

ನವದೆಹಲಿ: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ (MGNREGA) ಹೆಸರು ಬದಲಾಯಿಸುವ ಕೇಂದ್ರ ಸರ್ಕಾರದ ಹೊಸ ಮಸೂದೆ ವಿರುದ್ಧ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ನೇತೃತ್ವದಲ್ಲಿ ಸಂಸದರು ಪ್ರತಿಭಟನೆ ನಡೆಸಿದ್ದಾರೆ. ಮಹಾತ್ಮ ಗಾಂಧಿ ಅವರ ಭಾವಚಿತ್ರವನ್ನು ಹಿಡಿದು ಸಂಸದರು ತೀವ್ರ ಪ್ರತಿಭಟನೆ ನಡೆಸಿದ್ದಾರೆ.
ಯಾರೊಬ್ಬರ ಇಚ್ಛೆ, ಮಹತ್ವಾಕಾಂಕ್ಷೆ ಮತ್ತು ಪೂರ್ವಾಗ್ರಹದ ಆಧಾರದ ಮೇಲೆ ಯಾವುದೇ ಕಾನೂನನ್ನು ಜಾರಿಗೊಳಿಸಬಾರದು, ಮನೇಗ್ರಾ ಯೋಜನೆಯನ್ನು ದುರ್ಬಲಗೊಳಿಸುವ ಮಸೂದೆಯನ್ನು ಹಿಂಪಡೆಯಬೇಕು ಎಂದು ಪ್ರಿಯಾಂಕಾ ಗಾಂಧಿ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಮನ್ರೇಗಾವನ್ನು 'ವಿಕಸಿತ್ ಭಾರತ್ ರೋಜ್ ಗಾರ್ ಆ್ಯಂಡ್ ಅಜೀವಿಕಾ ಮಿಷನ್- ಗ್ರಾಮೀಣ ಯೋಜನೆ (ವಿಬಿ ಜಿ ರಾಮ್ ಜಿ) ಎಂದು ಬದಲಿಸುವ ಮಸೂದೆಯನ್ನು ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಲೋಕಸಭೆಯಲ್ಲಿಂದು ಮಂಡಿಸಿದರು. ಈ ಮಸೂದೆಯು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯಿದೆ ಅಥವಾ MGNREGA ಅನ್ನು ಬದಲಿಸುವ ಗುರಿಯನ್ನು ಹೊಂದಿದೆ.
ಹೊಸ ಮಸೂದೆಗೆ ಪ್ರಿಯಾಂಕಾ ಗಾಂಧಿ ತೀವ್ರ ವಿರೋಧ: ಲೋಕಸಭೆಯಲ್ಲಿ ಕಾರ್ಯವಿಧಾನ ಮತ್ತು ವ್ಯವಹಾರ ನಡವಳಿಕೆಯ ನಿಯಮಗಳು ಸೆಕ್ಷನ್ 72(1) ಅಡಿಯಲ್ಲಿ ಮಸೂದೆಯನ್ನು ವಿರೋಧಿಸಿದ ಪ್ರಿಯಾಂಕಾ ಗಾಂಧಿ, ಮಸೂದೆಗೆ ನಾನು ಬಲವಾದ ಆಕ್ಷೇಪಣೆ ವ್ಯಕ್ತಪಡಿಸುತ್ತೇನೆ. ಗ್ರಾಮೀಣ ಭಾರತಕ್ಕೆ ಜೀವನೋಪಾಯವನ್ನು ಒದಗಿಸುವಲ್ಲಿ ಮತ್ತು ಗ್ರಾಮೀಣ ಆರ್ಥಿಕತೆಯನ್ನು ಬಲಪಡಿಸುವಲ್ಲಿ 20 ವರ್ಷಗಳಿಂದ ಮನರೇಗಾ ಯಶಸ್ವಿಯಾಗಿದೆ. ಇದು ಎಷ್ಟು ಕ್ರಾಂತಿಕಾರಿ ಕಾನೂನೆಂದರೆ, ಇದನ್ನು ತಂದಾಗ, ಸಂಸತ್ತಿನಲ್ಲಿರುವ ಎಲ್ಲ ರಾಜಕೀಯ ಪಕ್ಷಗಳು ಒಮ್ಮತದಿಂದ ಇದನ್ನು ಬೆಂಬಲಿಸಿದ್ದವು. ಇದು ಈ ದೇಶದ ಅತ್ಯಂತ ಬಡವರಿಗೆ ಒಂದು ವರ್ಷದಲ್ಲಿ 100 ದಿನಗಳ ಉದ್ಯೋಗವನ್ನು ಒದಗಿಸುತ್ತದೆ ಎಂದು ವಿವರಿಸಿದರು.
ಗ್ರಾಮೀಣ ಪ್ರದೇಶದ ಪ್ರತಿಯೊಬ್ಬ ವ್ಯಕ್ತಿಗೆ ವರ್ಷದಲ್ಲಿ 100 ದಿನಗಳ ವೇತನದ ಕೆಲಸ ಒದಗಿಸುವ ಮನ್ರೇಗಾ ಯೋಜನೆಯನ್ನು 2005 ರಲ್ಲಿ ಆಗಿನ ಯುಪಿಎ ಸರ್ಕಾರ ಜಾರಿಗೆ ತಂದಿತ್ತು. ಕಳೆದ ಎರಡು ದಶಕಗಳಲ್ಲಿ ಈ ಯೋಜನೆಯು ಗ್ರಾಮೀಣ ಆರ್ಥಿಕತೆಯ ಒಂದು ಗೇಮ್ ಚೇಂಜರ್ ಎಂದು ಪ್ರಶಂಸೆಗೆ ಪಾತ್ರವಾಗಿದೆ.
ಮಹಾತ್ಮಾ ಗಾಂಧಿ ನನ್ನ ಕುಟುಂಬದವರಲ್ಲ: ಕುಟುಂಬದ ಹೆಸರೆಂದು ಉಲ್ಲೇಖಿಸಿದ ಆಡಳಿತ ಪಕ್ಷದ ಸಂಸದರಿಗೆ ಉತ್ತರಿಸಿದ ಪ್ರಿಯಾಂಕಾ ಗಾಂಧಿ, ಮಹಾತ್ಮಾ ಗಾಂಧಿ ನನ್ನ ಕುಟುಂಬದವರಲ್ಲ. ಆದರೆ, ಅವರು ನನ್ನ ಕುಟುಂಬದ ಸದಸ್ಯರಿದ್ದಂತೆ. ಗಾಂಧಿ ಅವರನ್ನು ಇಡೀ ದೇಶವು ಅದೇ ರೀತಿ ಭಾವಿಸುತ್ತದೆ ಎಂದು ಹೇಳಿದರು. ಪ್ರಿಯಾಂಕಾ ಗಾಂಧಿಯ ಜೊತೆಗೆ, ಹಲವಾರು ವಿಪಕ್ಷಗಳ ಸಂಸದರು ಹೊಸ ಮಸೂದೆಯ ನಿಬಂಧನೆಗಳನ್ನು ವಿರೋಧಿಸಿದರು. ಕಾಂಗ್ರೆಸ್ ಸಂಸದ ಶಶಿ ತರೂರ್ ಕೂಡ ಮಸೂದೆಯನ್ನು ವಿರೋಧಿಸಿದ್ದು, ಮಹಾತ್ಮ ಗಾಂಧಿಯವರ ಹೆಸರನ್ನು ತೆಗೆದುಹಾಕುವುದು ‘ಅನೈತಿಕ’ಎಂದು ಹೇಳಿದರು.
ಕಾಂಗ್ರೆಸ್ ಗೆ ರಾಮನ ಸಮಸ್ಯೆ: ಬಿಜೆಪಿ ನಾಯಕ ಮತ್ತು ಮಾಜಿ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ, ಮಸೂದೆಗೆ ರಾಮನ ಹೆಸರಿಟ್ಟಿರುವುದು ಕಾಂಗ್ರೆಸ್‌ಗೆ ಸಮಸ್ಯೆಯಾಗಿದೆ. ರಾಮನ ಹೆಸರು ಸೇರಿಸುವುದನ್ನು ಅವರು ಸಹಿಸುವುದಿಲ್ಲ, ಅದಕ್ಕಾಗಿಯೇ ಇಂತಹ ಗದ್ದಲವನ್ನು ಸೃಷ್ಟಿಸುತ್ತಿದ್ದಾರೆ ಎಂದರು.
Advertisement