

ಎರ್ನಾಕುಲಂ: ಮಲಯಾಳಂ ಚಲನಚಿತ್ರೋದ್ಯಮವನ್ನು ಬೆಚ್ಚಿಬೀಳಿಸಿದ ಖ್ಯಾತ ನಟಿಯ ಅಪಹರಣ ಮತ್ತು ಅತ್ಯಾಚಾರ ಪ್ರಕರಣದಲ್ಲಿ ಮಲಯಾಳಂ ನಟ ದಿಲೀಪ್ ಅವರನ್ನು ಕೇರಳ ಕೋರ್ಟ್ ಖುಲಾಸೆಗೊಳಿಸಿದ್ದು, ಪ್ರಮುಖ ಆರೋಪಿ ಪಲ್ಸರ್ ಸುನಿ ಸೇರಿದಂತೆ ಆರು ಆರೋಪಿಗಳು ದೋಷಿ ಎಂದು ಸೋಮವಾರ ತೀರ್ಪು ಪ್ರಕಟಿಸಿದೆ.
2017 ರಲ್ಲಿ ನಟಿಯನ್ನು ಅಪಹರಿಸಿ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣದ ಸುದೀರ್ಘ ವಿಚಾರಣೆ ನಡೆಸಿದ ಎರ್ನಾಕುಲಂ ಪ್ರಿನ್ಸಿಪಾಲ್ ಸೆಷನ್ಸ್ ನ್ಯಾಯಾಲಯ ಇಂದು ತೀರ್ಪ ಪ್ರಕಟಿಸಿದ್ದು, ನಟ ದಿಲೀಪ್(ಪಿ ಗೋಪಾಲಕೃಷ್ಣನ್) ಅವರನ್ನು ಖುಲಾಸೆಗೊಳಿಸಿದೆ.
ಪ್ರಧಾನ ಸೆಷನ್ಸ್ ನ್ಯಾಯಾಧೀಶ ಹನಿ ಎಂ ವರ್ಗೀಸ್, ಫೆಬ್ರವರಿ 2017 ರಲ್ಲಿ ನಟಿಯನ್ನು ಅಪಹರಿಸಿ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಲ್ಲಿ ಎನ್ ಎಸ್ ಸುನಿಲ್ ಅಲಿಯಾಸ್ ಪಲ್ಸರ್ ಸುನಿ, ಮಾರ್ಟಿನ್ ಆಂಟೋನಿ, ಬಿ ಮಣಿಕಂದನ್, ವಿ ಪಿ ವಿಜೀಶ್, ಎಚ್ ಸಲೀಂ(ವಡಿವಲ್ ಸಲೀಂ) ಮತ್ತು ಪ್ರದೀಪ್ ಅವರನ್ನು ತಪ್ಪಿತಸ್ಥರೆಂದು ಘೋಷಿಸಿದರು.
ಅಪರಾಧದಲ್ಲಿ ಅವರ ನೇರ ಭಾಗಿಯಾಗುವಿಕೆಯನ್ನು ಪ್ರಾಸಿಕ್ಯೂಷನ್ ಯಶಸ್ವಿಯಾಗಿ ಸಾಬೀತುಪಡಿಸಿದೆ ಎಂದು ನ್ಯಾಯಾಲಯ ಹೇಳಿದೆ. ಶಿಕ್ಷೆಯ ಪ್ರಮಾಣವನ್ನು ಶುಕ್ರವಾರ, ಡಿಸೆಂಬರ್ 12, 2025 ರಂದು ಪ್ರಕಟಿಸಲಾಗುವುದು ಎಂದು ಹೇಳಿದೆ.
ಆದಾಗ್ಯೂ, ಎಂಟನೇ ಆರೋಪಿ ದಿಲೀಪ್ ವಿರುದ್ಧದ ಕ್ರಿಮಿನಲ್ ಪಿತೂರಿ ಆರೋಪವನ್ನು(ಸೆಕ್ಷನ್ 120 ಬಿ) ಸಾಬೀತುಪಡಿಸಲು ಪ್ರಾಸಿಕ್ಯೂಷನ್ ವಿಫಲವಾಗಿದೆ ಎಂದು ನ್ಯಾಯಾಲಯವು ಹೇಳಿದೆ.
ಇನ್ನು ಆರೋಪಿಗಳಿಗೆ ಆಶ್ರಯ ನೀಡಿದ ಆರೋಪ ಹೊತ್ತಿರುವ ಚಾರ್ಲಿ ಥಾಮಸ್(7ನೇ ಆರೋಪಿ), ದಿಲೀಪ್ ಮತ್ತು ಪ್ರಮುಖ ಆರೋಪಿ ನಡುವೆ ಸಂಪರ್ಕ ಕಲ್ಪಿಸಿದ ಆರೋಪ ಹೊತ್ತಿರುವ ಸನಿಲ್‌ಕುಮಾರ್(9ನೇ ಆರೋಪಿ) ಮತ್ತು ಸಾಕ್ಷ್ಯ ನಾಶಪಡಿಸಿದ ಆರೋಪ ಹೊತ್ತಿರುವ ಶರತ್ ಜಿ ನಾಯರ್(15ನೇ ಆರೋಪಿ) ಅವರನ್ನು ಸಹ ಕೋರ್ಟ್ ಖುಲಾಸೆಗೊಳಿಸಿದೆ.
ಪ್ರಾಸಿಕ್ಯೂಷನ್ ಪ್ರಕಾರ, ಮೊದಲ ಆರು ಆರೋಪಿಗಳು ಅಪಹರಣ ಮತ್ತು ಲೈಂಗಿಕ ದೌರ್ಜನ್ಯದಲ್ಲಿ ನೇರವಾಗಿ ಭಾಗಿಯಾಗಿದ್ದಾರೆ. ಪ್ರಕರಣದಲ್ಲಿ ಇತರ ಮೂವರು ಈ ಹಿಂದೆ ಮಾಫಿಯಾದಾರರಾಗಿದ್ದರು. ಪಲ್ಸರ್ ಸುನಿ ಹಲ್ಲೆಯ ದೃಶ್ಯಗಳನ್ನು ಹೊಂದಿರುವ ಮೊಬೈಲ್ ಫೋನ್ ಅನ್ನು ಹಸ್ತಾಂತರಿಸಿದ್ದರು ಎನ್ನಲಾಗಿದೆ.
2017 ರಲ್ಲಿ ದಾಖಲಾದ ಪ್ರಕರಣದಲ್ಲಿ ನೇರವಾಗಿ ಭಾಗಿಯಾಗಿದ್ದ ಪಲ್ಸರ್ ಸುನಿ ಸೇರಿದಂತೆ ಆರು ಆರೋಪಿಗಳ ವಿರುದ್ಧ ಸಾಮೂಹಿಕ ಅತ್ಯಾಚಾರ, ಅಪಹರಣ ಮತ್ತು ಸಂಚು ರೂಪಿಸಿದ ಆರೋಪಗಳನ್ನು ಹೊರಿಸಲಾಗಿತ್ತು. ಈ ಕೃತ್ಯದಲ್ಲಿ ನೇರವಾಗಿ ಭಾಗವಹಿಸದಿದ್ದರೂ ಘಟನೆಯ ಮುಖ್ಯ ಸೂತ್ರಧಾರ ಎಂದು ದಿಲೀಪ್ ಕುಮಾರ್ ಅವರ ಹೆಸರನ್ನು ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಲಾಗಿತ್ತು.
ಕೃತ್ಯದಲ್ಲಿ ನೇರವಾಗಿ ಭಾಗಿಯಾಗಿದ್ದ ಆರು ಆರೋಪಿಗಳು ಸೇರಿದಂತೆ ಒಟ್ಟು ಹತ್ತು ಮಂದಿ ವಿಚಾರಣೆ ಎದುರಿಸಿದ್ದರು. ಸಂತ್ರಸ್ತ ನಟಿಯ ಮೇಲಿನ ವೈಯಕ್ತಿಕ ದ್ವೇಷದಿಂದ ಅತ್ಯಾಚಾರಕ್ಕೆ ಸುಪಾರಿ ನೀಡಿದ್ದರು ಎಂಬುದು ದಿಲೀಪ್ ವಿರುದ್ಧ ಆರೋಪ ಹೊರಿಸಲಾಗಿತ್ತು. ಆದರೆ ನಾನು ಯಾವುದೇ ತಪ್ಪು ಮಾಡಿಲ್ಲ, ತನ್ನನ್ನು ಪ್ರಕರಣದಲ್ಲಿ ಪೊಲೀಸರು ಸಿಲುಕಿಸಿದ್ದಾರೆ ಎಂದು ದಿಲೀಪ್ ವಾದಿಸಿದ್ದರು.
Advertisement