

ಜೈಪುರ: ಶಾಪಿಂಗ್ ಗೆ ಬಂದಿದ್ದ ಮಹಿಳೆಯರಿಬ್ಬರು 50 ಸಾವಿರ ಹಣದ ಕಂತೆಯನ್ನು ಬೀಳಿಸಿಕೊಂಡು ಹೋಗಿದ್ದು ಇದನ್ನು ಗಮನಿಸಿದ ಇಬ್ಬರು ಬೈಕರ್ ಗಳು ಕೂಡಲೇ ಅದನ್ನು ಎತ್ತಿಕೊಂಡು ಪರಾರಿಯಾಗಿರುವ ವಿಡಿಯೋ ವ್ಯಾಪಕ ವೈರಲ್ ಆಗುತ್ತಿದೆ.
ರಾಜಸ್ತಾನದ ಜೈಪುರದ ಬಜಾಜ್ ನಗರದಲ್ಲಿ ಈ ಘಟನೆ ನಡೆದಿದ್ದು, ಶಾಪಿಂಗ್‌ಗೆಂದು ಹೊರಟಿದ್ದ ಮಹಿಳೆ ಸಾರ್ವಜನಿಕರ ಎದುರೇ ಹಗಲು ದರೋಡೆಗೆ ಒಳಗಾಗಿದ್ದಾರೆ. ಬರ್ಕತ್ ನಗರದ ಬೀದಿಯಲ್ಲಿ ಮತ್ತೋರ್ವ ಮಹಿಳೆಯೊಂದಿಗೆ ಶಾಪಿಂಗ್ ಗೆ ಬಂದಿದ್ದ ಮಹಿಳೆ ರಸ್ತೆ ದಾಟುವಾಗ ತನ್ನ ಕೈಯಲ್ಲಿದ್ದ 50 ಸಾವಿರ ರೂ ಹಣದ ಕಂತೆಯನ್ನು ಬೀಳಿಸಿಕೊಂಡು ಹೋಗಿದ್ದಾರೆ.
ಈ ವೇಳೆ ಅದೇ ಮಾರ್ಗದಲ್ಲಿ ಬೈಕ್ ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಈ ಹಣದ ಕಂತೆಯನ್ನು ನೋಡಿ ಕೂಡಲೇ ಬೈಕ್ ನಿಲ್ಲಿಸಿ ಅದನ್ನು ಎತ್ತಿಕೊಳ್ಳಲು ಯತ್ನಿಸಿದ್ದಾರೆ. ಬೈಕ್ ಅನ್ನು ಕೂಡಲೇ ನಿಲ್ಲಿಸಿ, ಹಿಂಬಂದಿಯಲ್ಲಿದ್ದ ವ್ಯಕ್ತಿ ಓಡಿ ಹೋಗಿ ಹಣವನ್ನು ಎತ್ತಿಕೊಂಡು ಬೈಕ್ ಏರಿ ಪರಾರಿಯಾಗಲು ಯತ್ನಿಸಿದ್ದಾನೆ.
ಈ ಸಂದರ್ಭದಲ್ಲಿ ಇದನ್ನು ಗಮನಿಸಿದ ಮಹಿಳೆ ರಸ್ತೆ ಮೇಲೆ ಬಿದ್ದ ಹಣ ತನ್ನದೇ ಎಂದು ತಿಳಿದು ಕೂಡಲೇ ಬೈಕರ್ ಅನ್ನು ನಿಲ್ಲಿಸುವ ಪ್ರಯತ್ನ ಮಾಡಿದ್ದಾರೆ. ಆದರೆ ಬೈಕರ್ ಆಕೆಯನ್ನು ತಳ್ಳಿ ಅಲ್ಲಿಂದ ಪರಾರಿಯಾಗಿದ್ದಾನೆ. ಇವಿಷ್ಟೂ ಘಟನೆ ಸಮೀಪದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಮದುವೆ ಶಾಪಿಂಗ್ ಬಂದಿದ್ದರು
ಇನ್ನು ಈ ಘಟನೆ ಕುರಿತು ಮಾಹಿತಿ ನೀಡಿರುವ ಎಸ್‌ಎಚ್‌ಒ ಪೂನಂ ಚೌಧರಿ ಅವರು, 'ಮಹಿಳೆ ಮತ್ತು ಅವರ ಮಗಳು ಮದುವೆ ಶಾಪಿಂಗ್‌ಗಾಗಿ ಜೈಪುರಕ್ಕೆ ಬಂದಿದ್ದರು. ಬರ್ಕತ್ ನಗರದಲ್ಲಿ ಜನದಟ್ಟಣೆಯ ರಸ್ತೆ ದಾಟುವಾಗ ಮತ್ತು ಜಾಕೆಟ್ ಹಾಕಿಕೊಳ್ಳಲು ಪ್ರಯತ್ನಿಸುತ್ತಿದ್ದಾಗ, ಅದರಲ್ಲಿದ್ದ 50,000 ಇದ್ದ ಬಂಡಲ್ ಗಮನಕ್ಕೆ ಬಾರದೆ ಜಾರಿ ರಸ್ತೆ ಮೇಲೆ ಬಿದ್ದಿದೆ.
ಈ ವೇಳೆ ಅದೇ ರಸ್ತೆಯಲ್ಲಿ ಬೈಕ್ ನಲ್ಲಿ ಬರುತ್ತಿದ್ದ ದುಷ್ಕರ್ಮಿಗಳು ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡು ರಸ್ತೆಯಲ್ಲಿ ಬಿದ್ದಿದ್ದ ನಗದನ್ನು ಎತ್ತಿಕೊಂಡು ಪರಾರಿಯಾಗಿದ್ದಾರೆ. ಇದನ್ನು ಅರಿತುಕೊಂಡ ಮಹಿಳೆ ಬೈಕ್ ಸವಾರನನ್ನು ಬೆನ್ನಟ್ಟಲು ಪ್ರಯತ್ನಿಸಿದರೂ, ಭಾರೀ ಸಂಚಾರ ದಟ್ಟಣೆಯಿಂದಾಗಿ ಅವನನ್ನು ಹಿಡಿಯಲು ಸಾಧ್ಯವಾಗಲಿಲ್ಲ ಎಂದು ಹೇಳಿದ್ದಾರೆ.
ಎಫ್‌ಐಆರ್ ದಾಖಲು
ಇನ್ನು ಸಂತ್ರಸ್ಥ ಮಹಿಳೆ ಬಜಾಜ್ ನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ. ಆರೋಪಿಗಳನ್ನು ಗುರುತಿಸಲು ಮತ್ತು ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲು ಪೊಲೀಸ್ ಅಧಿಕಾರಿಗಳು ಈಗ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ.
Advertisement