ಮತ್ತು ಮುಂಬೈನಲ್ಲಿ ಅಂತಾರಾಷ್ಟ್ರೀಯ ವಿಮಾನಯಾನ ಸಂಸ್ಥೆ ಎಮಿರೇಟ್ಸ್ ನಡೆಸಿದ ಬೃಹತ್ ನೇಮಕಾತಿ ಪ್ರಕ್ರಿಯೆಯಿಂದಾಗಿ ಈ ಕೊರತೆ ಉಂಟಾಗಿದೆ ಎಂದು ಮೂಲಗಳು ತಿಳಿಸಿವೆ.
ಆದಾಗ್ಯೂ, ಅನಿರೀಕ್ಷಿತ ಕಾರ್ಯಾಚರಣೆಯ ಸವಾಲುಗಳು ಸೇರಿದಂತೆ ಹಲವು ಕಾರಣಗಳಿಂದಾಗಿ ಇಂಡಿಗೋ ಗಮನಾರ್ಹ ಅಡಚಣೆಗೆ ಕಾರಣವಾಗಿದೆ. ಕಾಕ್‌ಪಿಟ್ ಮತ್ತು ಕ್ಯಾಬಿನ್ ಸಿಬ್ಬಂದಿ ಎರಡರ ತೀವ್ರ ಕೊರತೆಯಿಂದಾಗಿ ವಿಮಾನ ಸಂಚಾರದಲ್ಲಿ ಗಂಭೀರ ವ್ಯತ್ಯಯ ಕಂಡುಬಂದಿದೆ ಎಂದು ಮೂಲಗಳು ತಿಳಿಸಿವೆ.
ನಿನ್ನೆಯೂ ಇದೇ ಕತೆ
ಇನ್ನು ವಿಮಾನ ರದ್ಧು ಇದೇ ಮೊದಲೇನಲ್ಲ.. ನಿನ್ನೆ ಅಂದರೆ ಮಂಗಳವಾರದಂದೂ ಕೂಡ ಬೆಂಗಳೂರಿನಲ್ಲಿ 20 ಇಂಡಿಗೋ ವಿಮಾನಗಳು ರದ್ದಾಗಿದ್ದವು.
ವಿಮಾನ ರದ್ದತಿಗೆ ಕಾರಣ?
ವಿಶ್ಲೇಷಕರು ಅಭಿಪ್ರಾಯಪಟ್ಟಿರುವಂತೆ, ತಾಂತ್ರಿಕ ದೋಷಗಳು ಮತ್ತು ಹೊಸ ಎಫ್‌ಡಿಟಿಎಲ್ (ಫ್ಲೈಟ್ ಡ್ಯೂಟಿ ಟೈಮ್ ಲಿಮಿಟೇಷನ್) ನಿಯಮಗಳು ವಿಮಾನಗಳ ರದ್ಧತಿಗೆ ಮುಖ್ಯ ಕಾರಣ ಎಂದು ಹೇಳಲಾಗಿದೆ. ಅಂತೆಯೇ ಚಳಿಗಾಲದಲ್ಲಿ ವೇಳಾಪಟ್ಟಿ ಬದಲಾವಣೆ, ಹವಾಮಾನ ಸಮಸ್ಯೆ ಕೂಡ ವಿಮಾನ ರದ್ದತಿಗೆ ಕಾರಣವಾಗಿದ್ದು, ಇದು ವಿಮಾನ ನಿಲ್ದಾಣದಲ್ಲಿ ದಟ್ಟಣೆಗೆ ಕಾರಣವಾಗಿದೆ.
ಇದಲ್ಲದೆ ಇಂಡಿಗೋದಲ್ಲಿ ತೀವ್ರಗೊಂಡಿರುವ ಪೈಲಟ್‌ಗಳ ಕೊರತೆಯೂ ವಿಮಾನಗಳ ರದ್ದತಿಗೆ ಕಾರಣ ಎಂದು ಹೇಳಲಾಗಿದ್ದು, ಹೊಸ ಎಫ್‌ಡಿಟಿಎಲ್ ನಿಯಮಗಳು ಪೈಲಟ್‌ಗಳ ವಾರದ ವಿಶ್ರಾಂತಿ 48 ಗಂಟೆಗೆ ಹೆಚ್ಚಿಸಿದೆ, ರಾತ್ರಿ ಕರ್ತವ್ಯ ಸಮಯ ವಿಸ್ತರಣೆ ಮತ್ತು ರಾತ್ರಿ ಲ್ಯಾಂಡಿಂಗ್ ಎರಡಕ್ಕೆ ಸೀಮಿತಗೊಳಿಸಿದೆ. ಇದು ಪೈಲಟ್ ಗಳ ಗಂಭೀರ ಕೊರತೆಗೆ ಕಾರಣವಾಗಿದೆ.
ಹೊಸ ರೋಸ್ಟರಿಂಗ್ ನಿಯಮಗಳಲ್ಲಿ ಪೈಲಟ್‌ಗಳಿಗೆ ವಾರದ ವಿಶ್ರಾಂತಿಯನ್ನು 36 ಗಂಟೆಗಳಿಂದ 48 ಗಂಟೆಗಳವರೆಗೆ ಹೆಚ್ಚಿಸಲಾಗಿದೆ ಮತ್ತು ಪೈಲಟ್‌ಗಳು ನಡೆಸುವ ರಾತ್ರಿ ಲ್ಯಾಂಡಿಂಗ್‌ಗಳನ್ನು ಆರು ಗಂಟೆಗಳ ಬದಲಿಗೆ ಕೇವಲ ಎರಡಕ್ಕೆ ಸೀಮಿತಗೊಳಿಸಲಾಗಿದೆ.
ಕಳೆದ ಎರಡು ದಿನಗಳಿಂದ ಮುಂಬೈ ಮತ್ತು ದೆಹಲಿಯಲ್ಲಿ ಎಮಿರೇಟ್‌ನ ನೇಮಕಾತಿ ಪ್ರಕ್ರಿಯೆಗಾಗಿ ಹಲವಾರು ಇಂಡಿಗೋ ಸಿಬ್ಬಂದಿಗಳು ನೇರ ಸಾಲಿನಲ್ಲಿ ನಿಂತಿದ್ದಾರೆ ಎಂದು ವಿಮಾನಯಾನ ಸಂಸ್ಥೆಗಳು ತಿಳಿಸಿವೆ.
"ಇಂಡಿಗೋದ ಕಡೆಯಿಂದ ಆಗಿರುವ ತಪ್ಪು ನಿರ್ವಹಣೆಯೂ ಸಹ ಕಳೆದ ಎರಡು ದಿನಗಳಿಂದ ಅವರು ಎದುರಿಸುತ್ತಿರುವ ಬಿಕ್ಕಟ್ಟಿಗೆ ಪ್ರಮುಖ ಕಾರಣವಾಗಿದೆ" ಎಂದು ವಿಮಾನಯಾನ ಮೂಲಗಳು ತಿಳಿಸಿವೆ. ನವೆಂಬರ್ 1 ರಿಂದ ಎಲ್ಲಾ ವಿಮಾನಯಾನ ಸಂಸ್ಥೆಗಳು ಪರಿಷ್ಕೃತ ವಿಮಾನ ಕರ್ತವ್ಯ ಸಮಯದ ಮಿತಿಗಳನ್ನು ಜಾರಿಗೆ ತಂದಿವೆ.
ಕ್ಷಮೆಯಾಚಿಸಿದ ಇಂಡಿಗೋ
ಕಳೆದ ಎರಡು ದಿನಗಳಿಂದ ಕಾರ್ಯಾಚರಣೆ ಗಂಭೀರವಾಗಿ ಅಡಚಣೆಗೊಳಗಾಗಿದೆ ಎಂದು ಒಪ್ಪಿಕೊಂಡಿರುವ ಇಂಡಿಗೋ, ಪ್ರಯಾಣಿಕರಲ್ಲಿ ಕ್ಷಮೆಯಾಚಿಸಿದೆ. ಜೊತೆಗೆ ಕಾರ್ಯಾಚರಣೆ ಸ್ಥಿರಗೊಳಿಸಲು ತಾತ್ಕಾಲಿಕ ವೇಳಾಪಟ್ಟಿ ಹೊಂದಾಣಿಕೆ ಮಾಡಲಾಗಿದೆ ಎಂದಿದ್ದು, ಈ ಅಡೆಚಣೆಯು ಮುಂದಿನ 48 ಗಂಟೆಗಳ ಕಾಲ ಈ ಕ್ರಮ ಮುಂದುವರಿಯಲಿದೆ ಎಂದು ತಿಳಿಸಿದೆ.
ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಪರದಾಟ
ಬುಧವಾರ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಂಡಿಗೊ ಹಲವಾರು ವಿಮಾನಗಳನ್ನು ರದ್ದುಗೊಳಿಸಿದ್ದರಿಂದ ಪ್ರಯಾಣಿಕರು ಸಂಕಷ್ಟ ಅನುಭವಿಸಿದರು. ಬೆಂಗಳೂರು ವಿಮಾನ ನಿಲ್ದಾಣದಿಂದ ಮತ್ತು ಅಲ್ಲಿಂದ ವಿಮಾನ ನಿಲ್ದಾಣಕ್ಕೆ ನಿಗದಿತ ಆಗಮನ ಮತ್ತು ನಿರ್ಗಮನ ಎರಡರಲ್ಲೂ 42 ವಿಮಾನಗಳನ್ನು ವಿಮಾನಯಾನ ಸಂಸ್ಥೆ ರದ್ದುಗೊಳಿಸಿದೆ ಎಂದು ಮೂಲಗಳು ತಿಳಿಸಿವೆ.
ಪ್ರಯಾಣಿಕರ ಆಕ್ರೋಶ
ಇನ್ನು ದೇಶಾದ್ಯಂತ ಸಂಭವಿಸಿದ ವಿಮಾನಗಳ ವ್ಯತ್ಯಯದಿಂದಾಗಿ ಆಕ್ರೋಶಗೊಂಡ ಪ್ರಯಾಣಿಕರು ವಿಮಾನ ನಿಲ್ದಾಣ ಮುಚ್ಚಿ ಮನೆಗೆ ಹೋಗಿ ಎಂದು ಆಕ್ರೋಶಗೊಂಡ ಘಟನೆಯೂ ವರದಿಯಾಗಿದೆ. ವಿಮಾನ ನಿಲ್ದಾಣಗಳಲ್ಲಿ ಸಿಬ್ಬಂದಿ ಜೊತೆ ಪ್ರಯಾಣಿಕರು ಸಿಬ್ಬಂದಿಗಳ ಜೊತೆ ವಾಗ್ವಾದ ನಡೆಸಿದ ಪ್ರಸಂಗಗಳೂ ವರದಿಯಾಗಿವೆ.


