'ಇತಿಹಾಸ ತಿರುಚಲು' ಪ್ರಧಾನಿ ಮೋದಿ ಯತ್ನ; ನೆಹರೂ ಪರಂಪರೆ ಅಳಿಸಲು ಬಿಜೆಪಿಗೆ ಸಾಧ್ಯವಿಲ್ಲ: ಗೌರವ್ ಗೊಗೊಯ್

'ವಂದೇ ಮಾತರಂ' ಗೀತೆಗೆ ಅರ್ಹವಾದ ಪ್ರಾಮುಖ್ಯತೆ ಮತ್ತು ರಾಷ್ಟ್ರೀಯ ಗೀತೆಯ ಸ್ಥಾನಮಾನವನ್ನು ನೀಡಿದ್ದು ಕಾಂಗ್ರೆಸ್ ಎಂದು ವಿರೋಧ ಪಕ್ಷ ಹೇಳಿದೆ.
Gaurav Gogoi
ಗೌರವ್ ಗೊಗೊಯ್
Updated on

ನವದೆಹಲಿ: ಲೋಕಸಭೆಯಲ್ಲಿ 'ವಂದೇ ಮಾತರಂ' ಗೀತೆ ಕುರಿತ ಚರ್ಚೆಯ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಭಾಷಣವು 'ಇತಿಹಾಸವನ್ನು ಪುನಃ ಬರೆಯುವ' ಮತ್ತು ಅದಕ್ಕೆ 'ರಾಜಕೀಯ ಬಣ್ಣ' ಬಳಿಯುವ ಉದ್ದೇಶವನ್ನು ಹೊಂದಿತ್ತು. ಬಿಜೆಪಿ ಎಷ್ಟೇ ಪ್ರಯತ್ನಿಸಿದರೂ, ಜವಾಹರಲಾಲ್ ನೆಹರು ಅವರ ಕೊಡುಗೆಗಳ ಮೇಲೆ ಒಂದೇ ಒಂದು ಕಪ್ಪು ಚುಕ್ಕಿ ಇಡಲು ಸಾಧ್ಯವಾಗುವುದಿಲ್ಲ ಎಂದು ಕಾಂಗ್ರೆಸ್ ಸೋಮವಾರ ಹೇಳಿದೆ.

'ವಂದೇ ಮಾತರಂ' ಗೀತೆಗೆ ಅರ್ಹವಾದ ಪ್ರಾಮುಖ್ಯತೆ ಮತ್ತು ರಾಷ್ಟ್ರೀಯ ಗೀತೆಯ ಸ್ಥಾನಮಾನವನ್ನು ನೀಡಿದ್ದು ಕಾಂಗ್ರೆಸ್ ಎಂದು ವಿರೋಧ ಪಕ್ಷ ಹೇಳಿದೆ.

'ವಂದೇ ಮಾತರಂ' ಗೀತೆಯ 150ನೇ ವಾರ್ಷಿಕೋತ್ಸವ ಹಿನ್ನೆಲೆಯಲ್ಲಿ ಲೋಕಸಭೆಯಲ್ಲಿ 'ವಂದೇ ಮಾತರಂ' ಕುರಿತ ಚರ್ಚೆಗೆ ಇಂದು 10 ಗಂಟೆ ಮೀಸಲಿಡಲಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಚರ್ಚೆಯನ್ನು ಪ್ರಾರಂಭಿಸಿದರು.

ಲೋಕಸಭೆಯಲ್ಲಿ ಮಾತನಾಡಿದ ಕಾಂಗ್ರೆಸ್ ಉಪನಾಯಕ ಗೌರವ್ ಗೊಗೊಯ್, ಯಾವುದೇ ವಿಷಯದ ಬಗ್ಗೆ ಮಾತನಾಡುವಾಗಲೆಲ್ಲ ಭಾರತದ ಮೊದಲ ಪ್ರಧಾನಿ ನೆಹರು ಮತ್ತು ಕಾಂಗ್ರೆಸ್ ಅನ್ನು ಉಲ್ಲೇಖಿಸುವುದು ಪ್ರಧಾನಿಯವರ ಅಭ್ಯಾಸವಾಗಿದೆ. ಆಪರೇಷನ್ ಸಿಂಧೂರ ಕುರಿತ ಚರ್ಚೆಯ ಸಮಯದಲ್ಲಿ ಅವರು ನೆಹರು ಅವರ ಹೆಸರನ್ನು 14 ಬಾರಿ ಮತ್ತು ಕಾಂಗ್ರೆಸ್ ಹೆಸರನ್ನು 50 ಬಾರಿ ಬಳಸಿದ್ದಾರೆ. ಸಂವಿಧಾನದ 75ನೇ ವಾರ್ಷಿಕೋತ್ಸವದ ಚರ್ಚೆಯ ಸಮಯದಲ್ಲಿ, ನೆಹರು ಅವರ ಹೆಸರನ್ನು 10 ಬಾರಿ ಮತ್ತು ಕಾಂಗ್ರೆಸ್ ಹೆಸರನ್ನು 26 ಬಾರಿ ಬಳಸಲಾಗಿದೆ' ಎಂದು ಹೇಳಿದರು.

ಯಾವುದೇ ರಾಜಕೀಯ ಪಕ್ಷ 'ವಂದೇ ಮಾತರಂ' ಗೀತೆಗೆ ಅರ್ಹವಾದ ಪ್ರಾಮುಖ್ಯತೆಯನ್ನು ನೀಡಿದೆ ಎಂದರೆ ಅದು ಕಾಂಗ್ರೆಸ್ ಮಾತ್ರ. ತಮ್ಮ ಪಕ್ಷವು ಅದನ್ನು ಕೇವಲ ರಾಜಕೀಯ ಘೋಷಣೆಯಾಗಿ ನೋಡದೆ ರಾಷ್ಟ್ರೀಯ ಗೀತೆಯ ಸ್ಥಾನಮಾನವನ್ನು ನೀಡುವುದನ್ನು ಖಚಿತಪಡಿಸಿಕೊಂಡಿದೆ ಎಂದು ಅವರು ಹೇಳಿದರು.

Gaurav Gogoi
ಬ್ರಿಟಿಷರ ದಬ್ಬಾಳಿಕೆ ನಡುವೆಯೂ 'ವಂದೇ ಮಾತರಂ' ಬಂಡೆಯಂತೆ ಗಟ್ಟಿಯಾಗಿ ನಿಂತಿತು: ಲೋಕಸಭೆಯಲ್ಲಿ ಪ್ರಧಾನಿ ಮೋದಿ

1896ರ ಕಲ್ಕತ್ತಾ ಕಾಂಗ್ರೆಸ್ ಅಧಿವೇಶನದಲ್ಲಿ ರವೀಂದ್ರನಾಥ ಟ್ಯಾಗೋರ್ ಅವರು ಮೊದಲು 'ವಂದೇ ಮಾತರಂ' ಗೀತೆಯನ್ನು ಹಾಡಿದರು. ಟ್ಯಾಗೋರ್ ನೆಹರೂಗೆ ಬರೆದ ಪತ್ರವೊಂದರಲ್ಲಿ, 'ವಂದೇ ಮಾತರಂನ ಮೊದಲ ಭಾಗಕ್ಕೆ ಮೊದಲು ರಾಗ ಸಂಯೋಜಿಸಿದ್ದು ನಾನೇ ಮತ್ತು ಹಾಡಿನ ಬರಹಗಾರ ಇನ್ನೂ ಜೀವಂತವಾಗಿದ್ದಾಗಲೇ ನನಗೆ ಆ ಭಾಗ್ಯ ಸಿಕ್ಕಿತು' ಎಂದಿದ್ದಾಗಿ ಗೌರವ್ ಗೊಗೊಯ್ ಹೇಳಿದರು.

1905ರ ಬನಾರಸ್ ಕಾಂಗ್ರೆಸ್ ಅಧಿವೇಶನದಲ್ಲಿ ಸರಳಾ ದೇವಿ ಚೌಧುರಾನಿ 'ವಂದೇ ಮಾತರಂ' ಹಾಡಿದರು. ಈ ಹಾಡಿನಲ್ಲಿ ಜನಸಂಖ್ಯೆಗೆ ಸಂಬಂಧಿಸಿದ ಒಂದು ಪ್ರಮುಖ ತಿದ್ದುಪಡಿಯನ್ನು ಮಾಡಲಾಯಿತು. ಮೂಲ ಹಾಡಿನಲ್ಲಿ 7 ಕೋಟಿ ಎಂದು ಉಲ್ಲೇಖಿಸಲಾಗಿತ್ತು, ಆದರೆ 1905 ರಲ್ಲಿ, ಬನಾರಸ್ ಅಧಿವೇಶನದಲ್ಲಿ ಸರಳಾ ದೇವ್ ಚೌಧುರಾನಿ ಅದನ್ನು 30 ಕೋಟಿ ಎಂದು ಮಾಡಿ ಇಡೀ ದೇಶದ ಗಮನವನ್ನು ವಂದೇ ಮಾತರಂ ಕಡೆಗೆ ತಿರುಗಿಸಿದರು' ಎಂದು ಗೊಗೊಯ್ ಹೇಳಿದರು.

'ಪ್ರಧಾನಿಯವರ ಭಾಷಣವು ಎರಡು ಉದ್ದೇಶಗಳನ್ನು ಹೊಂದಿತ್ತು. ಇತಿಹಾಸವನ್ನು ಪುನಃ ಬರೆಯುವುದು ಮತ್ತು ಈ ಚರ್ಚೆಗೆ ರಾಜಕೀಯ ಬಣ್ಣ ನೀಡುವುದು. ನಿಮ್ಮ ರಾಜಕೀಯ ಪೂರ್ವಜರು ಬ್ರಿಟಿಷರ ವಿರುದ್ಧ ವಿವಿಧ ಚಳುವಳಿಗಳಲ್ಲಿ ಭಾಗವಹಿಸಿದ್ದರು ಎಂದು ತೋರುತ್ತದೆ. ಆದ್ದರಿಂದಲೇ ಪ್ರಧಾನಿಯವರ ಭಾಷಣದಲ್ಲಿ ಇತಿಹಾಸವನ್ನು ಪುನಃ ಬರೆಯುವ ಮತ್ತು ಪರಿಷ್ಕರಿಸುವ ಉದ್ದೇಶವನ್ನು ನಾನು ನೋಡಿದೆ. ಎರಡನೆಯ ಉದ್ದೇಶ ಈ ಚರ್ಚೆಗೆ ರಾಜಕೀಯ ಬಣ್ಣ ಬಳಿಯುವುದಾಗಿತ್ತು' ಎಂದು ಆರೋಪಿಸಿದರು.

ಪ್ರಧಾನಿಯವರು ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಮತ್ತು ನೆಹರೂ ಅವರನ್ನು ಸಹ ಉಲ್ಲೇಖಿಸಿದರು. ಇದು ಅವರ ಅಭ್ಯಾಸ, ಅವರು ಯಾವುದೇ ವಿಷಯದ ಬಗ್ಗೆ ಮಾತನಾಡುವಾಗಲೆಲ್ಲಾ ನೆಹರೂ ಮತ್ತು ಕಾಂಗ್ರೆಸ್ ಹೆಸರನ್ನು ಪುನರಾವರ್ತಿಸುತ್ತಲೇ ಇರುತ್ತಾರೆ. ನೀವು ಎಷ್ಟೇ ಪ್ರಯತ್ನಿಸಿದರೂ, ನೆಹರೂ ಅವರ ಕೊಡುಗೆಗೆ ಒಂದೇ ಒಂದು ಕಳಂಕ ತರುವಲ್ಲಿ ನೀವು ಯಶಸ್ವಿಯಾಗಲು ಸಾಧ್ಯವಿಲ್ಲ ಎಂದು ನಾನು ಅವರಿಗೆ ಮತ್ತು ಅವರ ಪಕ್ಷಕ್ಕೆ ವಿನಮ್ರವಾಗಿ ಹೇಳಲು ಬಯಸುತ್ತೇನೆ ಎಂದು ಗೊಗೊಯ್ ಹೇಳಿದರು.

'ವಂದೇ ಮಾತರಂ' ಅನ್ನು ಬಹಿಷ್ಕರಿಸಬೇಕು ಎಂದು ಹೇಳಲು ಬಯಸಿದ್ದು ಮುಸ್ಲಿಂ ಲೀಗ್ ಎಂದು ಗೊಗೊಯ್ ಗಮನಸೆಳೆದರು.

'ಕಾಂಗ್ರೆಸ್‌ನ ಮೌಲಾನಾ ಆಜಾದ್, 'ವಂದೇ ಮಾತರಂ ಬಗ್ಗೆ ನನಗೆ ಯಾವುದೇ ಸಮಸ್ಯೆ ಇಲ್ಲ' ಎಂದು ಹೇಳಿದರು. ಕಾಂಗ್ರೆಸ್ ಮತ್ತು ಮೊಹಮ್ಮದ್ ಅಲಿ ಜಿನ್ನಾ ನಡುವಿನ ವ್ಯತ್ಯಾಸ ಅದೇ ಆಗಿತ್ತು. ಲೀಗ್ ಒತ್ತಡ ಹೇರಿದರೂ, 1937ರ ಕಾಂಗ್ರೆಸ್ ಅಧಿವೇಶನದಲ್ಲಿ ವಂದೇ ಮಾತರಂನ ಮೊದಲ ಎರಡು ಚರಣಗಳನ್ನು ರಾಷ್ಟ್ರೀಯ ಸಭೆಗಳಲ್ಲಿ ಹಾಡಬೇಕೆಂದು ನಿರ್ಧಾರ ತೆಗೆದುಕೊಳ್ಳಲಾಯಿತು. ಮುಸ್ಲಿಂ ಲೀಗ್ ಮತ್ತು ಹಿಂದೂ ಮಹಾಸಭಾ ಕಾಂಗ್ರೆಸ್ ನಿರ್ಧಾರವನ್ನು ಪ್ರತಿಭಟಿಸಿದವು. ಆದರೆ, ಪಕ್ಷವು ಅವರ ಆಜ್ಞೆಯ ಮೇರೆಗೆ ಕಾರ್ಯನಿರ್ವಹಿಸಲಿಲ್ಲ, ಬದಲಾಗಿ ಜನರ ಭಾವನೆಗಳಿಗೆ ಮಣಿಯಿತು' ಎಂದು ಅವರು ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com