

ಬೆಂಗಳೂರು: ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ದೆಹಲಿ ಪೊಲೀಸರು ನೋಟಿಸ್ ನೀಡಿದ್ದಾರೆ.
ಈ ಪ್ರಕರಣದ ತನಿಖೆ ನಡೆಸುತ್ತಿರುವ ದೆಹಲಿ ಪೊಲೀಸರ ಆರ್ಥಿಕ ಅಪರಾಧಗಳ ವಿಭಾಗ (EOW)ವಿವರವಾದ ಹಣಕಾಸು ಮತ್ತು ವಹಿವಾಟಿನ ಮಾಹಿತಿ ಕೋರಿ ಡಿ.ಕೆ. ಶಿವಕುಮಾರ್ ಅವರಿಗೆ ನೋಟಿಸ್ ಜಾರಿ ಮಾಡಿದೆ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.
ನವೆಂಬರ್ 29 ರಂದು ನೀಡಲಾದ ನೋಟಿಸ್ ಪ್ರಕಾರ, ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ವಿರುದ್ಧ ಅಕ್ಟೋಬರ್ 3 ರಂದು ದಾಖಲಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಕುಮಾರ್ ಪ್ರಮುಖ ಮಾಹಿತಿ ಹೊಂದಿದ್ದಾರೆ ಎನ್ನಲಾಗಿದೆ.
ಡಿಸೆಂಬರ್ 19 ರೊಳಗೆ ತನಿಖಾಧಿಕಾರಿಗಳ ಮುಂದೆ ಹಾಜರಾಗಲು ಅಥವಾ ಕೋರಲಾದ ದಾಖಲೆಗಳನ್ನು ಸಲ್ಲಿಸಲು ಅವರಿಗೆ ಸೂಚಿಸಲಾಗಿದೆ ಎಂದು ತಿಳಿದುಬಂದಿದೆ.
ಶಿವಕುಮಾರ್ ಅವರ ವೈಯಕ್ತಿಕ ಮತ್ತು ರಾಜಕೀಯ ಹಿನ್ನೆಲೆ, ಕಾಂಗ್ರೆಸ್ ಜೊತೆಗಿನ ಅವರ ಸಂಬಂಧ, ಅವರು ವರ್ಗಾಯಿಸಿದ್ದಾರೆ ಎನ್ನಲಾದ ಹಣದ ಸಂಪೂರ್ಣ ವಿವರ ಅಥವಾ ಯುಂಗ್ ಇಂಡಿಯಾ ಜೊತೆಗಿನ ನಂಟಿನ ಬಗ್ಗೆ ಸಂಪೂರ್ಣ ವಿವರಗಳನ್ನು ದೆಹಲಿ ಪೊಲೀಸರ ಆರ್ಥಿಕ ಅಪರಾಧಗಳ ವಿಭಾಗ ಕೋರಿದೆ.
ಈ ಹಣ ವರ್ಗಾವಣೆಯ ಉದ್ದೇಶ ಮತ್ತು ಮೂಲ, ಯಂಗ್ ಇಂಡಿಯಾ ಅಥವಾ ಎಐಸಿಸಿ ಅಧಿಕಾರಿಗಳೊಂದಿಗೆ ಯಾವುದೇ ಮಾತುಕತೆ ನಡೆದಿದ್ದೆಯೇ? ಇಲ್ಲವೇ ಇತರರ ಸೂಚನೆ ಮೇರೆಗೆ ಹಣ ಕಳುಹಿಸಲಾಗಿದೆಯೇ ಎಂಬ ಬಗ್ಗೆಯೂ ತನಿಖಾಧಿಕಾರಿಗಳು ಮಾಹಿತಿ ಬಯಸಿದ್ದಾರೆ.
ಆದಾಯ ತೆರಿಗೆ ಸಲ್ಲಿಕೆಗಳು, ಹಣಕಾಸು ಹೇಳಿಕೆಗಳು ಮತ್ತು ವಹಿವಾಟುಗಳಿಗೆ ಸಂಬಂಧಿಸಿದ ದೇಣಿಗೆ ಪ್ರಮಾಣಪತ್ರಗಳನ್ನು ಸಹ ಕೋರಿದ್ದಾರೆ.
ರಾಜಕೀಯ ಪ್ರೇರಿತ ಎಂದ ಡಿಕೆಶಿ ಆಪ್ತರು: ಈ ನೋಟಿಸ್ ಅನ್ನು ರಾಜಕೀಯ ಪ್ರೇರಿತ ಎಂದು ಡಿಕೆ ಶಿವಕುಮಾರ್ ಅವರ ಆಪ್ತರು ಕರೆದಿದ್ದು, ಬಿಜೆಪಿಯೊಂದಿಗೆ ಕೈಜೋಡಿಸಿದ ಕಾರಣಕ್ಕೆ ಅವರನ್ನು ಟಾರ್ಗೆಟ್ ಮಾಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ. ಹೆಚ್ಚಿನ ಒತ್ತಡ ಎದುರಿಸುತ್ತಿರುವವರಲ್ಲಿ ಡಿಕೆ ಶಿವಕುಮಾರ್ ಒಬ್ಬರಾಗಿದ್ದಾರೆ. ಆದರೆ ಅವರನ್ನು ಬಗ್ಗಿಸುವಲ್ಲಿ ಬಿಜೆಪಿ ಯಶಸ್ವಿಯಾಗಿಲ್ಲ ಎಂದು ಹೇಳಿದ್ದಾರೆ.
Advertisement