

ನವದೆಹಲಿ: ಭಾರತ-ರಷ್ಯಾ ಶೃಂಗಸಭೆಗೂ ಮುನ್ನ ಪ್ರಧಾನಿ ಮೋದಿ ಪುಟಿನ್ ಅವರಿಗೆ ಖಾಸಗಿ ಭೋಜನ ಕೂಟವನ್ನು ಆಯೋಜಿಸಿದ್ದಾರೆ.
ಹೌದು.. 2 ದಿನಗಳ ಭಾರತ ಪ್ರವಾಸ ನಿಮಿತ್ತ ದೆಹಲಿಗೆ ಆಗಮಿಸಿರುವ ರಷ್ಯಾ ಅಧ್ಯಕ್ಷ ಪುಟಿನ್ ರನ್ನು ಖುದ್ದು ಪ್ರಧಾನಿ ಮೋದಿ ವಿಮಾನ ನಿಲ್ದಾಣಕ್ಕೆ ಆಗಮಿಸಿ ಸ್ವಾಗತಿಸಿದರು.
ಈ ವೇಳೆ ಹಸ್ತಲಾಘವ ಮತ್ತು ಆತ್ಮೀಯ ಅಪ್ಪುಗೆ ಮೂಲಕ ಸ್ವಾಗತಿಸಿದ ಪ್ರಧಾನಿ ಮೋದಿ ಬಳಿಕ ಒಂದೇ ಕಾರಿನಲ್ಲಿ ಪುಟಿನ್ ರನ್ನು ತಮ್ಮ ಲೋಕ ಕಲ್ಯಾಣ್ ಮಾರ್ಗದಲ್ಲಿರುವ ಅಧಿಕೃತ ನಿವಾಸಕ್ಕೆ ಕರೆದೊಯ್ದರು.
ಗುರುವಾರ ರಾತ್ರಿ ಲೋಕ ಕಲ್ಯಾಣ್ ಮಾರ್ಗವು ಭಾರತ-ರಷ್ಯಾ ಧ್ವಜಗಳು ಮತ್ತು ವಿಶೇಷ ಬೆಳಕಿನಿಂದ ಅಲಂಕರಿಸಲ್ಪಟ್ಟಿತ್ತು. ಪ್ರಧಾನಿ ನರೇಂದ್ರ ಮೋದಿ ಅವರು ವ್ಲಾಡಿಮಿರ್ ಪುಟಿನ್ ಅವರನ್ನು ತಮ್ಮ ಅಧಿಕೃತ ನಿವಾಸಕ್ಕೆ ಖಾಸಗಿ ಭೋಜನಕ್ಕಾಗಿ ಕರೆದೊಯ್ದರು.
ಪ್ರಧಾನಿ ಮೋದಿ ಅವರು ವಿಶೇಷ ಕ್ರಮದಲ್ಲಿ ಪುಟಿನ್ ಅವರನ್ನು ರಸ್ತೆ ಮಾರ್ಗವಾಗಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪುಟಿನ್ ರನ್ನು ತಮ್ಮ ಅಧಿಕೃತ ನಿವಾಸಕ್ಕೆ ಕರೆದೊಯ್ದರು. ಇದು ಎರಡೂ ದೇಶಗಳ ನಡುವಿನ ಸ್ನೇಹದ ಕಾಲಮಾನದ ಬಂಧ ಮತ್ತು ಅವರ ನಡುವೆ ಹಂಚಿಕೊಂಡಿರುವ ಪ್ರಸಿದ್ಧ ಸೌಹಾರ್ದತೆ ಮತ್ತು ಸ್ನೇಹವನ್ನು ಪ್ರದರ್ಶಿಸಿದೆ.
ಮೋದಿ ನಿವಾಸದಲ್ಲಿ ವಿಶೇಷ ಔತಣಕೂಟ
ರಷ್ಯಾ ಅಧ್ಯಕ್ಷರು ಭಾರತದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ನಿವಾಸದಲ್ಲಿ ಖಾಸಗಿ ಭೋಜನಕೂಟದಲ್ಲಿ ಭಾಗವಹಿಸಿರುವುದು ವಿಶೇಷವಾಗಿದೆ.
ರಷ್ಯಾ ಅಧ್ಯಕ್ಷರ ಭದ್ರತೆಯನ್ನು ಗಮನದಲ್ಲಿರಿಸಿಕೊಂಡು ರಷ್ಯಾದಿಂದ ಬಂದಿರುವ ಅವರ ಭದ್ರತಾ ಅಧಿಕಾರಿಗಳು ಹೆಜ್ಜೆ ಹೆಜ್ಜೆಗೂ ಕಣ್ಗಾವಲು ಇಟ್ಟಿರುತ್ತಾರೆ. ಅವರ ಭದ್ರತೆ ಯಾವ ಮಟ್ಟಿಗೆ ಇರುತ್ತದೆ ಎಂದರೆ ರಷ್ಯಾ ಅಧ್ಯಕ್ಷರ ಕಕ್ಕವನ್ನೂ ಕೂಡ ಅವರು ಬೇರೆ ದೇಶಗಳಲ್ಲಿ ಬಿಡುವುದಿಲ್ಲ. ಸೂಟ್ ಕೇಸ್ ನಲ್ಲಿ ಸಂಗ್ರಹಿಸಿ ತಮ್ಮ ದೇಶಕ್ಕೆ ಒಯ್ಯುತ್ತಾರೆ.
ಅಂತಹುದರಲ್ಲಿ ರಷ್ಯಾ ಅಧ್ಯಕ್ಷರು ಪ್ರಧಾನಿ ನಿವಾಸದಲ್ಲಿ ಭೋಜನಕೂಟದಲ್ಲಿ ಪಾಲ್ಗೊಂಡಿರುವುದು ಜಗತ್ತಿನಾದ್ಯಂತ ವ್ಯಾಪಕ ಸುದ್ದಿಗೆ ಗ್ರಾಸವಾಗಿದೆ.
ಗಂಗಾರತಿ ವೇಳೆ ಪುಟಿನ್ ಗೆ ಸ್ವಾಗತ
ಇತ್ತ ದೆಹಲಿಯಲ್ಲಿ ರಷ್ಯಾ ಅಧ್ಯಕ್ಷ ಪುಟಿನ್ ಬಂದಿಳಿಯುತ್ತಿದ್ದಂತೆಯೇ ಅತ್ತ ಗುರುವಾರ ಸಂಜೆ ವಾರಣಾಸಿಯಲ್ಲಿ ಗಂಗಾ ಆರತಿಯ ಸಮಯದಲ್ಲಿ ವಿಶೇಷ ಪ್ರಾರ್ಥನೆ ಮಾಡಲಾಯಿತು. ಈ ವೇಳೆ ದೀಪಗಳಲ್ಲಿ 'ಪುಟಿನ್ ಗೆ ಸ್ವಾಗತ' ಎಂದು ಬರೆಯಲಾಗಿತ್ತು.
Advertisement