

ನವದೆಹಲಿ: ಬ್ಯಾಲೆಟ್ ಪೇಪರ್ ಮೂಲಕ ನಡೆಯುವ ನ್ಯಾಯಸಮ್ಮತ ಚುನಾವಣೆಯಲ್ಲಿ ಗೆಲ್ಲುವ ಮೂಲಕ ಬಿಜೆಪಿ ತನ್ನ ಶಕ್ತಿಯನ್ನು ಸಾಬೀತುಪಡಿಸುವಂತೆ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಭಾನುವಾರ ಸವಾಲು ಹಾಕಿದ್ದಾರೆ.
ಜನರ ಮತದಾನದ ಹಕ್ಕನ್ನು ದುರ್ಬಲಗೊಳಿಸಲು ಚುನಾವಣಾ ಪ್ರಕ್ರಿಯೆಯನ್ನು ಉದ್ದೇಶಪೂರ್ವಕವಾಗಿ ಅನುಮಾನ ಬರುವಂತೆ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.
ನವದೆಹಲಿಯ ರಾಮಲೀಲಾ ಮೈದಾನದಲ್ಲಿ ಕಾಂಗ್ರೆಸ್‌ನ 'ವೋಟ್ ಚೋರ್, ಗಡ್ಡಿ ಛೋಡ್' ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು, ಚುನಾವಣಾ ಆಯೋಗದ (EC) ಬೆಂಬಲವಿಲ್ಲದೆ ಬಿಜೆಪಿ ಚುನಾವಣೆಯಲ್ಲಿ ಗೆಲ್ಲಲು ಸಾಧ್ಯವಿಲ್ಲ ಎಂದು ಪ್ರತಿಪಾದಿಸಿದರು. ಆಡಳಿತರೂಢ ಪಕ್ಷವು "ಮತ ಗಳ್ಳತನದಿಂದ ಲಾಭ ಪಡೆಯುತ್ತಿದೆ ಎಂದು ಆರೋಪಿಸಿದರು.
ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಮತ್ತು ಚುನಾವಣಾ ಆಯುಕ್ತರಾದ ಸುಖಬೀರ್ ಸಿಂಗ್ ಸಂಧು ಮತ್ತು ವಿವೇಕ್ ಜೋಷಿ ಅವರ ಹೆಸರನ್ನು ದೇಶವು ಮರೆಯುವುದಿಲ್ಲ. ನಾಗರಿಕರ ಮತದಾನದ ಹಕ್ಕನ್ನು ಕಸಿದುಕೊಳ್ಳಲು ಅವರು ಹೇಗೆ "ಪಿತೂರಿ" ಮಾಡಿದರು ಎಂಬುದನ್ನು ಅವರು ಒಂದು ದಿನ ಉತ್ತರಿಸಬೇಕಾಗುತ್ತದೆ ಎಂದು ವಾಗ್ದಾಳಿ ನಡೆಸಿದರು.
ಬಿಜೆಪಿಯು ಒಮ್ಮೆ ಬ್ಯಾಲೆಟ್ ಪೇಪರ್‌ನಲ್ಲಿ ನ್ಯಾಯಯುತ ಚುನಾವಣೆಯನ್ನು ಎದುರಿಸಬೇಕು ಎಂದು ಅವರಿಗೆ ಸವಾಲ್ ಹಾಕುತ್ತೇನೆ. ಅವರು ಎಂದಿಗೂ ಗೆಲ್ಲಲು ಸಾಧ್ಯವಿಲ್ಲ. ಬಿಜೆಪಿಗೂ ಈ ಸತ್ಯ ತಿಳಿದಿದೆ" ಎಂದು ಹೇಳಿದರು.
ಮುಖ್ಯ ಚುನಾವಣಾ ಆಯುಕ್ತರು ಮತ್ತು ಇಬ್ಬರು ಚುನಾವಣಾ ಆಯುಕ್ತರು ಭಾರತದ ಪ್ರಜಾಪ್ರಭುತ್ವದ ಮೇಲೆ ದಾಳಿ" ಮಾಡುತ್ತಿದ್ದಾರೆ."ಇತಿಹಾಸದಲ್ಲಿ ಮೊದಲ ಬಾರಿಗೆ, ಚುನಾವಣಾ ಆಯೋಗವನ್ನು ನಂಬುವುದಿಲ್ಲ ಮತ್ತು ಚುನಾವಣೆಯನ್ನು ಸರಿಯಾಗಿ ನಡೆಸುತ್ತಿಲ್ಲ ಎಂದು ಇಡೀ ಪ್ರತಿಪಕ್ಷಗಳು ಹೇಳುತ್ತಿವೆ. ಮತದಾನ, ಮತದಾರರ ಪಟ್ಟಿ, ಮಾದರಿ ನೀತಿ ಸಂಹಿತೆ, ಪ್ರಚಾರ, ಮತದಾನ, ಎಣಿಕೆ, ಇವಿಎಂಗಳು ಮತ್ತು ಫಲಿತಾಂಶಗಳ ಘೋಷಣೆಯಿಂದ ಹಿಡಿದು ಪ್ರತಿಯೊಂದು ಹೆಜ್ಜೆಯೂ ಅನುಮಾನಾಸ್ಪದವಾಗಿದೆ. ಎಲ್ಲಾ ಸಾಂವಿಧಾನಿಕ ಸಂಸ್ಥೆಗಳನ್ನು ಸರ್ಕಾರ ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಟೀಕಾ ಪ್ರಹಾರ ನಡೆಸಿದರು.
Advertisement