

ಜಾಮ್‌ನಗರ: ಗುಜರಾತ್‌ನ ಜಾಮ್‌ನಗರದಲ್ಲಿ ಆಮ್ ಆದ್ಮಿ ಪಕ್ಷದ ರ್ಯಾಲಿಯಲ್ಲಿ ಪಕ್ಷದ ನಾಯಕ ಗೋಪಾಲ್ ಇಟಾಲಿಯಾ ಅವರ ಮೇಲೆ ಶೂ ಎಸೆದ ಪ್ರಕರಣ ನಡೆದಿದೆ. ವಿಸಾವದರ್ ವಿಧಾನಸಭಾ ಕ್ಷೇತ್ರದ ಶಾಸಕರು ಪಕ್ಷದ ಗುಜರಾತ್ ಜೋಡೋ ಕಾರ್ಯಕ್ರಮದ ಸಂದರ್ಭದಲ್ಲಿ ಭಾಷಣ ಮಾಡುತ್ತಿದ್ದಾಗ, ಒಬ್ಬ ವ್ಯಕ್ತಿ ಇದ್ದಕ್ಕಿದ್ದಂತೆ ಅವರ ಕಡೆಗೆ ಶೂ ಎಸೆದಿದ್ದಾರೆ.
ಘಟನೆಯ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಮಾಧ್ಯಮಗಳಲ್ಲಿ, ಆರೋಪಿಯನ್ನು ಎಎಪಿ ಬೆಂಬಲಿಗರು ಥಳಿಸಿದ ನಂತರ ಸ್ಥಳದಲ್ಲಿ ವಾತಾವರಣ ಪ್ರಕ್ಷುಬ್ಧವಾಯಿತು. ಪೊಲೀಸರು ಮಧ್ಯಪ್ರವೇಶಿಸಿ ವಾತಾವರಣ ತಿಳಿಗೊಳಿಸಿದರು. ಆರೋಪಿಯನ್ನು ಕಾಂಗ್ರೆಸ್ ಕಾರ್ಯಕರ್ತ ಛತ್ರಪಾಲ್‌ಸಿನ್ಹ್ ಜಡೇಜಾ ಎಂದು ಗುರುತಿಸಲಾಗಿದ್ದು, ನಂತರ ಬಂಧಿಸಿ ಆತನನ್ನು ಚಿಕಿತ್ಸೆ ನೀಡಲು ಆಸ್ಪತ್ರೆಗೆ ಕರೆದೊಯ್ಯಲಾಯಿತು.
ಆರೋಪಿ ವಿರುದ್ಧ ಪ್ರಥಮ ಕೇಸು ದಾಖಲಿಸಲು ಬಯಸುವುದಿಲ್ಲ ಎಂದು ಇಟಾಲಿಯಾ ಹೇಳಿದ್ದಾರೆ. ಈ ಘಟನೆಗೆ ಭಾರತೀಯ ಜನತಾ ಪಕ್ಷ (ಬಿಜೆಪಿ) ಯನ್ನು ದೂಷಿಸಿದ ಅವರು, ಕೇಸರಿ ಪಕ್ಷವು ಇಂತಹ ವಿಷಯಗಳ ಮೂಲಕ ಎಎಪಿಯನ್ನು ತಡೆಯಲು ಬಯಸುತ್ತಿದೆ ಎಂದು ಆರೋಪಿಸಿದರು. ಇಂತಹ ಘಟನೆಯು ಎಎಪಿಯನ್ನು ಬೆದರಿಸುವುದಿಲ್ಲ, ಬಿಜೆಪಿಗೂ ಪ್ರಯೋಜನವಾಗುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಘಟನೆಗೆ ಸಂಬಂಧಿಸಿದಂತೆ ಎಎಪಿ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಕೂಡ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಎಕ್ಸ್ ಪೋಸ್ಟ್‌ನಲ್ಲಿ, ಎಎಪಿಯ ಹೆಚ್ಚುತ್ತಿರುವ ಜನಪ್ರಿಯತೆಯು ಬಿಜೆಪಿ ಮತ್ತು ಕಾಂಗ್ರೆಸ್ ನ್ನು ಚಿಂತೆಗೀಡುಮಾಡಿದೆ. ಗುಜರಾತ್‌ನಲ್ಲಿ ಎಎಪಿ ವಿರುದ್ಧ ಹೋರಾಡಲು ಎರಡೂ ಪಕ್ಷಗಳು ಕೈಜೋಡಿಸಿವೆ ಎಂದು ಅವರು ಆರೋಪಿಸಿದ್ದಾರೆ.
Advertisement