

ನವದೆಹಲಿ: 'ಮತ ಕಳ್ಳತನ'ದ ಬಗೆಗಿನ ತಮ್ಮ ಪತ್ರಿಕಾಗೋಷ್ಠಿಯ ಕುರಿತು ಸಂಸತ್ತಿನಲ್ಲಿ ಚರ್ಚೆಗೆ ಗೃಹ ಸಚಿವ ಅಮಿತ್ ಶಾ ಅವರಿಗೆ ಬಹಿರಂಗವಾಗಿಯೇ ಕೇಳಿಕೊಂಡೆ. ಆದರೆ, ಯಾವುದೇ ಉತ್ತರ ಸಿಗಲಿಲ್ಲ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಗುರುವಾರ ಹೇಳಿದರು.
ಚುನಾವಣಾ ಸುಧಾರಣೆಗಳ ಕುರಿತಾದ ಚರ್ಚೆಯ ಸಂದರ್ಭದಲ್ಲಿ ಲೋಕಸಭೆಯಲ್ಲಿ ತಮ್ಮ ಮತ್ತು ಅಮಿತ್ ಶಾ ನಡುವೆ ಬಿಸಿ ವಾಗ್ವಾದ ನಡೆದ ಒಂದು ದಿನದ ನಂತರ, ಶಾ 'ಒತ್ತಡದಲ್ಲಿದ್ದಾರೆ' ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
'ಅವರು (ಶಾ) ತಪ್ಪು ಭಾಷೆಯನ್ನು ಬಳಸಿದ್ದಾರೆ, ಅವರ ಕೈಗಳು ನಡುಗುತ್ತಿದ್ದವು, ನೀವು ಇದನ್ನೆಲ್ಲ ನೋಡಿರಬಹುದು. ಅವರು ಮಾನಸಿಕವಾಗಿ ಒತ್ತಡದಲ್ಲಿದ್ದಾರೆ, ಅದು ಸಂಸತ್ತಿನಲ್ಲಿ ಪ್ರದರ್ಶನವಾಗಿದೆ. ಇಡೀ ದೇಶವೇ ಅದನ್ನು ನೋಡಿದೆ' ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ಸಂಸತ್ ಭವನದ ಸಂಕೀರ್ಣದಲ್ಲಿ ಸುದ್ದಿಗಾರರಿಗೆ ತಿಳಿಸಿದರು.
'ನಾನು ಹೇಳಿರುವ ವಿಷಯಗಳಿಗೆ ಅವರು ಯಾವುದೇ ಪುರಾವೆ ನೀಡಿಲ್ಲ. ನಾವು ಅದನ್ನು ಪತ್ರಿಕಾಗೋಷ್ಠಿಗಳಲ್ಲಿ ಸಾರ್ವಜನಿಕವಾಗಿ ಹೇಳಿದ್ದೇವೆ. ನನ್ನ ಪತ್ರಿಕಾಗೋಷ್ಠಿಯಲ್ಲಿನ ವಿಚಾರಗಳನ್ನು ಸಂಸತ್ತಿನಲ್ಲಿ ಚರ್ಚಿಸಲು ಅವಕಾಶ ನೀಡಿ ಎಂದು ನಾನು ಅವರಿಗೆ ನೇರವಾಗಿ ಸವಾಲು ಹಾಕಿದೆ. ಆದರೆ, ಉತ್ತರ ಸಿಗಲಿಲ್ಲ. ವಾಸ್ತವ ನಿಮಗೆ ತಿಳಿದಿದೆ' ಎಂದು ಹೇಳಿದರು.
ಬುಧವಾರ ಚರ್ಚೆಯ ಸಮಯದಲ್ಲಿ ಗೃಹ ಸಚಿವರ ಪ್ರತಿಕ್ರಿಯೆಯನ್ನು 'ಸಂಪೂರ್ಣವಾಗಿ ರಕ್ಷಣಾತ್ಮಕ' ಎಂದು ಕರೆದ ರಾಹುಲ್, 'ವೋಟ್ ಚೋರಿ' ಮಾಡುವುದು 'ಅತಿದೊಡ್ಡ ದೇಶದ್ರೋಹ' ಎಂದು ಪ್ರತಿಪಾದಿಸಿದರು.
ಗೃಹ ಸಚಿವರು ತಾವು ಎತ್ತಿದ ಯಾವುದೇ ಅಂಶಗಳಿಗೆ ಪ್ರತಿಕ್ರಿಯಿಸಲಿಲ್ಲ ಮತ್ತು ಪಾರದರ್ಶಕ ಮತದಾರರ ಪಟ್ಟಿಗಳು, ಇವಿಎಂಗಳು ಮತ್ತು ಮುಖ್ಯ ಚುನಾವಣಾ ಆಯುಕ್ತರಿಗೆ ವಿನಾಯಿತಿ ನೀಡುವುದು ಸೇರಿದಂತೆ ಎಲ್ಲ ವಿಚಾರಗಳಿಂದಲೂ ಅವರು ತಪ್ಪಿಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.
ಚುನಾವಣಾ ಸುಧಾರಣೆಗಳ ಕುರಿತ ಚರ್ಚೆಯ ಸಂದರ್ಭದಲ್ಲಿ ರಾಹುಲ್ ಗಾಂಧಿ ಸೇರಿದಂತೆ ವಿರೋಧ ಪಕ್ಷದ ಸಂಸದರು ಲೋಕಸಭೆಯಲ್ಲಿ ಸಭಾತ್ಯಾಗ ಮಾಡಿದರು.
ನಂತರ X ನಲ್ಲಿ ಪೋಸ್ಟ್ ಮಾಡಿದ ರಾಹುಲ್ ಗಾಂಧಿ, 'ಮತ ಕಳ್ಳತನ' ಕುರಿತು ಸಂಸತ್ತಿನಲ್ಲಿ ಗೃಹ ಸಚಿವರ ಪ್ರತಿಕ್ರಿಯೆ 'ಭಯಭೀತ' ಮತ್ತು 'ರಕ್ಷಣಾತ್ಮಕ'ವಾಗಿತ್ತು ಎಂದು ಹೇಳಿದರು.
Advertisement