

ಬೆಳಗಾವಿ: ಗೃಹಲಕ್ಷ್ಮೀ ಯೋಜನೆಯ ಫಲಾನುಭವಿಗಳು 2,000 ರೂ.ಗಳ ಮಾಸಿಕ ಆರ್ಥಿಕ ನೆರವಿನ ಜೊತೆಗೆ 3 ಲಕ್ಷ ರೂ.ಗಳವರೆಗಿನ ಕಡಿಮೆ ಬಡ್ಡಿದರದ ಸಾಲಕ್ಕೂ ಅರ್ಹರಾಗಿರುತ್ತಾರೆ ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಶನಿವಾರ ಘೋಷಿಸಿದರು.
ವಿಶ್ವದ ಅತಿದೊಡ್ಡ ಸಾಮಾಜಿಕ ಕಲ್ಯಾಣ ಕಾರ್ಯಕ್ರಮಗಳಲ್ಲಿ ಗೃಹಲಕ್ಷ್ಮಿ ಯೋಜನೆ ಒಂದಾಗಿದ್ದು, ಯೋಜನೆಯನ್ನು ಯಶಸ್ವಿಯಾಗಿ ಜಾರಿಗೆ ತಂದಿದ್ದೇವೆ. ಗೃಹಲಕ್ಷ್ಮಿ ಬಹುಪಯೋಗಿ ಸಹಕಾರಿ ಸಂಘದ ಮೂಲಗ ಫಲಾನುಭವಿಗಳಿಗೆ 3 ಲಕ್ಷ ರೂ.ಗಳವರೆಗಿನ ಕಡಿಮೆ ಬಡ್ಡಿದರದ ಸಾಲ ಸಿಗಲಿದ್ದು, ಸಂಘಕ್ಕೆ ನವೆಂಬರ್ 19 ರಂದು ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಅಧಿಕೃತವಾಗಿ ಚಾಲನೆ ನೀಡಲಾಗುವುದು ಎಂದು ಹೇಳಿದರು.
ಈಗಾಗಲೇ 2,000 ಕ್ಕೂ ಹೆಚ್ಚು ಸದಸ್ಯರಿಂದ ಹಣ ಸಂಗ್ರಹಿಸಲಾಗಿದೆ. ಎಲ್ಲಾ ಹಣಕಾಸು ವಹಿವಾಟುಗಳನ್ನು ಫೋನ್‌ಪೇ ಮೂಲಕ ಪಾರದರ್ಶಕವಾಗಿ ನಡೆಸಲಾಗುವುದು. ಮುಂದಿನ ಮೂರು ತಿಂಗಳೊಳಗೆ ಎಲ್ಲಾ ಜಿಲ್ಲೆಗಳಿಗೆ ಸಂಘದ ವ್ಯಾಪ್ತಿಯನ್ನು ವಿಸ್ತರಿಸುವ ಗುರಿಯನ್ನು ಸರ್ಕಾರ ಹೊಂದಿದೆ ಎಂದು ತಿಳಿಸಿದರು.
ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಜನ್ಮ ದಿನಾಚರಣೆಯಾದ ನವೆಂಬರ್ 19 ರಂದು ನಡೆಯಲಿರುವ ಕಾರ್ಯಕ್ರಮದಲ್ಲಿ ಮೂರು ಪ್ರಮುಖ ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಗುವುದು. ಮೊದಲನೆಯದು ಗೃಹ ಲಕ್ಷ್ಮಿ ಬ್ಯಾಂಕ್, ಎರಡನೆಯದು 'ಅಕ್ಕ ಪಡೆ' (ಸಿಸ್ಟರ್ ಸ್ಕ್ವಾಡ್), ಮಹಿಳಾ ಸುರಕ್ಷತೆಗಾಗಿ ಹೊಸ ರಾಜ್ಯ ಮಟ್ಟದ ಉಪಕ್ರಮ, ಮತ್ತು ಮೂರನೆಯದು ಸೈಬರ್ ಅಪರಾಧಗಳ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು.
ವಿಶೇಷವಾಗಿ ಮಹಿಳೆಯರನ್ನು ಗುರಿಯಾಗಿಸಿಕೊಂಡು ಬೆಳೆಯುತ್ತಿರುವ "ಡೀಪ್‌ಫೇಕ್" ಮತ್ತು ಇತರ ಡಿಜಿಟಲ್ ಬೆದರಿಕೆಗಳ ಬಗ್ಗೆ, ಇದನ್ನು ಅಕ್ಕ ಪಡೆ ಮೇಲ್ವಿಚಾರಣೆ ನಡೆಯಲಿದೆ. ಅಕ್ಕ ಪಡೆ ಗೃಹರಕ್ಷಕರು ಮತ್ತು ಎನ್‌ಸಿಸಿ ಕೆಡೆಟ್‌ಗಳನ್ನು ಒಳಗೊಂಡಿದ್ದು, ಅವರು ಮಹಿಳೆಯರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಬೆಳಿಗ್ಗೆ 8 ರಿಂದ ರಾತ್ರಿ 8 ರವರೆಗೆ ಶಾಲೆಗಳು, ಕಾಲೇಜುಗಳು, ಉದ್ಯಾನವನಗಳು ಮತ್ತು ಮಾಲ್‌ಗಳಂತಹ ಸಾರ್ವಜನಿಕ ಸ್ಥಳಗಳಲ್ಲಿ ಗಸ್ತು ತಿರುಗುತ್ತಾರೆ. ರಾಜ್ಯಾದ್ಯಂತ ಸುಮಾರು 40,000 ಮಹಿಳೆಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ.
Advertisement