

ನವದೆಹಲಿ: ಉತ್ತರ ಗೋವಾ ನೈಟ್‌ಕ್ಲಬ್‌ನಲ್ಲಿ 25 ಜನರನ್ನು ಬಲಿ ಪಡೆದ ಭೀಕರ ಅಗ್ನಿ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿರ್ಚ್ ಬೈ ರೋಮಿಯೋ ಲೇನ್‌ನ ಸಹ-ಮಾಲೀಕರಲ್ಲಿ ಒಬ್ಬರಾದ ಅಜಯ್ ಗುಪ್ತಾ ಅವರನ್ನು ದೆಹಲಿ ಪೊಲೀಸರ ಅಪರಾಧ ಶಾಖೆ ಬುಧವಾರ ಬಂಧಿಸಿದೆ.
ಮುಖವನ್ನು ಮುಖವಾಡದಿಂದ ಮರೆಮಾಡಿಕೊಂಡು ಪೊಲೀಸ್ ಠಾಣೆ ಪ್ರವೇಶಿಸುವಾಗ ವರದಿಗಾರರೊಂದಿಗೆ ಸಂಕ್ಷಿಪ್ತವಾಗಿ ಮಾತನಾಡಿದ ಗುಪ್ತಾ, ನಾನು ಸಂಸ್ಥೆಯಲ್ಲಿ "ಕೇವಲ ಪಾಲುದಾರ" ಎಂದು ಒತ್ತಿ ಹೇಳಿದರು.
ಮೂಲಗಳ ಪ್ರಕಾರ, ಗೋವಾ ಪೊಲೀಸರು ದೆಹಲಿಯಲ್ಲಿ ಗುಪ್ತಾ ಅವರನ್ನು ವಿಚಾರಣೆ ನಡೆಸಿದ್ದು, ತಮ್ಮ ವಶಕ್ಕೆ ತೆಗೆದುಕೊಳ್ಳಲು ಔಪಚಾರಿಕ ಕಾರ್ಯವಿಧಾನಗಳನ್ನು ಪ್ರಾರಂಭಿಸಿದ್ದಾರೆ. ಇದರಲ್ಲಿ ಟ್ರಾನ್ಸಿಟ್ ರಿಮಾಂಡ್ ಕೋರುವುದು ಸೇರಿದೆ. ಡಿಸೆಂಬರ್ 6 ರಂದು ಗೋವಾದಲ್ಲಿ ಸಂಭವಿಸಿದ ಅಗ್ನಿ ದುರಂತದ ನಂತರ ಗುಪ್ತಾ ನಾಪತ್ತೆಯಾಗಿದ್ದರು ಎಂದು ತನಿಖಾಧಿಕಾರಿಗಳು ಹೇಳಿದ್ದಾರೆ.
ದೆಹಲಿಯಲ್ಲಿ ಆರಂಭಿಕ ಹುಡುಕಾಟದ ಸಮಯದಲ್ಲಿ ಅಧಿಕಾರಿಗಳು ಗುಪ್ತಾ ಅವರನ್ನು ಪತ್ತೆಹಚ್ಚಲು ವಿಫಲವಾದ ನಂತರ ಲುಕ್ ಔಟ್ ಸರ್ಕ್ಯುಲರ್(LOC) ಹೊರಡಿಸಿದ್ದರು.
ಅಂತಿಮವಾಗಿ ಲಜ್‌ಪತ್ ನಗರದ ಖಾಸಗಿ ಆಸ್ಪತ್ರೆಯಲ್ಲಿ ಆರೋಪಿ ಪತ್ತೆಯಾಗಿದ್ದರು, ಅಲ್ಲಿ ಅವರು ಬೆನ್ನುಮೂಳೆ ಸಂಬಂಧಿತ ಕಾಯಿಲೆ ಚಿಕಿತ್ಸೆ ಪಡೆಯಲು ದಾಖಲಾಗಿದ್ದರು ಎಂದು ವರದಿಯಾಗಿದೆ. ವೈದ್ಯರು ಅವರನ್ನು ಡಿಸ್ಚಾರ್ಜ್ ಮಾಡಿದ ನಂತರ, ಅವರನ್ನು ಬಂಧಿಸಿ ಹೆಚ್ಚಿನ ಪ್ರಕ್ರಿಯೆಗಾಗಿ ಅಪರಾಧ ಶಾಖೆಗೆ ಹಸ್ತಾಂತರಿಸಲಾಯಿತು.
ಗೋವಾ ಪೊಲೀಸರು ಟ್ರಾನ್ಸಿಟ್ ರಿಮಾಂಡ್‌ಗೆ ಅಗತ್ಯವಾದ ದಾಖಲೆಗಳನ್ನು ಪೂರ್ಣಗೊಳಿಸಿದ ನಂತರ ಗುಪ್ತಾ ಅವರನ್ನು ಗೋವಾಗೆ ಕರೆತರುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದುರಂತಕ್ಕೆ ಸಂಬಂಧಿಸಿದಂತೆ ನೈಟ್‌ಕ್ಲಬ್‌ನ ಐದು ಸಿಬ್ಬಂದಿಗಳಾದ ಮುಖ್ಯ ಜನರಲ್ ಮ್ಯಾನೇಜರ್ ರಾಜೀವ್ ಮೋಡಕ್, ಜನರಲ್ ಮ್ಯಾನೇಜರ್ ವಿವೇಕ್ ಸಿಂಗ್, ಬಾರ್ ಮ್ಯಾನೇಜರ್ ರಾಜೀವ್ ಸಿಂಘಾನಿಯಾ, ಗೇಟ್ ಮ್ಯಾನೇಜರ್ ರಿಯಾನ್ಶು ಠಾಕೂರ್ ಮತ್ತು ಉದ್ಯೋಗಿ ಭರತ್ ಕೊಹ್ಲಿ ಅವರನ್ನು ಮೊದಲೇ ಬಂಧಿಸಲಾಗಿತ್ತು.
ಏತನ್ಮಧ್ಯೆ, ಕ್ಲಬ್‌ನ ಇತರ ಇಬ್ಬರು ಪ್ರಮುಖ ಮಾಲೀಕರಾದ ಸೌರಭ್ ಮತ್ತು ಗೌರವ್ ಲುತ್ರಾ ಘಟನೆಯ ಸ್ವಲ್ಪ ಸಮಯದ ನಂತರ ಭಾರತವನ್ನು ತೊರೆದಿದ್ದಾರೆ. ಅವರ ಇರುವಿಕೆಯನ್ನು ಪತ್ತೆಹಚ್ಚಲು ಅಧಿಕಾರಿಗಳು ಇಂಟರ್‌ಪೋಲ್ ಬ್ಲೂ ಕಾರ್ನರ್ ನೋಟಿಸ್ ಜಾರಿಗೊಳಿಸಿದ್ದಾರೆ.
Advertisement