
ಸೆಪ್ಟೆಂಬರ್ 27 ರಂದು 41 ಜನರ ಸಾವಿಗೆ ಕಾರಣವಾದ ಕರೂರು ಕಾಲ್ತುಳಿತದ ನಂತರ ನಟ ವಿಜಯ್ ವಿರುದ್ಧ ಪರ-ವಿರೋಧದ ಚರ್ಚೆಗಳು ಪ್ರಾರಂಭವಾಗಿವೆ. ಈ ದುರಂತದ ಬಗ್ಗೆ ಸಾರ್ವಜನಿಕರು ಮತ್ತು ಸೆಲೆಬ್ರಿಟಿಗಳು ತಮ್ಮ ದುಃಖ ವ್ಯಕ್ತಪಡಿಸಿದ್ದಾರೆ. ನಟ ಶಿವರಾಜ್‌ಕುಮಾರ್ ಇದೀಗ ಈ ವಿಚಾರದ ಕುರಿತು ಮಾತನಾಡಿದ್ದು, ನಟ-ರಾಜಕಾರಣಿಗೆ ಸಲಹೆ ನೀಡಿದ್ದಾರೆ.
ತಿರುಚೆಂಡೂರಿನ ಪ್ರಸಿದ್ಧ ಅರುಲ್ಮಿಗು ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಶಿವರಾಜ್‌ಕುಮಾರ್, ಈ ಘಟನೆ 'ಹೃದಯ ವಿದ್ರಾವಕ'. ತಮಿಳುನಾಡು ರಾಜಕೀಯದ ಬಗ್ಗೆ ತನಗೆ ಹೆಚ್ಚು ತಿಳಿದಿಲ್ಲ. ಆದರೆ, ವಿಜಯ್ 'ನೈತಿಕ' ವ್ಯಕ್ತಿ. ಜನರಿಗೆ ಒಳ್ಳೆಯದನ್ನು ಮಾಡಲು ಇಷ್ಟಪಡುವ ಅವರು ರಾಜಕೀಯಕ್ಕೆ ಸ್ವಾಗತಾರ್ಹ ಸೇರ್ಪಡೆ' ಎಂದು ಹೇಳಿದರು.
'ಅವರು ರಾಜಕೀಯ ಪ್ರವೇಶಿಸಿದಾಗ ಅವರು ಮಾತನಾಡಿದ ರೀತಿ ನನಗೆ ಇಷ್ಟವಾಯಿತು. ಮತ್ತೊಮ್ಮೆ, ನನಗೆ ಎಲ್ಲ ವಿವರಗಳು ತಿಳಿದಿಲ್ಲ, ಆದರೆ ಒಬ್ಬ ಮನುಷ್ಯನಾಗಿ, ಅನೇಕ ಜೀವಗಳನ್ನು ಕಳೆದುಕೊಂಡ ಇಂತಹ ಘಟನೆಯು ನಿಮಗೆ ದುಃಖವನ್ನುಂಟು ಮಾಡುತ್ತದೆ. ಮುಂದಿನ ದಿನಗಳಲ್ಲಿ ಅವರು ಯಾವುದೇ ಹೆಜ್ಜೆ ಇಟ್ಟರೂ, ಅದನ್ನು ಸಾಕಷ್ಟು ಚರ್ಚಿಸಿದ ನಂತರ ಶಾಂತವಾಗಿ ಮಾಡಬೇಕು' ಎಂದು ವಿಜಯ್ ಅವರಿಗೆ ಸಲಹೆ ನೀಡಿದರು.
ಇದಕ್ಕೂ ಮೊದಲು ಕಾಂತಾರ ಖ್ಯಾತಿಯ ರಿಷಭ್ ಶೆಟ್ಟಿ, ಈ ದುರಂತ ಘಟನೆಯನ್ನು 'ಸಾಮೂಹಿಕ ತಪ್ಪು' ಎಂದು ಕರೆದರು. 'ನಮಗೆ ಒಬ್ಬ ನಾಯಕ ಅಥವಾ ಅವನ ಪಾತ್ರ ಇಷ್ಟವಾದರೆ, ನಾವು ನಾಯಕನ ಪೂಜೆ ಮಾಡುತ್ತೇವೆ. ಅದರ ಬಗ್ಗೆ (ಕಾಲ್ತುಳಿತ) ನಾನು ಹೇಗೆ ಪ್ರತಿಕ್ರಿಯಿಸಲಿ? ಈ ಅಪಘಾತಗಳು ಸಂಭವಿಸಿದಾಗ ಸುಮಾರು 40 ಜನರು ಸಾವಿಗೀಡಾದರು; ಅದು ದುರದೃಷ್ಟಕರ' ಎಂದರು.
'ಇದು ಒಬ್ಬ ವ್ಯಕ್ತಿಯ ತಪ್ಪಾಗಿರಬಹುದೆಂದು ನಾನು ಭಾವಿಸುವುದಿಲ್ಲ; ಬಹುಶಃ ಇದು ಅನೇಕರು ಮಾಡಿದ ಸಾಮೂಹಿಕ ತಪ್ಪಾಗಿರಬಹುದು. ಬಹುಶಃ ಇದನ್ನು ನಿಯಂತ್ರಿಸಬಹುದಿತ್ತು. ಅದಕ್ಕಾಗಿಯೇ ನಾವು ಇದನ್ನು ಅಪಘಾತ ಎಂದು ಕರೆಯುತ್ತೇವೆ. ಅದು ಉದ್ದೇಶಪೂರ್ವಕವಾಗಿರಲಿಲ್ಲ. ನಾವು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು. ಆದರೆ, ಜನಸಮೂಹವನ್ನು ಯಾರು ನಿಯಂತ್ರಿಸುತ್ತಾರೆ? ನಾನು ಅದರ ಬಗ್ಗೆ ಹೇಗೆ ಪ್ರತಿಕ್ರಿಯಿಸಬಹುದು? ನಾವು ಪೊಲೀಸರನ್ನು ಅಥವಾ ಸರ್ಕಾರವನ್ನು ಸುಲಭವಾಗಿ ದೂಷಿಸಬಹುದು; ಅವರಿಗೂ ಜವಾಬ್ದಾರಿ ಇರುತ್ತದೆ. ಆದರೆ, ಕೆಲವೊಮ್ಮೆ ಅವರಿಗೂ (ಜನಸಂದಣಿಯನ್ನು ನಿಯಂತ್ರಿಸುವಲ್ಲಿ) ತೊಂದರೆಯೂ ಇರುತ್ತದೆ' ಎಂದು ಅವರು ವಿವರಿಸಿದರು.
Advertisement