

ನವದೆಹಲಿ: ಡಿಸೆಂಬರ್ 1, 2025 ರಿಂದ ಇಂಡಿಗೋ ಕಾರ್ಯಾಚರಣೆಯ ಬಿಕ್ಕಟ್ಟನ್ನು ಗಂಭೀರವಾಗಿ ಪರಿಗಣಿಸಿದ ಕೇಂದ್ರ ನಾಗರಿಕ ವಿಮಾನಯಾನ ನಿರ್ದೇಶನಾಲಯ(DGCA) ಮಂಗಳವಾರ ದೇಶದ ಅತಿದೊಡ್ಡ ವಿಮಾನಯಾನ ಸಂಸ್ಥೆಯ ವೇಳಾಪಟ್ಟಿಯಲ್ಲಿ ಶೇಕಡಾ 5 ರಷ್ಟು ಕಡಿತಗೊಳಿಸಿ ಆದೇಶಿಸಿದೆ.
ವಿಮಾನಯಾನ ಸುರಕ್ಷತಾ ನಿಯಂತ್ರಕದ ಪ್ರಕಾರ, ಕಡಿತಗೊಳಿಸಿದ ವೇಳಾಪಟ್ಟಿ ಹಲವು ವಲಯಗಳಿಗೆ ಅನ್ವಯಿಸುತ್ತದೆ. ಬುಧವಾರ ಸಂಜೆ 5 ಗಂಟೆಯೊಳಗೆ ಪರಿಷ್ಕೃತ ಕಾರ್ಯಾಚರಣೆಯ ವೇಳಾಪಟ್ಟಿಯನ್ನು ಸಲ್ಲಿಸುವಂತೆ DGCA ಇಂಡಿಗೋಗೆ ವಿಪ್ ಜಾರಿ ಮಾಡಿದೆ.
ಕಾರ್ಯಾಚರಣೆಯ ವಿಶ್ವಾಸಾರ್ಹತೆಯ ಕಾಳಜಿಯನ್ನು ಉಲ್ಲೇಖಿಸಿ, ಪ್ರಸ್ತುತ ಚಳಿಗಾಲದ ವೇಳಾಪಟ್ಟಿಯಡಿಯಲ್ಲಿ ಇಂಡಿಗೋ ಹಾರಾಟ ನಡೆಸುತ್ತಿರುವ ಮಾರ್ಗಗಳ ಸಂಖ್ಯೆಯನ್ನು ಕಡಿಮೆ ಮಾಡಲು ಸರ್ಕಾರ ಮಧ್ಯಪ್ರವೇಶಿಸಲಿದೆ ಎಂದು ಕೇಂದ್ರ ನಾಗರಿಕ ವಿಮಾನಯಾನ ಸಚಿವರು ಹೇಳಿದ ಒಂದು ದಿನದ ನಂತರ ಈ ಕ್ರಮ ಕೈಗೊಳ್ಳಲಾಗಿದೆ.
ಭಾರತದ ಅತಿದೊಡ್ಡ ವಿಮಾನಯಾನ ಸಂಸ್ಥೆಯಾದ ಇಂಡಿಗೋ, 2025–26 ರ ಚಳಿಗಾಲದ ವೇಳಾಪಟ್ಟಿಯ ಭಾಗವಾಗಿ ಪ್ರತಿದಿನ 2,200ಕ್ಕೂ ಹೆಚ್ಚು ವಿಮಾನಗಳನ್ನು ನಿರ್ವಹಿಸುತ್ತಿದೆ. ಡಿಜಿಸಿಎಯ ಹಸ್ತಕ್ಷೇಪವು ವಿಮಾನಯಾನ ಸಂಸ್ಥೆಯ ಜಾಲವನ್ನು ಸ್ಥಿರಗೊಳಿಸುವ ಮತ್ತು ನಡೆಯುತ್ತಿರುವ ಅಡಚಣೆಗಳ ನಡುವೆ ಸುಗಮ ಕಾರ್ಯಾಚರಣೆಗಳನ್ನು ಖಚಿತಪಡಿಸಿಕೊಳ್ಳುವ ಗುರಿ ಹೊಂದಿದೆ.
ಸರ್ಕಾರವು ಇಂಡಿಗೋ ವಿಮಾನಯಾನ ಸಂಸ್ಥೆಯ ಸ್ಲಾಟ್ ಹಂಚಿಕೆಯನ್ನು "ಖಂಡಿತವಾಗಿಯೂ" ಕಡಿತಗೊಳಿಸುತ್ತದೆ ಎಂದು ಕೇಂದ್ರ ನಾಗರಿಕ ವಿಮಾನಯಾನ ಸಚಿವ ಕೆ. ರಾಮಮೋಹನ್ ನಾಯ್ಡು ಅವರು ಹೇಳಿದ್ದರು.
"ಇಂಡಿಗೋದ ಚಳಿಗಾಲದ ವೇಳಾಪಟ್ಟಿಯಿಂದ ಕೆಲವು ಮಾರ್ಗಗಳನ್ನು ಕಡಿತಗೊಳಿಸಲು ನಾವು ಆದೇಶ ಹೊರಡಿಸುತ್ತೇವೆ. ಇವುಗಳನ್ನು ಇತರ ವಿಮಾನಯಾನ ಸಂಸ್ಥೆಗಳಿಗೆ ಮರು ನಿಯೋಜಿಸಲಾಗುತ್ತದೆ ಮತ್ತು ಅವುಗಳನ್ನು ನಿರ್ವಹಿಸುವ ಸಾಮರ್ಥ್ಯವನ್ನು ಪ್ರದರ್ಶಿಸಿದಾಗ ಮತ್ತೆ ಇಂಡಿಗೋಗೆ ಹಿಂತಿರುಗಿಸಲಾಗುತ್ತದೆ" ಎಂದು ನಾಯ್ಡು ಡಿಡಿ ನ್ಯೂಸ್‌ಗೆ ತಿಳಿಸಿದ್ದಾರೆ.
Advertisement