

ಗೋವಾದ ಅರ್ಪೋರಾದ ಬಿರ್ಚ್ ಬೈ ರೋಮಿಯೋ ಲೇನ್ ನೈಟ್‌ಕ್ಲಬ್‌ನಲ್ಲಿ ಶನಿವಾರ ತಡರಾತ್ರಿ ಬೆಂಕಿ ಅವಘಡ ಸಂಭವಿಸಿ 25 ಜನರು ಮೃತಪಟ್ಟ ಘಟನೆ ನಂತರ, ಅದರ ಮಾಲೀಕರಾದ ಸೌರಭ್ ಮತ್ತು ಗೌರವ್ ಲುತ್ರಾ ಥೈಲ್ಯಾಂಡ್‌ಗೆ ಪಲಾಯನ ಮಾಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದರಿಂದಾಗಿ ಪೊಲೀಸರು ಅವರನ್ನು ಪತ್ತೆಹಚ್ಚಲು ಇಂಟರ್‌ಪೋಲ್‌ನ ಸಹಾಯವನ್ನು ಕೋರಿದ್ದಾರೆ.
ಗೋವಾ ಪೊಲೀಸರ ಪ್ರಕಾರ, ಡಿಸೆಂಬರ್ 7 ರಂದು ಬೆಳಗ್ಗೆ 5.30 ಕ್ಕೆ ಇಂಡಿಗೋ ವಿಮಾನ 6E 1073 ಮೂಲಕ ಫುಕೆಟ್‌ಗೆ ತೆರಳಿದ್ದಾರೆ.
ಎಫ್‌ಐಆರ್ ದಾಖಲಾದ ತಕ್ಷಣ ಆರಂಭಿಸಲಾದ ಹುಡುಕಾಟದ ಸಮಯದಲ್ಲಿ ಪೊಲೀಸರು ಪರಾರಿಯಾಗಿರುವುದನ್ನು ಪತ್ತೆ ಹಚ್ಚಿದರು. ಘಟನೆ ನಡೆದ ಸ್ವಲ್ಪ ಸಮಯದ ನಂತರ ಮಧ್ಯರಾತ್ರಿಯ ಸುಮಾರಿಗೆ ಇಬ್ಬರೂ ಭಾರತವನ್ನು ತೊರೆದಿದ್ದಾರೆ ಎಂದು ವಲಸೆ ದಾಖಲೆಗಳು ದೃಢಪಡಿಸಿವೆ.
ನೈಟ್‌ಕ್ಲಬ್ ಮಾಲೀಕರನ್ನು ಪತ್ತೆಹಚ್ಚಲು ಮತ್ತು ಬಂಧಿಸಲು ಅಧಿಕಾರಿಗಳು ಈಗ ಇಂಟರ್‌ಪೋಲ್‌ನ ಸಹಾಯವನ್ನು ಕೋರಿದ್ದಾರೆ. ಎಫ್‌ಐಆರ್ ದಾಖಲಿಸಿದ ಕೂಡಲೇ, ಇಬ್ಬರು ಆರೋಪಿಗಳ ವಿಳಾಸಗಳ ಮೇಲೆ ದಾಳಿ ನಡೆಸಲು ಪೊಲೀಸರು ದೆಹಲಿಗೆ ತಂಡವನ್ನು ಕಳುಹಿಸಿದರು.
ಅವರು ಲಭ್ಯವಿಲ್ಲದ ಕಾರಣ, ಕಾನೂನಿನ ಸೂಕ್ತ ವಿಭಾಗಗಳ ಅಡಿಯಲ್ಲಿ ನೋಟಿಸ್ ನ್ನು ಅವರ ಮನೆಯ ಗೇಟ್‌ಗೆ ಅಂಟಿಸಲಾಗಿದೆ ಎಂದು ಅಧಿಕಾರಿ ಹೇಳಿದರು. ಡಿಸೆಂಬರ್ 7 ರೊಳಗೆ, ಗೋವಾ ಪೊಲೀಸರ ಕೋರಿಕೆಯ ಮೇರೆಗೆ ವಲಸೆ ಬ್ಯೂರೋ (BOI) ಇಬ್ಬರೂ ಆರೋಪಿಗಳ ವಿರುದ್ಧ ಲುಕ್ ಔಟ್ ಸರ್ಕ್ಯುಲರ್ ಹೊರಡಿಸಿದೆ ಎಂದು ಹೇಳಿದರು.
ಈ ಕಾರ್ಯಾಚರಣೆಯ ಸಮಯದಲ್ಲಿ, ಡಿಸೆಂಬರ್ 7 ರ ಮುಂಜಾನೆ, ಅಂದರೆ ಮಧ್ಯರಾತ್ರಿಯ ಸುಮಾರಿಗೆ ನಡೆದ ಘಟನೆಯ ನಂತರ ಇಬ್ಬರೂ ಈಗಾಗಲೇ ದೆಹಲಿಯಿಂದ ಫುಕೆಟ್‌ಗೆ ತೆರಳಿದ್ದರು ಎಂದು ಕಂಡುಬಂದಿದೆ.
ಸೌರಭ್ ಮತ್ತು ಗೌರವ್ ಲುತ್ರಾ ಇಬ್ಬರನ್ನೂ ಆದಷ್ಟು ಬೇಗ ಬಂಧಿಸಲು ಗೋವಾ ಪೊಲೀಸರು ಸಿಬಿಐನ ಇಂಟರ್‌ಪೋಲ್ ವಿಭಾಗದೊಂದಿಗೆ ಸಮನ್ವಯ ಸಾಧಿಸಲು ಮುಂದಿನ ಕ್ರಮಗಳನ್ನು ತೆಗೆದುಕೊಂಡಿದ್ದಾರೆ.
ಮಾಲೀಕರು ವಿದೇಶದಲ್ಲಿಯೇ ಇದ್ದರೂ, ಪೊಲೀಸರು ಪ್ರಮುಖ ಕಾರ್ಯಾಚರಣಾ ಸಿಬ್ಬಂದಿ ಭರತ್ ಕೊಹ್ಲಿ ಅವರನ್ನು ದೆಹಲಿಯಿಂದ ಬಂಧಿಸಿದ್ದಾರೆ. ಅವರು ಆಡಳಿತ ಮಂಡಳಿಯ ಸದಸ್ಯರಲ್ಲಿ ಒಬ್ಬರಾಗಿದ್ದಾರೆ.
ಇಲ್ಲಿಯವರೆಗೆ, ಕ್ಲಬ್‌ನ ಮುಖ್ಯ ಜನರಲ್ ಮ್ಯಾನೇಜರ್ ರಾಜೀವ್ ಮೋಡಕ್, ಜನರಲ್ ಮ್ಯಾನೇಜರ್ ವಿವೇಕ್ ಸಿಂಗ್, ಬಾರ್ ಮ್ಯಾನೇಜರ್ ರಾಜೀವ್ ಸಿಂಘಾನಿಯಾ ಮತ್ತು ಗೇಟ್ ಮ್ಯಾನೇಜರ್ ರಿಯಾನ್ಶು ಠಾಕೂರ್ ಅವರನ್ನು ಬಂಧಿಸಲಾಗಿದೆ.
ಇದಕ್ಕೂ ಮುನ್ನ, ಗೋವಾ ಪೊಲೀಸ್ ತಂಡವು ದೆಹಲಿಯಲ್ಲಿರುವ ಗೌರವ್ ಮತ್ತು ಸೌರಭ್ ಲೂಥಾ ಅವರ ಮನೆಗೆ ಭೇಟಿ ನೀಡಿ ಅವರ ಕುಟುಂಬ ಸದಸ್ಯರನ್ನು ಪ್ರಶ್ನಿಸಿತು.
ಪೊಲೀಸರು ಅವರನ್ನು ಪತ್ತೆಹಚ್ಚಲು ಹುಡುಕಾಟ ನಡೆಸುತ್ತಿದ್ದ ಮಧ್ಯೆ, ಸೌರಭ್ ಲೂತ್ರಾ ಸಾಮಾಜಿಕ ಮಾಧ್ಯಮದಲ್ಲಿ ಘಟನೆ ಬಗ್ಗೆ ತೀವ್ರ ದುಃಖ ವ್ಯಕ್ತಪಡಿಸಿದ್ದರು. ಮೃತಪಟ್ಟವರ ಕುಟುಂಬಗಳಿಗೆ ಸಾಧ್ಯವಾದ ಎಲ್ಲಾ ರೂಪಗಳಲ್ಲಿ ಸಹಾಯ, ಬೆಂಬಲ ಮತ್ತು ಸಹಕಾರವನ್ನು ನೀಡುವುದಾಗಿ ತಿಳಿಸಿದ್ದರು.
ತನಿಖಾ ಸಮಿತಿ ರಚಿಸಿದ ಗೋವಾ ಸರ್ಕಾರ
ನೈಟ್‌ಕ್ಲಬ್‌ನಲ್ಲಿ ಸಂಭವಿಸಿದ ಭಾರೀ ಬೆಂಕಿ ಅವಘಡಕ್ಕೆ ಕಾರಣವಾದ ಸಂಗತಿಗಳು ಮತ್ತು ಸಂದರ್ಭಗಳನ್ನು ಖಚಿತಪಡಿಸಿಕೊಳ್ಳಲು ಗೋವಾ ಸರ್ಕಾರ ನಾಲ್ವರು ಸದಸ್ಯರ ಮ್ಯಾಜಿಸ್ಟೀರಿಯಲ್ ತನಿಖಾ ಸಮಿತಿಯನ್ನು ರಚಿಸಿದೆ.
ಪಣಜಿಯಿಂದ 25 ಕಿ.ಮೀ ದೂರದಲ್ಲಿರುವ ಅರ್ಪೋರಾ ಗ್ರಾಮದಲ್ಲಿರುವ ಜನಪ್ರಿಯ ಪಾರ್ಟಿ ಸ್ಥಳದಲ್ಲಿ ಬೆಂಕಿಗೆ ಪಟಾಕಿಯೇ ಕಾರಣ ಎಂದು ತಿಳಿದುಬಂದಿದೆ.
ಅಧೀನ ಕಾರ್ಯದರ್ಶಿ (ಗೃಹ) ಮಂಥನ್ ಮನೋಜ್ ನಾಯಕ್ ಅವರು ಉತ್ತರ ಗೋವಾ ಜಿಲ್ಲಾಧಿಕಾರಿ ಅಂಕಿತ್ ಯಾದವ್ ಅವರ ಅಧ್ಯಕ್ಷತೆಯಲ್ಲಿ ತನಿಖಾ ಸಮಿತಿಯನ್ನು ರಚಿಸುವಂತೆ ಆದೇಶ ಹೊರಡಿಸಿದ್ದಾರೆ.
ಸಮಿತಿಯ ಸದಸ್ಯರಲ್ಲಿ ದಕ್ಷಿಣ ಗೋವಾ ಪೊಲೀಸ್ ವರಿಷ್ಠಾಧಿಕಾರಿ ಟಿಕಮ್ ಸಿಂಗ್ ವರ್ಮಾ, ವಿಧಿವಿಜ್ಞಾನ ವಿಜ್ಞಾನಗಳ ನಿರ್ದೇಶಕ ಅಶುತೋಷ್ ಆಪ್ಟೆ ಮತ್ತು ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಉಪ ನಿರ್ದೇಶಕ ರಾಜೇಂದ್ರ ಹಲಾರ್ನ್‌ಕರ್ ಇದ್ದಾರೆ.
ಬೆಂಕಿಗೆ ಕಾರಣವಾದ ಘಟನೆಗಳ ಅನುಕ್ರಮವನ್ನು ಸಮಿತಿಯು ಪರಿಶೀಲಿಸುತ್ತದೆ. ಎಲ್ಲಾ ಶಾಸನಬದ್ಧ ಪರವಾನಗಿಗಳ ಅನುಸರಣೆಯನ್ನು ಪರಿಶೀಲಿಸುತ್ತದೆ ಮತ್ತು ಲೋಪಗಳನ್ನು ನಿರ್ಧರಿಸುತ್ತದೆ.
ಬೆಂಕಿ ಅವಘಡದ ನಂತರ, ಗೋವಾ ಸರ್ಕಾರವು ವಿವಾದಾತ್ಮಕ ರೋಮಿಯೋ ಲೇನ್ ಕ್ಲಬ್ ಸರಪಳಿಯ ಮೇಲೆ ತನ್ನ ಕಠಿಣ ಕ್ರಮವನ್ನು ತೀವ್ರಗೊಳಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಗೋವಾದಲ್ಲಿರುವ ಆತಿಥ್ಯ ಕಂಪನಿಯ ಇತರ ಎರಡು ಆಸ್ತಿಗಳನ್ನು ಮೊಹರು ಮಾಡಲಾಗಿದೆ. ಉತ್ತರ ಗೋವಾ ಜಿಲ್ಲಾಡಳಿತವು ಕ್ರಮವಾಗಿ ವ್ಯಾಗೇಟರ್ ಮತ್ತು ಅಸ್ಸಾಗಾವೊದಲ್ಲಿರುವ ರೋಮಿಯೋ ಲೇನ್ ಸರಪಳಿಯ ಭಾಗವಾಗಿರುವ ಬೀಚ್ ಶ್ಯಾಕ್ ಮತ್ತು ಇನ್ನೊಂದು ಕ್ಲಬ್ ನ್ನು ಮೊಹರು ಮಾಡಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಎರಡೂ ಆಸ್ತಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿ ಹೇಳಿದರು.
ನೈಟ್‌ಕ್ಲಬ್‌ಗಳು, ರೆಸ್ಟೋರೆಂಟ್, ಬಾರ್‌ಗಳು ಕಾರ್ಯಕ್ರಮ ನಡೆಯುವ ಸ್ಥಳಗಳು ಮತ್ತು ಅಂತಹುದೇ ಸಂಸ್ಥೆಗಳಿಗೆ ಗೋವಾ ಸರ್ಕಾರವು ಅಗ್ನಿ ಸುರಕ್ಷತೆ ಮತ್ತು ಜನಸಂದಣಿ ನಿಯಂತ್ರಣ ಸೇರಿದಂತೆ ಹಲವಾರು ಕ್ರಮಗಳನ್ನು ನಿಗದಿಪಡಿಸಿದೆ.
ವಿಪತ್ತು ನಿರ್ವಹಣಾ ಕಾಯ್ದೆ 2005 ರ ನಿಬಂಧನೆಗಳ ಅಡಿಯಲ್ಲಿ, ಅಂತಹ ಎಲ್ಲಾ ಸಂಸ್ಥೆಗಳು ಅಗ್ನಿ ಸುರಕ್ಷತೆ, ವಿದ್ಯುತ್ ಸುರಕ್ಷತೆ, ತುರ್ತು ಸಿದ್ಧತೆ ಮತ್ತು ಸಮರ್ಥ ಅಧಿಕಾರಿಗಳು ಸೂಚಿಸಿದ ರಚನಾತ್ಮಕ ಸುರಕ್ಷತಾ ಮಾನದಂಡಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ನೋಡಿಕೊಳ್ಳಲು ನಿರ್ದೇಶಿಸಲಾಗಿದೆ ಎಂದು ಸಲಹೆಯಲ್ಲಿ ಸೂಚಿಸಲಾಗಿದೆ.
ಸಂಸ್ಥೆಗಳು ಮಾನ್ಯವಾದ ಅಗ್ನಿಶಾಮಕ NOC ನ್ನು ಕಾಯ್ದುಕೊಳ್ಳಬೇಕು, ಅಗ್ನಿಶಾಮಕ ಇಲಾಖೆಯಿಂದ ಹೊರಡಿಸಲಾದ ಎಲ್ಲಾ ಷರತ್ತುಗಳನ್ನು ಪಾಲಿಸಬೇಕು ಮತ್ತು ಅಧಿಕೃತ ಆಕ್ಯುಪೆನ್ಸಿ ಮಿತಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು,
ಪೊಲೀಸ್ ತನಿಖೆಯಿಂದ ಹಲವಾರು ಅಕ್ರಮಗಳು ಬಯಲಿಗೆ ಬಂದಿದೆ. ಇದರಲ್ಲಿ ಅಗ್ನಿಶಾಮಕ ಇಲಾಖೆಯಿಂದ ನಿರಾಕ್ಷೇಪಣಾ ಪ್ರಮಾಣಪತ್ರದ ಇಲ್ಲದಿರುವುದು ಮತ್ತು ಸರಿಯಾದ ದಾಖಲೆಗಳಿಲ್ಲದೆ ಪರವಾನಗಿ ನೀಡಿರುವುದು ಪತ್ತೆಯಾಗಿದೆ.
ಅರ್ಪೋರಾ ನದಿಯ ಹಿನ್ನೀರಿನಲ್ಲಿರುವ ಕ್ಲಬ್, ಕಿರಿದಾದ ಸೇತುವೆಯಿಂದ ಮಾತ್ರ ಸಂಪರ್ಕ ಹೊಂದಿದ ಸಣ್ಣ ನಿರ್ಗಮನ ದ್ವಾರಗಳನ್ನು ಹೊಂದಿದ್ದು, ಬೆಂಕಿ ಹೊತ್ತಿ ಉರಿದ ಸಮಯದಲ್ಲಿ ಜನರು ತಪ್ಪಿಸಿಕೊಳ್ಳಲು ತೀವ್ರ ಅಡ್ಡಿಯಾಯಿತು ಎಂದು ಅಗ್ನಿಶಾಮಕ ಅಧಿಕಾರಿಗಳು ಈ ಹಿಂದೆ ತಿಳಿಸಿದ್ದರು.
Advertisement