

ನವದೆಹಲಿ: ಕಾಂಗ್ರೆಸ್ ಪಕ್ಷ ಮಂಗಳವಾರ ತನ್ನ ಎಲ್ಲಾ ಲೋಕಸಭಾ ಸಂಸದರಿಗೆ ವಿಪ್ ಜಾರಿ ಮಾಡಿದ್ದು, ಮುಂದಿನ ಮೂರು ದಿನ ಸಂಸತ್ತಿನಲ್ಲಿ ಕಡ್ಡಾಯ ಹಾಜರಿಗೆ ಸೂಚಿಸಿದೆ.
ವಿಬಿ-ಜಿ ರಾಮ್ ಜಿ ಮತ್ತು ಭಾರತದ ನಾಗರಿಕ ಪರಮಾಣು ವಲಯ ನಿಯಂತ್ರಿಸುವ ಕಾನೂನುಗಳನ್ನು ಪರಿಶೀಲಿಸುವಂತಹ ಹೊಸ ಮಸೂದೆಗಳನ್ನು ಚರ್ಚೆಗೆ ತೆಗೆದುಕೊಂಡು, ಅಂಗೀಕರಿಸುವ ಸಾಧ್ಯತೆಯಿರುವುದರಿಂದ ಕಾಂಗ್ರೆಸ್ ವಿಪ್ ಹೊರಡಿಸಿದ್ದು, ಮುಂದಿನ ಮೂರು ದಿನಗಳ ಕಾಲ ತನ್ನ ಸಂಸದರು ಲೋಕಸಭೆಯಲ್ಲಿ ಕಡ್ಡಾಯವಾಗಿ ಹಾಜರಿರಬೇಕು ಎಂದು ಹೇಳಿದೆ.
ನಾಗರಿಕ ಪರಮಾಣು ಶಕ್ತಿ ಕ್ಷೇತ್ರವನ್ನು ಖಾಸಗಿ ಸಹಭಾಗಿತ್ವಕ್ಕಾಗಿ ತೆರೆಯಲು ಮತ್ತು ಹೊಣೆಗಾರಿಕೆಯ ಆಡಳಿತವನ್ನು ಕೂಲಂಕಷವಾಗಿ ಪರಿಶೀಲಿಸುವ ಭಾರತವನ್ನು ಪರಿವರ್ತಿಸಲು ಪರಮಾಣು ಶಕ್ತಿಯ ಸುಸ್ಥಿರ ಬಳಕೆ ಮತ್ತು ಪ್ರಗತಿ (ಶಾಂತಿ) ಮಸೂದೆ ಬುಧವಾರ ಚರ್ಚೆಗೆ ಬರುವ ಸಾಧ್ಯತೆಯಿದೆ.
PMO ರಾಜ್ಯ ಸಚಿವ ಜಿತೇಂದ್ರ ಸಿಂಗ್ ಅವರು ಪರಿಚಯಿಸಿರುವ 'ಶಾಂತಿ' ಮಸೂದೆಯು ಪರಮಾಣು ಶಕ್ತಿ ಕಾಯ್ದೆ 1962 ಮತ್ತು ಪರಮಾಣು ಹಾನಿಯ ನಾಗರಿಕ ಹೊಣೆಗಾರಿಕೆ ಕಾಯ್ದೆ 2010 ಅನ್ನು ರದ್ದುಗೊಳಿಸುವ ಉದ್ದೇಶ ಹೊಂದಿದೆ.
ಮನ್ರೇಗಾವನ್ನು 'ವಿಕಸಿತ್ ಭಾರತ್ ರೋಜ್ ಗಾರ್ ಆ್ಯಂಡ್ ಅಜೀವಿಕಾ ಮಿಷನ್- ಗ್ರಾಮೀಣ ಯೋಜನೆ (ವಿಬಿ ಜಿ ರಾಮ್ ಜಿ) ಎಂದು ಬದಲಿಸುವ ಮಸೂದೆಯನ್ನು ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಲೋಕಸಭೆಯಲ್ಲಿಂದು ಮಂಡಿಸಿದರು.
ಬಳಿಕ ಮಾತನಾಡಿದ ಸಚಿವರು, ಸರ್ಕಾರ ಮಹಾತ್ಮ ಗಾಂಧೀಜಿ ಅವರಲ್ಲಿ ನಂಬಿಕೆ ಇಟ್ಟಿರುವುದು ಮಾತ್ರವಲ್ಲದೇ, ಅವರ ಸಿದ್ಧಾಂತಗಳನ್ನು ಅನುಸರಿಸುತ್ತದೆ. ನರೇಂದ್ರ ಮೋದಿ ಸರ್ಕಾರ ಹಿಂದಿನ ಸರ್ಕಾರಕ್ಕಿಂತ ಹೆಚ್ಚಿನ ಗ್ರಾಮೀಣಾಭಿವೃದ್ಧಿ ಕೆಲಸಗಳನ್ನು ಮಾಡಿದೆ ಎಂದರು. ಈ ವಾರದ ಅಂತ್ಯದಲ್ಲಿ ಈ ಮಸೂದೆಯನ್ನು ಚರ್ಚೆಗೆ ತೆಗೆದುಕೊಂಡು ಅಂಗೀಕರಿಸುವ ಸಾಧ್ಯತೆಯಿದೆ.
Advertisement