

ನವದೆಹಲಿ: ದೇಶದ ಅತಿದೊಡ್ಡ ವಿಮಾನಯಾನ ಸಂಸ್ಥೆ ಇಂಡಿಗೋ ವಿಮಾನಗಳ ರದ್ದತಿ ಮುಂದುವರೆದಿದ್ದು, ಮಂಗಳವಾರವೂ ಸುಮಾರು 500 ವಿಮಾನಗಳನ್ನು ರದ್ದುಗೊಳಿಸಿದೆ ಎಂದು ಮೂಲಗಳು ತಿಳಿಸಿವೆ.
ಬೆಂಗಳೂರು ಮತ್ತು ದೆಹಲಿಯಲ್ಲಿ ಇನ್ನೂ ದೊಡ್ಡ ಅಡೆತಡೆಗಳು ಕಂಡುಬಂದಿದ್ದು, ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 58 ಆಗಮನ ಮತ್ತು 63 ನಿರ್ಗಮನ ವಿಮಾನ ಸೇರಿದಂತೆ 121 ವಿಮಾನಗಳು ರದ್ದಾಗಿರುವುದಾಗಿ ವರದಿಯಾಗಿದೆ. ದೆಹಲಿಯಲ್ಲಿ ಒಟ್ಟು 152 ವಿಮಾನಗಳು ರದ್ದಾಗಿವೆ.
ಹೈದರಾಬಾದ್ ವಿಮಾನ ನಿಲ್ದಾಣದಲ್ಲಿ 14 ಆಗಮನ ಮತ್ತು 44 ನಿರ್ಗಮನಗಳು ಸೇರಿದಂತೆ 58 ವಿಮಾನಗಳು ರದ್ದಾಗಿವೆ.
ಚೆನ್ನೈನಿಂದ ಕನಿಷ್ಠ 81 ವಿಮಾನಗಳು, ಮುಂಬೈನಿಂದ 31, ಲಖನೌದಿಂದ 26 ಮತ್ತು ಅಹಮದಾಬಾದ್‌ನಿಂದ 16 ವಿಮಾನಗಳು ರದ್ದಾಗಿವೆ.
ವೇಳಾಪಟ್ಟಿ ಕಡಿತ ಕಡಿತ
ಇಂಡಿಗೋದ ಎದುರಿಸುತ್ತಿರುವ ಕಾರ್ಯಾಚರಣಾ ಭಾರೀ ಅಸ್ತವ್ಯಸ್ತತೆಯ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ಇಂಡಿಗೋ ವಿಮಾನಯಾನ ಸಂಸ್ಥೆಯ ಚಳಿಗಾಲದ ವೇಳಾಪಟ್ಟಿಯನ್ನು ಕಡಿತಗೊಳಿಸಿ, ಆ ಸ್ಥಾನಗಳನ್ನು ಇತರ ವಿಮಾನಯಾನ ಸಂಸ್ಥೆಗಳಿಗೆ ನೀಡಲು ನಿರ್ಧರಿಸಿದೆ.
ಈ ಬಗ್ಗೆ ನಾಗರಿಕ ವಿಮಾನಯಾನ ಸಚಿವಾಲಯ ಮಂಗಳವಾರ ಎಲ್ಲಾ ವಿಮಾನಯಾನ ಸಂಸ್ಥೆಗಳ ಉನ್ನತ ಅಧಿಕಾರಿಗಳೊಂದಿಗೆ ಸಭೆ ನಡೆಸಲಿದೆ.
ಸರ್ಕಾರವು ಇಂಡಿಗೋ ವಿಮಾನಯಾನ ಸಂಸ್ಥೆಯ ಸ್ಲಾಟ್ ಹಂಚಿಕೆಯನ್ನು "ಖಂಡಿತವಾಗಿಯೂ" ಕಡಿತಗೊಳಿಸುತ್ತದೆ ಎಂದು ಕೇಂದ್ರ ನಾಗರಿಕ ವಿಮಾನಯಾನ ಸಚಿವ ಕೆ. ರಾಮಮೋಹನ್ ನಾಯ್ಡು ಅವರು ಹೇಳಿದ್ದಾರೆ.
"ಇಂಡಿಗೋದ ಚಳಿಗಾಲದ ವೇಳಾಪಟ್ಟಿಯಿಂದ ಕೆಲವು ಮಾರ್ಗಗಳನ್ನು ಕಡಿತಗೊಳಿಸಲು ನಾವು ಆದೇಶ ಹೊರಡಿಸುತ್ತೇವೆ. ಇವುಗಳನ್ನು ಇತರ ವಿಮಾನಯಾನ ಸಂಸ್ಥೆಗಳಿಗೆ ಮರು ನಿಯೋಜಿಸಲಾಗುತ್ತದೆ ಮತ್ತು ಅವುಗಳನ್ನು ನಿರ್ವಹಿಸುವ ಸಾಮರ್ಥ್ಯವನ್ನು ಪ್ರದರ್ಶಿಸಿದಾಗ ಮತ್ತೆ ಇಂಡಿಗೋಗೆ ಹಿಂತಿರುಗಿಸಲಾಗುತ್ತದೆ" ಎಂದು ನಾಯ್ಡು ಡಿಡಿ ನ್ಯೂಸ್‌ಗೆ ತಿಳಿಸಿದ್ದಾರೆ.
Advertisement