

ಮಹಾರಾಷ್ಟ್ರ: ತೆಗೆದುಕೊಂಡಿದ್ದ ಒಂದು ಲಕ್ಷ ರೂಪಾಯಿ ಸಾಲಕ್ಕೆ ಪ್ರತಿದಿನ 10,000 ಬಡ್ಡಿ ಸೇರಿದಂತೆ 74 ಲಕ್ಷ ರೂ. ಆಗಿದ್ದರಿಂದ ಮಹಾರಾಷ್ಟ್ರದ ರೈತರೊಬ್ಬರು,ಕಾಂಬೋಡಿಯಾಗೆ ತೆರಳಿ ತನ್ನ ಕಿಡ್ನಿ ಮಾರಾಟ ಮಾಡಿರುವ ಘಟನೆ ನಡೆದಿದೆ.
ಚಂದ್ರಾಪುರ ಜಿಲ್ಲೆಯ ರೈತ ರೋಶನ್ ಸದಾಶಿವ್ ಕುಡೆ, ಕೃಷಿಯಲ್ಲಿ ನಿರಂತರವಾಗಿ ನಷ್ಟ ಅನುಭವಿಸಿದ್ದು, ಡೈರಿ ವ್ಯವಹಾರ ಆರಂಭಿಸಲು ನಿರ್ಧರಿಸಿದ್ದಾರೆ. ಅದಕ್ಕಾಗಿ ಅನೇಕ ಸಾಲಗಾರರಿಂದ 1 ಲಕ್ಷ ರೂ. ಸಾಲ ತೆಗೆದುಕೊಂಡಿದ್ದಾರೆ. ಡೈರಿ ವ್ಯವಹಾರ ಆರಂಭಕ್ಕೂ ಮುನ್ನಾ ಅವರು ಸಾಲ ತೆಗೆದುಕೊಂಡಿದ್ದರು. ಆದರೆ, ಅವರು ಖರೀದಿಸಿದ್ದ ಹಸುಗಳು ಸಾವನ್ನಪ್ಪಿದ್ದವು. ಬೆಳೆ ನಷ್ಟ ಆಗಿದ್ದರಿಂದ ಸಾಲದ ಸಮಸ್ಯೆ ದಿನದಿಂದ ದಿನಕ್ಕೆ ಬಿಗಡಾಯಿಸಿತು.
ಸಾಲ ಕೊಟ್ಟವರು ಕುಡೆ ಹಾಗೂ ಅವರ ಕುಟುಂಬಕ್ಕೆ ಕಿರುಕುಳ ನೀಡಲು ಆರಂಭಿಸಿದ್ದಾರೆ. ತದನಂತರ ಅವರು ಸಾಲ ತೀರಿಸಲು ತನ್ನ ಜಮೀನು, ಟ್ರಾಕ್ಟರ್ ಮತ್ತಿತರ ಮನೆಯಲ್ಲಿದ್ದ ಮೌಲ್ಯಯುತ ವಸ್ತುಗಳನ್ನು ಮಾರಾಟ ಮಾಡಿದರು. ಆದರೆ, ಅದು ಸಾಕಾಗಿಲ್ಲ.
8 ಲಕ್ಷ ರೂಪಾಯಿಗೆ ಕಿಡ್ನಿ ಮಾರಾಟ: ಇನ್ನೂ ಸಾಲ ಉಳಿದಿದ್ದಾಗ ಕಿಡ್ನಿ ಮಾರಾಟ ಮಾಡುವಂತೆ ಸಾಲಕೊಟ್ಟಿದ್ದ ವ್ಯಕ್ತಿಯೊಬ್ಬ ಸಲಹೆ ನೀಡಿದ್ದಾನೆ. ಮಧ್ಯವರ್ತಿಯೊಬ್ಬರ ಮೂಲಕ ಕೊಲ್ಕತ್ತಾಗೆ ತೆರಳಿದ ಕುಡೆ, ಪರೀಕ್ಷೆ ನಡೆಸಿದ್ದಾರೆ. ತದನಂತರ ಕಾಂಬೋಡಿಯಾಗೆ ತೆರಳಿ, ಕಿಡ್ನಿ ತೆಗೆಸಿದ್ದು, ರೂ.8 ಲಕ್ಷಕ್ಕೆ ಮಾರಾಟ ಮಾಡಿದ್ದಾರೆ.
ಸಾಲ ಕೊಟ್ಟವರಿಂದ ಕಿರುಕುಳದ ಬಗ್ಗೆ ದೂರು ನೀಡಿದ್ದರೂ ಪೊಲೀಸರು ಯಾವುದೇ ಕ್ರಮ ಕೈಗೊಳ್ಳಲಿಲ್ಲ. ನಿರಂತರವಾಗಿ ಮಾನಸಿಕ ಹಾಗೂ ದೈಹಿಕವಾಗಿ ನೋವು ಅನುಭವಿಸುತ್ತಿರುವುದಾಗಿ ಎಂದು ಕುಡೆ ಹೇಳಿದ್ದಾರೆ.
ಈಗ ನನಗೆ ನ್ಯಾಯ ಸಿಗದಿದ್ದರೆ, ರಾಜ್ಯ ಸರ್ಕಾರದ ಪ್ರದಾನ ಕಚೇರಿ, ಮುಂಬೈನ ಮಂತ್ರಾಲಯದ ಎದುರು ನಾನು ಮತ್ತು ನನ್ನ ಕುಟುಂಬ ಬೆಂಕಿ ಹಚ್ಚಿಕೊಂಡು ಸಾಯುತ್ತೇವೆ ಎಂದು ಅವರು ಹೇಳಿದ್ದಾರೆ.
Advertisement