

ಗುವಾಹಟಿ: ಅರುಣಾಚಲ ಪ್ರದೇಶದ ಅಂಜಾವ್ ಜಿಲ್ಲೆಯ ಮೆಟೆಂಗ್ಲಿಯಾಂಗ್ ಬಳಿ ಟ್ರಕ್ ಕಂದಕಕ್ಕೆ ಉರುಳಿಬಿದ್ದ ಪರಿಣಾಮ 18 ಮಂದಿ ದಾರುಣ ಸಾವನ್ನಪ್ಪಿರುವ ಘಟನೆ ನಡೆದಿದೆ.
ಡಿಸೆಂಬರ್ 8 ರ ರಾತ್ರಿಯೇ ಈ ದುರ್ಘಟನೆ ನಡೆದಿದೆ. ಆದರೆ ಗಾಯಗೊಂಡು ಬದುಕುಳಿದ ಓರ್ವ ಸಂತ್ರಸ್ತ ಜನರಲ್ ರಿಸರ್ವ್ ಇಂಜಿನಿಯರ್ ಫೋರ್ಸ್ (GREF) ಶಿಬಿರ ತಲುಪಿ ಘಟನೆಯನ್ನು ವಿವರಿಸಿದ ನಂತರ ಡಿಸೆಂಬರ್ 10 ರಂದು ಅಧಿಕಾರಿಗಳಿಗೆ ಆ ವಿಷಯ ಗೊತ್ತಾಗಿದೆ. ಪ್ರಥಮ ಚಿಕಿತ್ಸೆ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಅಸ್ಸಾಂಗೆ ರವಾನಿಸಲಾಗಿದೆ.
22 ಕಾರ್ಮಿಕರ ಗುಂಪು ಅಸ್ಸಾಂನ ತಿನ್ಸುಕಿಯಾ ಜಿಲ್ಲೆಯಿಂದ ಅಂಜಾವ್ ಜಿಲ್ಲೆಯ ಚಗ್ಲಗಾಮ್‌ಗೆ ಡಿಸೆಂಬರ್ 7 ರಂದು ನಿರ್ಮಾಣ ಸ್ಥಳಕ್ಕೆ ತೆರಳಿತ್ತು. ಅವರು ಸಮಯಕ್ಕೆ ಸರಿಯಾಗಿ ತಲುಪಬೇಕಾದ ಸ್ಥಳ ತಲುಪದೇ ಇದ್ದಾಗ ಸಹ ಕಾರ್ಮಿಕರು ಪೊಲೀಸರಿಗೆ ದೂರು ನೀಡಿದ್ದಾರೆ.
ಅವರ ದೂರಿನ ಆಧಾರದ ಮೇಲೆ, ಅಂಜಾವ್ ಜಿಲ್ಲೆಯ ಹಯುಲಿಯಾಂಗ್ ಪೊಲೀಸರು ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿದಾಗ ಬದುಕುಳಿದಿದ್ದ ಏಕೈಕ ಸಂತ್ರಸ್ತನ ಬಗ್ಗೆ GREF ಶಿಬಿರದಿಂದ ಮಾಹಿತಿ ಪಡೆದುಕೊಂಡಿದ್ದಾರೆ.
ಚಗ್ಲಗಾಮ್‌ನಿಂದ 12 ಕಿಮೀ ದೂರದಲ್ಲಿ ಸಂಭವಿಸಿದ ಪ್ರದೇಶದಲ್ಲಿ ಮೊಬೈಲ್ ಸಂಪರ್ಕವಿಲ್ಲದ ಕಾರಣ ಎರಡು ದಿನಗಳ ಕಾಲ ಗೊತ್ತೇ ಆಗಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಡಿಸೆಂಬರ್ 10 ರಂದು ತಡವಾಗಿ ಬಂದ ಮಾಹಿತಿಯ ಆಧಾರದ ಮೇಲೆ ಭಾರತೀಯ ಸೇನೆಯು ಪ್ರಮುಖ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಿದೆ ಎಂದು ರಕ್ಷಣಾ ಸಚಿವಾಲಯದ ಹೇಳಿಕೆ ತಿಳಿಸಿದೆ.
"ಚಿಪ್ರಾ ಜಿಆರ್‌ಇಎಫ್ ಕ್ಯಾಂಪ್ ತಲುಪುವಲ್ಲಿ ಯಶಸ್ವಿಯಾದ ಸಂತ್ರಸ್ತ ನೀಡಿದ ಪ್ರಾಥಮಿಕ ಮಾಹಿತಿ ಆಧಾರದ ಮೇಲೆ ಟಿನ್ಸುಕಿಯಾದಿಂದ 22 ಕಾರ್ಮಿಕರನ್ನು ಹೊತ್ತೊಯ್ಯುತ್ತಿದ್ದ ಟ್ರಕ್ ಬಂಡೆಯಿಂದ ಬಿದ್ದಿದೆ ಎಂಬುದು ಗೊತ್ತಾಗಿದೆ. ದುರ್ಗಮ ಪ್ರದೇಶದಲ್ಲಿ ಅಪಘಾತ ನಡೆದಿದೆ ಎಂದು ರಕ್ಷಣಾ ಸಚಿವಾಲಯ ಹೇಳಿದೆ.
ಸೇನೆ, ಪೊಲೀಸರು, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ಮತ್ತು ಜಿಆರ್‌ಇಎಫ್ ತಂಡಗಳು ಗುರುವಾರ ನಾಲ್ಕು ಗಂಟೆಗಳ ತೀವ್ರ ಶೋಧ ಕಾರ್ಯ ನಡೆಸಿದ ನಂತರ ಟ್ರಕ್ ರಸ್ತೆಯಿಂದ ಸುಮಾರು 200 ಮೀಟರ್ ಕೆಳಗೆ ಬಿದ್ದಿರುವುದು ಪತ್ತೆಯಾಗಿದೆ. ಹದಿನೆಂಟು ಶವಗಳನ್ನು ನೋಡಲಾಗಿದ್ದು, ಹಗ್ಗದ ನೆರವಿನಿಂದ ಅವುಗಳನ್ನು ಮೇಲಕ್ಕೆತ್ತಲಾಗಿದೆ. ನೇಮಕಗೊಂಡ ಕಾರ್ಮಿಕರ ಗುರುತು ಪತ್ತೆಗೆ ಅಧಿಕಾರಿಗಳು ಉಪ ಗುತ್ತಿಗೆದಾರರ ವಿಚಾರಣೆ ನಡೆಸುತ್ತಿದ್ದಾರೆ ಎಂದು ರಕ್ಷಣಾ ಸಚಿವಾಲಯ ಮಾಹಿತಿ ನೀಡಿದೆ.
Advertisement