

ನವದೆಹಲಿ: ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರವು 2005ರಲ್ಲಿ ಜಾರಿಗೆ ತಂದಿದ್ದ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯನ್ನು (MGNREGA) ವಿಕಸಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಆಜೀವಿಕಾ ಮಿಷನ್ (VB-G RAM) ಎಂದು ಬದಲಿಸುವ ಬಿಜೆಪಿ ನೇತೃತ್ವದ ಕೇಂದ್ರದ ಕ್ರಮವನ್ನು ಕಾಂಗ್ರೆಸ್ ಸಂಸದ ಶಶಿ ತರೂರ್ ಮಂಗಳವಾರ ಟೀಕಿಸಿದ್ದಾರೆ.
ಇಂದು ಮಧ್ಯಾಹ್ನ ಲೋಕಸಭೆಯಲ್ಲಿ ಮಾತನಾಡಿದ ತರೂರ್, ವಿಬಿ-ಜಿ ರಾಮ್ ಎಂದು ಕರೆಯಲ್ಪಡುವ ಹೊಸ ಮಸೂದೆಯನ್ನು ವಿರೋಧಿಸಿದ್ದಾರೆ. ಈ ಮಸೂದೆಯು 25 ಹೆಚ್ಚುವರಿ ದಿನಗಳ ವೇತನದ ಕೆಲಸವನ್ನು ನೀಡುತ್ತದೆ. ಆದರೆ, ಆ ಆರ್ಥಿಕ ಹೊರೆಯ ಶೇ 40ರಷ್ಟನ್ನು ರಾಜ್ಯಗಳ ಮೇಲೆ ಹೇರುತ್ತದೆ.
ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ, ವಿಶೇಷವಾಗಿ ಆಪರೇಷನ್ ಸಿಂಧೂರ ಕಾರ್ಯಾಚರಣೆಯ ನಂತರ ಸಕಾರಾತ್ಮಕ ಹೇಳಿಕೆಗಳನ್ನು ನೀಡುತ್ತಿದ್ದ ನಂತರ ಕಾಂಗ್ರೆಸ್ ಜೊತೆಗಿನ ಶಶಿ ತರೂರ್ ಅವರ ಸಂಬಂಧ ಹದಗೆಟ್ಟಿತ್ತು. ಮಹಾತ್ಮ ಗಾಂಧಿಯವರ ಹೆಸರನ್ನು ತೆಗೆದುಹಾಕುವುದು 'ಅನೈತಿಕ' ಎಂದು ಕರೆದರು ಮತ್ತು ಅದೇ ಸಮಯದಲ್ಲಿ, ರಾಜಕೀಯ ಉದ್ದೇಶಗಳಿಗಾಗಿ ಶ್ರೀರಾಮನ ಹೆಸರನ್ನು ದುರುಪಯೋಗಪಡಿಸಿಕೊಳ್ಳಬಾರದು ಅಥವಾ ಅಗೌರವಿಸಬಾರದು' ಎಂದು ಸರ್ಕಾರವನ್ನು ಒತ್ತಾಯಿಸಿದರು.
ನಿನ್ನೆ ರಾತ್ರಿ ಟ್ವೀಟ್ ಮಾಡಿದ್ದ ಶಶಿ ತರೂರ್, 'ಗ್ರಾಮೀಣ ಭಾಗದ ಬಡವರಿಗಾಗಿ ಇರುವ ಯೋಜನೆಯಲ್ಲಿ ಮಹಾತ್ಮ ಗಾಂಧಿಯವರ ಹೆಸರನ್ನು ಬದಲಿಸುವುದು ಗಾಂಧಿಯವರ ಸ್ವ-ಆಡಳಿತ ಗ್ರಾಮಗಳ ದೃಷ್ಟಿಕೋನ ಮತ್ತು 'ರಾಮರಾಜ್ಯ' ಅಥವಾ ಆದರ್ಶಪ್ರಾಯ ಆಡಳಿತವನ್ನು ನಿರ್ಲಕ್ಷಿಸುತ್ತದೆ..." ಎಂದಿದ್ದರು.
'ಸದ್ಯ ಯಾವುದೇ ವಿಭಜನೆ ಇಲ್ಲದ ವಿಭಾಗವೊಂದನ್ನು ಸೃಷ್ಟಿಸುವ ಮೂಲಕ ಗಾಂಧಿ ಅವರ ಪರಂಪರೆಗೆ ನಾವು ಅಗೌರವ ತೋರಬಾರದು' ಎಂದು ಶಶಿ ತರೂರ್ ಹೇಳಿದ್ದರು.
ಸರ್ಕಾರದ ಈ ಕ್ರಮವನ್ನು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಕೂಡ ವಿರೋಧಿಸಿದರು ಮತ್ತು ಈ ಮಸೂದೆಯನ್ನು ಹಿಂಪಡೆಯಬೇಕೆಂದು ಒತ್ತಾಯಿಸಿದ ಅವರು, ಪ್ರತಿಯೊಂದು ಯೋಜನೆಯ ಹೆಸರನ್ನು ಬದಲಾಯಿಸುವ 'ಹುಚ್ಚನ್ನು' ಪ್ರಶ್ನಿಸಿದರು ಮತ್ತು ಪ್ರತಿ ಬಾರಿಯೂ ಉಂಟಾಗುವ ಹಣದ ವೆಚ್ಚವನ್ನು ಎತ್ತಿ ತೋರಿಸಿದರು.
'ಯಾವುದೇ ಮಸೂದೆಯನ್ನು ತರಾತುರಿಯಲ್ಲಿ ಅಂಗೀಕರಿಸಬಾರದು... ಈ ಮಸೂದೆಯನ್ನು ಹಿಂಪಡೆಯಬೇಕು. ಗ್ರಾಮೀಣ ಭಾಗದ ಆರ್ಥಿಕತೆಯನ್ನು ಬಲಪಡಿಸಲು MGNREGA ಯೋಜನೆಯು 20 ವರ್ಷಗಳಿಂದ ಯಶಸ್ವಿಯಾಗಿ ನಡೆಯುತ್ತಿದೆ. ಈ ಮಸೂದೆಯನ್ನು ಸ್ಥಾಯಿ ಸಮಿತಿಗೆ ಕಳುಹಿಸಬೇಕು' ಎಂದು ಒತ್ತಾಯಿಸಿದರು.
Advertisement