ಸೆಪ್ಟೆಂಬರ್ 27 ರಂದು ತಮಿಳುನಾಡಿನ ಕರೂರಿನಲ್ಲಿ ನಟ ಮತ್ತು ರಾಜಕಾರಣಿ ವಿಜಯ್ ನೇತೃತ್ವದ ರ‍್ಯಾಲಿಯಲ್ಲಿ ಸಂಭವಿಸಿದ ಕಾಲ್ತುಳಿತದ ನಂತರ ನಟ ಅಜಿತ್ ಕುಮಾರ್ ಘಟನೆಗೆ ಸಾಮೂಹಿಕ ಹೊಣೆಗಾರಿಕೆ ಇದೆ ಎಂದಿದ್ದಾರೆ. ಅಜಿತ್ ಕುಮಾರ್ ಅವರು ಘಟನೆಗೆ ವಿಜಯ್ ಅವರನ್ನು ದೂಷಿಸುತ್ತಿದ್ದಾರೆಂದು ಆರೋಪಿಸಿ, ಆರಂಭದಲ್ಲಿ ಕೆಲವು ಸಾಮಾಜಿಕ ಮಾಧ್ಯಮ ಬಳಕೆದಾರರು ಟೀಕಿಸಿದ್ದರು. ಆದಾಗ್ಯೂ, ಅಜಿತ್ ಈಗ ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದು, ಯಾವುದೇ ವ್ಯಕ್ತಿಯನ್ನು ದೂಷಿಸುವುದು ನನ್ನ ಉದ್ದೇಶವಲ್ಲ ಎಂದಿದ್ದಾರೆ.
ರಂಗರಾಜ್ ಪಾಂಡೆ ಅವರೊಂದಿಗಿನ ಸಂದರ್ಶನದಲ್ಲಿ ಅಜಿತ್, 'ನನ್ನ ಸಂದರ್ಶನವನ್ನು ವಿಜಯ್ ವಿರುದ್ಧ ನನ್ನನ್ನು ಎತ್ತಿಕಟ್ಟಲು ಒಂದು ಸಾಧನವಾಗಿ ಯಾರೊಬ್ಬರೂ ಬಳಸಬಾರದು ಎಂದು ನಾನು ಬಯಸುತ್ತೇನೆ. ಜನರು ಹೀಗೆ ಮಾಡುವುದನ್ನು ತಡೆಯಬೇಕು. ನಾನು ಯಾವಾಗಲೂ ವಿಜಯ್‌ಗೆ ಒಳ್ಳೆಯದನ್ನು ಮಾತ್ರ ಬಯಸುತ್ತೇನೆ. ಪ್ರತಿಯೊಬ್ಬರೂ ತಮ್ಮ ಕುಟುಂಬಗಳೊಂದಿಗೆ ಸಂತೋಷದ ಜೀವನವನ್ನು ನಡೆಸಬೇಕೆಂದು ನಾನು ಪ್ರಾರ್ಥಿಸುತ್ತೇನೆ' ಎಂದು ಹೇಳಿದರು.
ತಮಿಳಿಗ ವೆಟ್ರಿ ಕಳಗಂ (ಟಿವಿಕೆ) ರ‍್ಯಾಲಿ ವೇಳೆ ನಡೆದ ಕಾಲ್ತುಳಿತದಲ್ಲಿ 41 ಜನರು ಸಾವಿಗೀಡಾಗಿದ್ದು, ದೊಡ್ಡ ಸಾರ್ವಜನಿಕ ಸಭೆಗಳಲ್ಲಿ ಹೊಣೆಗಾರಿಕೆ ಮತ್ತು ಸುರಕ್ಷತೆಯ ಬಗ್ಗೆ ವ್ಯಾಪಕ ಚರ್ಚೆಗೆ ನಾಂದಿ ಹಾಡಿದೆ. ದುರಂತದ ಕುರಿತು ಅಜಿತ್ ಅವರ ಹೇಳಿಕೆಗಳು ವೈರಲ್ ಆಗಿದ್ದು, ಸಾಮಾಜಿಕ ಮಾಧ್ಯಮಗಳಲ್ಲಿ ತೀವ್ರ ಚರ್ಚೆಗೆ ಕಾರಣವಾಯಿತು ಮತ್ತು ಚಿತ್ರೋದ್ಯಮ ಹಾಗೂ ಸಾರ್ವಜನಿಕರಿಂದ ಪ್ರತಿಕ್ರಿಯೆಗಳು ಬಂದವು.
ಇದಕ್ಕೂ ಮೊದಲು, ದಿ ಹಾಲಿವುಡ್ ರಿಪೋರ್ಟರ್ ಇಂಡಿಯಾ ಜೊತೆ ಮಾತನಾಡಿದ್ದ ಅಜಿತ್, ಜೀವಹಾನಿಯ ಬಗ್ಗೆ ವಿಷಾದ ವ್ಯಕ್ತಪಡಿಸಿದರು ಮತ್ತು ರಾಜಕೀಯ ರ‍್ಯಾಲಿಗಳು ಮತ್ತು ಚಲನಚಿತ್ರ ಸಂಬಂಧಿತ ಕಾರ್ಯಕ್ರಮಗಳ ಸಮಯದಲ್ಲಿ ಇಂತಹ ದುರಂತಗಳು ಏಕೆ ಸಂಭವಿಸುತ್ತಲೇ ಇವೆ ಎಂದು ಪ್ರಶ್ನಿಸಿದ್ದರು.
'ಕರೂರು ಕಾಲ್ತುಳಿತ ಸಂಭವಿಸಿದೆ. ಆ ವ್ಯಕ್ತಿ (ವಿಜಯ್) ಮಾತ್ರ ಜವಾಬ್ದಾರನಲ್ಲ; ನಾವೆಲ್ಲರೂ ಜವಾಬ್ದಾರರು. ಮಾಧ್ಯಮಗಳು ಸಹ ಒಂದು ಪಾತ್ರವನ್ನು ವಹಿಸಬೇಕು. ಇಂದು, ನಾವು ಹೆಚ್ಚು ಜನರು ಸೇರಿದ್ದಾರೆ ಎಂಬುದನ್ನು ತೋರಿಸುವ ಗೀಳನ್ನು ಹೊಂದಿರುವ ಸಮಾಜವಾಗಿ ಮಾರ್ಪಟ್ಟಿದ್ದೇವೆ ಎಂದು ನಾನು ಭಾವಿಸುತ್ತೇನೆ. ಇದೆಲ್ಲವೂ ಕೊನೆಗೊಳ್ಳಬೇಕು. ನನ್ನ ಪ್ರಕಾರ, ಕ್ರಿಕೆಟ್ ಪಂದ್ಯಗಳಿಗೂ ಸಾಕಷ್ಟು ಜನಸಂದಣಿ ಇರುತ್ತದೆ. ಆದರೆ, ಅಲ್ಲಿ ಈ ರೀತಿ ಆಗುವುದಿಲ್ಲ. ಇದು ಚಿತ್ರನಟರ ಕಾರ್ಯಕ್ರಮಗಳಲ್ಲಿ ಮಾತ್ರ ಏಕೆ ಸಂಭವಿಸುತ್ತದೆ? ಇದು ಇಡೀ ಚಿತ್ರೋದ್ಯಮವನ್ನೇ ಕೆಟ್ಟ ರೀತಿಯಲ್ಲಿ ಬಿಂಬಿಸುತ್ತದೆ' ಎಂದಿದ್ದರು.
ಅಜಿತ್ ಅವರ ಹೇಳಿಕೆಯನ್ನು ನಿರ್ದೇಶಕ ಆರ್ ಪಾರ್ಥಿಬನ್ ಸಾರ್ವಜನಿಕವಾಗಿ ಬೆಂಬಲಿಸಿದರು. ಇಂತಹ ಘಟನೆಗಳು ಸಾರ್ವಜನಿಕ ಕಾರ್ಯಕ್ರಮಗಳ ಸುರಕ್ಷತೆಯ ಬಗ್ಗೆ ವಿಶಾಲವಾದ ಸಂಭಾಷಣೆಗೆ ಪ್ರೇರಣೆ ನೀಡಬೇಕು ಎಂದರು.
Advertisement