

ಪುದುಚೇರಿ: ಪುದುಚೇರಿಯಲ್ಲಿ ಮಂಗಳವಾರ ನಡೆದ ವಿಜಯ್ ನೇತೃತ್ವದ ಟಿವಿಕೆ ರ್ಯಾಲಿ ವೇಳೆ ಭದ್ರತಾ ಲೋಪವಾಗಿದ್ದು, ಹ್ಯಾಂಡ್‌ಗನ್ ಹಿಡಿದು ನಟನ ಬಳಿ ತೆರಳಲು ಯತ್ನಿಸಿದ ತಮಿಳುನಾಡಿನ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.
ಆದಾಗ್ಯೂ, ಉಪ್ಪಳಂನ ಎಕ್ಸ್‌ಪೋ ಮೈದಾನದಲ್ಲಿ(ನ್ಯೂ ಪೋರ್ಟ್) ನಡೆದ ನಿರ್ಬಂಧಿತ ರ್‍ಯಾಲಿ ಸ್ಥಳ ಪ್ರವೇಶಿಸುತ್ತಿದ್ದ ಎಲ್ಲರನ್ನೂ ಎಚ್ಚರಿಕೆಯಿಂದ ತಪಾಸಣೆ ಮಾಡಿದ ಪೊಲೀಸರು ಆತನನ್ನು ಬಂಧಿಸಿದ್ದಾರೆ.
ಬಂಧಿತ ವ್ಯಕ್ತಿ ತಮಿಳುನಾಡಿನ ಶಿವಗಂಗಾ ಜಿಲ್ಲೆಯವನೆಂದು ಮತ್ತು ತಾನು ಖಾಸಗಿ ಭದ್ರತಾ ಅಧಿಕಾರಿಯಾಗಿದ್ದು, ಸಮಯಕ್ಕೆ ಸರಿಯಾಗಿ ತನ್ನ ತಂಡವನ್ನು ಸೇರಲು ಸಾಧ್ಯವಾಗಲಿಲ್ಲ ಎಂದು ಹೇಳಿರುವುದಾಗಿ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ತನ್ನ ಬಳಿ ಪರವಾನಗಿ ಪಡೆದ ರಿವಾಲ್ವರ್ ಇದೆ ಎಂದು ಆ ವ್ಯಕ್ತಿ ಹೇಳಿಕೊಂಡಿದ್ದಾರೆ. ವರದಿಗಾರರು ಆತನ ಗುರುತನ್ನು ತಿಳಿದುಕೊಳ್ಳಲು ಪ್ರಯತ್ನಿಸಿದಾಗ ಮತ್ತು ನೀವು ಯಾರಿಗೆ ಭದ್ರತೆ ನೀಡುತ್ತಿದ್ದೀರಿ ಎಂದು ಕೇಳಿದಾಗ, ಆ ವ್ಯಕ್ತಿ ಉತ್ತರಿಸಲು ನಿರಾಕರಿಸಿದರು. ಆದರೆ ಗನ್ ಪರವಾನಗಿ ಹೊಂದಿದ್ದೇನೆ ಎಂದು ತಿಳಿಸಿದರು.
ಹೆಚ್ಚಿನ ವಿಚಾರಣೆಗಾಗಿ ಆ ವ್ಯಕ್ತಿಯನ್ನು ಬಂಧಿಸಲಾಗಿದೆ. ಆತ ತನ್ನ ಸೊಂಟದಲ್ಲಿ ಹ್ಯಾಂಡ್‌ಗನ್ ಇಟ್ಟುಕೊಂಡಿದ್ದನು ಮತ್ತು ಸ್ಥಳದ ಪ್ರವೇಶದ್ವಾರದಲ್ಲಿದ್ದ ಪೊಲೀಸರು ಆತನನ್ನು ಪರಿಶೀಲಿಸಿದಾಗ ಗನ್ ಪತ್ತೆಯಾಗಿದೆ ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ.
ಸೆಪ್ಟೆಂಬರ್ 27 ರಂದು ಕರೂರಿನಲ್ಲಿ ಪಕ್ಷದ ಸಂಸ್ಥಾಪಕ ವಿಜಯ್ ರ್‍ಯಾಲಿಯನ್ನುದ್ದೇಶಿಸಿ ಮಾತನಾಡುವ ವೇಳೆ ಕಾಲ್ತುಳಿತ ಸಂಭವಿಸಿ 41 ಜನರು ಸಾವನ್ನಪ್ಪಿದ ನಂತರ, ತಮಿಳಗ ವೆಟ್ರಿ ಕಳಗಂ ರ್‍ಯಾಲಿಗೆ ಕೇವಲ 5,000 ಜನರಿಗೆ ಮಾತ್ರ ಪ್ರವೇಶ ನಿರ್ಬಂಧಿಸಲಾಗಿದೆ.
Advertisement