

ಬೋಧ್ ಗಯಾ: ಬಿಹಾರದ ಬೋಧಗಯಾದಲ್ಲಿ ನಡೆದ ವಿಚಿತ್ರ ಘಟನೆಯೊಂದರಲ್ಲಿ, ಮದುವೆ ಮನೆಯಲ್ಲಿ ತಿನ್ನಲು ಸಾಕಷ್ಟು ರಸಗುಲ್ಲಾ ಸಿಗಲಿಲ್ಲವೆಂದು ವಧು-ವರರ ಕುಟುಂಬಗಳ ನಡುವೆ ಜಗಳ ಆರಂಭವಾಗಿ ಪರಸ್ಪರ ಹೊಡೆದಾಟ ನಡೆದಿದೆ. ಸಿಸಿಟಿವಿ ದೃಶ್ಯಗಳಲ್ಲಿ ಎರಡೂ ಕಡೆಯ ಕುಟುಂಬ ಸದಸ್ಯರು ಮತ್ತು ಅತಿಥಿಗಳು ಜಗಳವಾಡುವುದು, ತಳ್ಳುವುದು, ಪ್ಲಾಸ್ಟಿಕ್ ಕುರ್ಚಿಗಳಲ್ಲಿ ಬಡಿದಾಡಿಕೊಳ್ಳುವುದನ್ನು ನೋಡಬಹುದಾಗಿದೆ. ಮದುವೆಯೇ ಕೊನೆಗೆ ರದ್ದಾಗಿ ವಧುವಿನ ಕುಟುಂಬವು ವರನ ಕುಟುಂಬದ ವಿರುದ್ಧ ವರದಕ್ಷಿಣೆ ದೂರು ದಾಖಲಿಸಿದೆ.
ಹೊಟೇಲ್ ನಲ್ಲಿ ಜಗಳ
ಈ ಘಟನೆ ನವೆಂಬರ್ 29 ರಂದು ವಧುವಿನ ಕುಟುಂಬ ತಂಗಿದ್ದ ಬೋಧಗಯಾದ ಹೊಟೇಲ್ ನಲ್ಲಿ ಸಂಭವಿಸಿದೆ. ವರನ ಕುಟುಂಬವು ಹತ್ತಿರದ ಹಳ್ಳಿಯಿಂದ ಬಂದಿತ್ತು. ವಿವಾಹ ವಿಧಿವಿಧಾನಗಳು ಪೂರ್ಣಗೊಂಡ ನಂತರ, ಸಾಕಷ್ಟು ರಸಗುಲ್ಲಾಗಳು ಇಲ್ಲದಿರುವುದನ್ನು ಕಂಡು ವಧುವಿನ ಕುಟುಂಬದವರು ಮೊದಲು ಜಗಳ ಆರಂಭಿಸಿದರು ಎಂದು ಪೊಲೀಸರು ತಿಳಿಸಿದ್ದಾರೆ. ಸಿಸಿಟಿವಿ ದೃಶ್ಯಗಳಲ್ಲಿ ಆರಂಭದಲ್ಲಿ ಜನರು ಆಹಾರ ಮಳಿಗೆಗಳ ಸುತ್ತಲೂ ಸುಳಿದಾಡುತ್ತಿರುವುದು ಕಂಡುಬಂದಿದೆ,
ರಸಗುಲ್ಲಾಕ್ಕೆ ಕಿತ್ತಾಟ
ಮದುವೆ ಮನೆಯಲ್ಲಿ ಬಡಿಸಲು ಸಾಕಷ್ಟು ರಸಗುಲ್ಲಾ ಇಲ್ಲ ಎಂದು ಗೊತ್ತಾದಾಗ ವಧುವಿನ ಕಡೆಯವರು ವರನ ಮನೆಯವರಿಗೆ ಕೇಳಿದಾಗ ಜಗಳ ಆರಂಭವಾಗಿ ಕೊನೆಗೆ ದೈಹಿಕ ಹಲ್ಲೆಯವರೆಗೆ ಹೋಯಿತು. ಎರಡೂ ಕುಟುಂಬಗಳ ಹಲವಾರು ಜನರು ಗಾಯಗೊಂಡರು. ವಿವಾಹ ವಿಧಿವಿಧಾನಗಳ ನಂತರ ದಂಪತಿ ಮದುವೆ ಸ್ಥಳಕ್ಕೆ ಹೋಗುತ್ತಿದ್ದಾಗ ಸಾಮೂಹಿಕ ಜಗಳ ಭುಗಿಲೆದ್ದಿತು. ವರನ ತಂದೆ ಮಹೇಂದ್ರ ಪ್ರಸಾದ್ ರಸಗುಲ್ಲಾಗಳ ಕೊರತೆಯ ವಿವಾದದಿಂದ ಜಗಳ ಉಂಟಾಗಿದೆ ಎಂದು ದೃಢಪಡಿಸಿದರು. ವಧುವಿನ ಕುಟುಂಬವು ನಂತರ ಸುಳ್ಳು ವರದಕ್ಷಿಣೆ ದೂರು ದಾಖಲಿಸಿದೆ ಎಂದು ಹೇಳಿದ್ದಾರೆ. ವರನ ಕುಟುಂಬವು ಮದುವೆಗೆ ಒಪ್ಪಿಕೊಂಡರೂ, ವಧುವಿನ ಕುಟುಂಬವು ಅಂತಿಮವಾಗಿ ಅದನ್ನು ವಿರೋಧಿಸಿತು.
ವರನ ತಾಯಿಯ ಹೇಳಿಕೆ
ವರನ ತಾಯಿ ಮುನ್ನಿ ದೇವಿ, ವಧುವಿಗೆ ಉಡುಗೊರೆಯಾಗಿ ನೀಡಿದ ಆಭರಣಗಳನ್ನು ವಧುವಿನ ಕುಟುಂಬ ಕದ್ದಿದೆ ಎಂದು ಆರೋಪಿಸಿದರು. ಹೊಟೇಲ್ ಬುಕ್ ಮಾಡುವ ಜವಾಬ್ದಾರಿಯನ್ನು ವರನ ಕುಟುಂಬ ವಹಿಸಿಕೊಂಡಿತ್ತು. ವರನ ಸೋದರಸಂಬಂಧಿ ಸುಶೀಲ್ ಕುಮಾರ್, ಮದುವೆಯನ್ನು ಮುಂದುವರಿಸಲು ನಾವು ವಧುವಿನ ಕುಟುಂಬದೊಂದಿಗೆ ಮಾತುಕತೆ ನಡೆಸಲು ಪ್ರಯತ್ನಿಸಿದೆವು, ಆದರೆ ಅದು ವಿಫಲವಾಯಿತು ಎಂದು ಹೇಳಿದರು.
Advertisement