

ನವದೆಹಲಿ: 3 ರಿಂದ 6 ವರ್ಷ ವಯಸ್ಸಿನ ಎಲ್ಲಾ ಮಕ್ಕಳಿಗೆ ಉಚಿತ ಮತ್ತು ಕಡ್ಡಾಯ ಆರಂಭಿಕ ಬಾಲ್ಯ ಆರೈಕೆ ಮತ್ತು ಶಿಕ್ಷಣ (ECCE) ಖಾತರಿಪಡಿಸಲು ಹೊಸ ವಿಧಿ 21(b) ಅನ್ನು ಪರಿಚಯಿಸುವ ಸಾಂವಿಧಾನಿಕ ತಿದ್ದುಪಡಿಯನ್ನು ಪರಿಗಣಿಸಬೇಕೆಂದು ಸಂಸದೆ ಸುಧಾ ಮೂರ್ತಿ ಶುಕ್ರವಾರ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ರಾಜ್ಯಸಭೆಯಲ್ಲಿ ನಿರ್ಣಯ ಮಂಡಿಸಿದ ಸುಧಾ ಮೂರ್ತಿ, ಅಂಗನವಾಡಿ ಕಾರ್ಯಕರ್ತರನ್ನು ಅಭಿನಂದಿಸಿದ್ದು, ಈ ಯೋಜನೆಗೆ ಈಗ 50 ವರ್ಷಗಳಾಗಿವೆ ಎಂದು ಹೇಳಿದ್ದಾರೆ.
1975 ರಲ್ಲಿ ಪ್ರಾರಂಭಿಸಲಾದ ಸಮಗ್ರ ಮಕ್ಕಳ ಅಭಿವೃದ್ಧಿ ಯೋಜನೆಯು ಗರ್ಭಿಣಿಯರು, ಹಾಲುಣಿಸುವ ತಾಯಂದಿರು ಮತ್ತು ಆರು ವರ್ಷದವರೆಗಿನ ಮಕ್ಕಳನ್ನು ದೀರ್ಘಕಾಲದಿಂದ ಬೆಂಬಲಿಸಿದೆ, ECCE ಯ ಆರಂಭಿಕ ಮಾದರಿಯಾಗಿ ಕಾರ್ಯನಿರ್ವಹಿಸುತ್ತಿದೆ ಮತ್ತು ಅಪೌಷ್ಟಿಕತೆಯನ್ನು ಪರಿಹರಿಸಲು ಸಹಾಯ ಮಾಡಿದೆ ಎಂದು ಅವರು ನೆನಪಿಸಿಕೊಂಡಿದ್ದಾರೆ.
ಈ ಯೋಜನೆ ಸಂಬಂಧ 2002 ರಲ್ಲಿ ವಾಜಪೇಯಿ ಸರ್ಕಾರದ ಅಡಿಯಲ್ಲಿ ನಡೆದ ಪ್ರಮುಖ ಸುಧಾರಣೆಗಳನ್ನು ಸುಧಾ ಮೂರ್ತಿ ಉಲ್ಲೇಖಿಸಿದ್ದಾರೆ. 2002 ರಲ್ಲಿ ವಾಜಪೇಯಿ ಸರ್ಕಾರದ ಅವಧಿಯಲ್ಲಿನ 86 ನೇ ಸಾಂವಿಧಾನಿಕ ತಿದ್ದುಪಡಿಯು 6 ರಿಂದ 14 ವರ್ಷ ವಯಸ್ಸಿನ ಮಕ್ಕಳಿಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣವನ್ನು ಮೂಲಭೂತ ಹಕ್ಕನ್ನಾಗಿ ಮಾಡಿ ECCE ನ್ನು ನಿರ್ದೇಶನ ತತ್ವಗಳ ಅಡಿಯಲ್ಲಿ ಇರಿಸಿತ್ತು. ಶಿಕ್ಷಣವನ್ನು ಜೀವನವನ್ನು ಪರಿವರ್ತಿಸುವ "ಮಾಯಾ ದಂಡ" ಎಂದು ಇದನ್ನು ಸುಧಾ ಮೂರ್ತಿ ಹೇಳಿದ್ದು, ಸಮಾಜವನ್ನು ಬಲಪಡಿಸುತ್ತದೆ ಮತ್ತು ಆರ್ಥಿಕ ಬೆಳವಣಿಗೆಗೆ ಇಂಧನ ನೀಡುವುದಾಗಿದೆ ಎಂದು ಹೇಳಿದ್ದಾರೆ.
Advertisement